
ಕಳೆದ ಎರಡು ಮೂರು ತಿಂಗಳುಗಳು ಕನ್ನಡ ಸಿನಿಮಾ ಪಾಲಿಗೆ ಉತ್ತಮವಾಗಿದ್ದವರು. ‘ಎಕ್ಕ’, ‘ಜೂನಿಯರ್’ ಇಂದ ಆರಂಭವಾದ ಕನ್ನಡ ಸಿನಿಮಾಗಳ ಬಾಕ್ಸ್ ಆಫೀಸ್ ಯಶಸ್ಸನ್ನು ‘ಸು ಫ್ರಂ ಸೋ’ ಭಾರಿ ದೊಡ್ಡ ಮಟ್ಟಕ್ಕೆ ಕೊಂಡೊಯ್ಯಿತು. ಈಗ ‘ಏಳುಮಲೆ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ. ಅದರ ಬೆನ್ನಲ್ಲೆ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ‘ಕಾಂತಾರ: ಚಾಪ್ಟರ್ 1’ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ಅಕ್ಟೋಬರ್ 2 ರಂದು ಬಿಡುಗಡೆ ಆಗಲಿದ್ದು, ಸಿನಿಮಾ ಬಿಡುಗಡೆಗೆ ‘ಸು ಫ್ರಂ ಸೋ’ ಮಾದರಿಯನ್ನು ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಾಲೋ ಮಾಡಲಿದ್ದಾರೆ ಎನ್ನಲಾಗುತ್ತಿದೆ.
‘ಸು ಫ್ರಂ ಸೋ’ ಸಿನಿಮಾದ ಅಧಿಕೃತ ಬಿಡುಗಡೆಗೆ ಮುಂಚೆಯೇ ಸಿನಿಮಾದ ನಿರ್ಮಾಪಕ ರಾಜ್ ಬಿ ಶೆಟ್ಟಿ ರಾಜ್ಯದ ಹಲವು ನಗರಗಳಲ್ಲಿ ಪೇಯ್ಡ್ ಪ್ರೀಮಿಯರ್ಗಳನ್ನು ಆಯೋಜನೆ ಮಾಡಿದ್ದರು. ಇದರಿಂದ ಹಲವು ನಗರಗಳಲ್ಲಿ ಏಕಕಾಲಕ್ಕೆ ಪ್ರಚಾರದ ಜೊತೆಗೆ ಕಲೆಕ್ಷನ್ ಸಹ ಆಗಿತ್ತು. ಪ್ರಚಾರಕ್ಕೆ ಹೆಚ್ಚಿನ ಹಣವನ್ನು ಖರ್ಚು ಮಾಡುವ ಬದಲಿಗೆ ಜನರೇ ಸಿನಿಮಾಕ್ಕೆ ಪ್ರಚಾರ ನೀಡುವಂತೆ ಐಡಿಯಾ ಮಾಡಿದರು ರಾಜ್ ಬಿ ಶೆಟ್ಟಿ. ಇದೇ ಐಡಿಯಾ ಅನ್ನು ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೂ ಬಳಸಲು ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಮುಂದಾಗಿದೆ.
ಇದನ್ನೂ ಓದಿ:‘ಕಾಂತಾರ: ಚಾಪ್ಟರ್ 1’: ರಿಷಬ್ ಶೆಟ್ಟಿಯ ಕೊಂಡಾಡಿದ ಪರಭಾಷೆ ಖ್ಯಾತ ಕಲಾ ನಿರ್ದೇಶಕ
ಸಿನಿಮಾದ ಅಧಿಕೃತ ಬಿಡುಗಡೆ ಅಕ್ಟೋಬರ್ 2ಕ್ಕೆ ಇದೆಯಾದರೂ, ಮೂರು ದಿನ ಮುಂಚಿತವಾಗಿ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಪ್ರೀಮಿಯರ್ ಅನ್ನು ಭಾರತದ ಹಲವು ನಗರಗಳಲ್ಲಿ ಆಯೋಜಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಬೆಂಗಳೂರು, ಮುಂಬೈ, ಹೈದರಾಬಾದ್, ವಿಶಾಖಪಟ್ಟಣಂ, ಕಲ್ಕತ್ತ, ಚೆನ್ನೈ ಇನ್ನೂ ಹಲವಾರು ಪ್ರಮುಖ ನಗರಗಳಲ್ಲಿ ವಿಶೇಷ ಪ್ರೀಮಿಯರ್ ಶೋಗಳನ್ನು ಹೊಂಬಾಳೆ ಫಿಲಮ್ಸ್ ಆಯೋಜನೆ ಮಾಡಲಿದ್ದು, ಈ ಶೋಗಳ ಟಿಕೆಟ್ ದರವೂ ಸಹ ಹೆಚ್ಚಿರಲಿದೆಯಂತೆ. ಇದರ ಮೂಲಕ ಬಾಕ್ಸ್ ಆಫೀಸ್ ಕಲೆಕ್ಷನ್ ಉತ್ತಮಗೊಳ್ಳುವ ಜೊತೆಗೆ ಸಿನಿಮಾಕ್ಕೆ ಪುಕ್ಕಟೆ ಪ್ರಚಾರವೂ ಸಿಗಲಿದೆ.
ಶೆಟ್ಟಿ ಗ್ಯಾಂಗ್ನವರು ಪ್ರೀಮಿಯ್ ಶೋಗಳನ್ನು ಮೊದಲಿನಿಂದಲೂ ಚೆನ್ನಾಗಿ ಬಳಸಿಕೊಂಡು ಬರುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಸಹ ತಮ್ಮ ನಿರ್ಮಾಣದ ‘777 ಚಾರ್ಲಿ’ ಸಿನಿಮಾದ ಪ್ರೀಮಿಯರ್ ಶೋಗಳನ್ನು ಹಲವು ಪ್ರಮುಖ ನಗರಗಳಲ್ಲಿ ಆಯೋಜನೆ ಮಾಡಿದ್ದರು. ಪ್ರೀಮಿಯರ್ ಶೋಗಳಿಂದಲೇ ದೊಡ್ಡ ಮೊತ್ತದ ಕಲೆಕ್ಷನ್ ಅನ್ನು ಅವರು ಮಾಡಿಕೊಂಡಿದ್ದರು. ಅದಕ್ಕೆ ಮುಂಚೆ ‘ಅವನೇ ಶ್ರೀಮನ್ನಾರಾಯಣ’, ಅವರ ಸಹ ನಿರ್ಮಾಣದ ‘ನೋಗರಾಜ್’ ಸಿನಿಮಾಗಳದ್ದೂ ಪೇಯ್ಡ್ ಪ್ರೀಮಿಯರ್ ಆಯೋಜನೆ ಮಾಡಿದ್ದರು.
ಈಗ ರಿಷಬ್ ಶೆಟ್ಟಿ ಸಹ ಅದೇ ಯೋಜನೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಬಗ್ಗೆ ದೇಶದಾದ್ಯಂತ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಸಿನಿಮಾಕ್ಕಾಗಿ ಜನ ಕಾಯುತ್ತಿದ್ದಾರೆ ಹಾಗಾಗಿ ಈ ಸಿನಿಮಾಕ್ಕೆ ಹೆಚ್ಚಿನ ಪ್ರಚಾರದ ಅಗತ್ಯವಿಲ್ಲ. ಅಲ್ಲದೆ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಾಗಿರುವ ಕಾರಣ, ಪೇಯ್ಡ್ ಪ್ರೀಮಿಯರ್ಗಳಿಗೆ ಸುಲಭವಾಗಿ ಜನ ಬರುತ್ತಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ