‘ಕಾಂತಾರ: ಚಾಪ್ಟರ್ 1’: ರಿಷಬ್ ಶೆಟ್ಟಿಯ ಕೊಂಡಾಡಿದ ಪರಭಾಷೆ ಖ್ಯಾತ ಕಲಾ ನಿರ್ದೇಶಕ
Kantara Chapter 1: ರಿಷಬ್ ಶೆಟ್ಟಿ ನಿರ್ದೇಶಿಸಿ, ಹೊಂಬಾಳೆ ನಿರ್ಮಾಣ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಿದೆ. ಹಲವು ಖ್ಯಾತ ತಂತ್ರಜ್ಞರು ಈ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ತೆಲುಗು, ತಮಿಳು, ಮಲಯಾಳಂನ ಕೆಲ ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ಕೆಲಸ ಮಾಡಿರುವ ತಂತ್ರಜ್ಞರೊಬ್ಬರು ರಿಷಬ್ ಶೆಟ್ಟಿಯನ್ನು ಹೊಗಳಿ, ಕೊಂಡಾಡಿದ್ದಾರೆ.

‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. 2022 ರಲ್ಲಿ ಬಿಡುಗಡೆ ಆಗಿದ್ದ ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ಇದಾಗಿದೆ. ಸಿನಿಮಾದ ಚಿತ್ರೀಕರಣವನ್ನು ರಿಷಬ್ ಶೆಟ್ಟಿ ಅವರು ತಮ್ಮ ಹುಟ್ಟೂರು ಕೆರಾಡಿಯಲ್ಲಿಯೇ ಮಾಡಿದ್ದಾರೆ. ಅದರ ಹೊರತಾಗಿ ಕುಂದಾಪುರ, ಕರಾವಳಿಯ ಇತರೆ ಕೆಲವು ಭಾಗಗಳಲ್ಲಿ ಮಾಡಲಾಗಿದೆ. ಹಾಗೆಂದು ಇದು ಸಾಮಾನ್ಯ ಸಿನಿಮಾ ಅಲ್ಲ. ಸಿನಿಮಾಕ್ಕೆ ಭಾರಿ ದೊಡ್ಡ ಪ್ರಮಾಣದ ಬಜೆಟ್ ಅನ್ನು ಖರ್ಚು ಮಾಡಲಾಗಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ಕೆಲಸ ಮಾಡಿರುವ ಪ್ರೊಡಕ್ಷನ್ ಡಿಸೈನರ್ ಒಬ್ಬರು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ಮಲಯಾಳಂ, ತೆಲುಗು ಹಾಗೂ ತಮಿಳಿನ ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡಿರುವ ಬಂಗ್ಲನ್ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ‘ರಿಷಬ್ ಶೆಟ್ಟಿ, ‘ಕಾಂತಾರ: ಚಾಪ್ಟರ್ 1’ ಸಿನಿಮಾದ ನರೇಷನ್ ನೀಡುವಾಗ ಒಂದು ರೀತಿ ನಾನು ಶಿಕ್ಷಣ ಪಡೆಯುತ್ತಿದ್ದೇನೆ ಎನಿಸಿತು. ಅಷ್ಟು ಅದ್ಭುತವಾಗಿ, ಮಗುವಿಗೆ ಹೇಳಿಕೊಡುವ ರೀತಿಯಲ್ಲಿ ಅವರು ಕತೆ ನರೇಷನ್ ಮಾಡಿದ್ದರು’ ಎಂದಿದ್ದಾರೆ.
ರಿಷಬ್ ಶೆಟ್ಟಿಯವರು ಕೈಯಲ್ಲಿ, ಕುಂದಾಪುರಕ್ಕೆ ಜೀವ ಬಂದಂತಾಗಿದೆ. ಸಿನಿಮಾ ಶೂಟ್ ಮಾಡಿದ ಪ್ರತಿ ಸ್ಥಳವೂ ಉಸಿರಾಡುವ ನಿಜ ವ್ಯಕ್ತಿಯಂತಾಗಿದೆ. ಸಿನಿಮಾದ ಪ್ರತಿ ವಸ್ತುವೂ ಒಂದೊಂದು ಕತೆ ಹೇಳುತ್ತದೆ. ಸಿನಿಮಾದಲ್ಲಿ ನೆಲವೂ ಸಹ ಕತೆ ಹೇಳುತ್ತದೆ. ಪ್ರತಿ ದೃಶ್ಯವೂ ಅದ್ಭುತವಾದ ಕಲಾಸೃಷ್ಟಿಯಾಗಿದೆ’ ಎಂದಿದ್ದಾರೆ ಬಂಗ್ಲನ್. ರಿಷಬ್ ಶೆಟ್ಟಿ ಜೊತೆ ಮೊದಲ ಭೇಟಿ ಬಗ್ಗೆ ಮಾತನಾಡಿರುವ ಬಂಗ್ಲನ್, ‘ಸಿನಿಮಾಟೊಗ್ರಾಫರ್ ಅರವಿಂದ್ ಕಶ್ಯಪ್ ಅವರು ನನ್ನನ್ನು ಮೊದಲ ಬಾರಿ ರಿಷಬ್ ಶೆಟ್ಟಿಗೆ ಭೇಟಿ ಮಾಡಿಸಿದರು. ಆಗಲೇ ನನಗೆ ಈ ವ್ಯಕ್ತಿ ವಿಶೇಷವಾದ ವ್ಯಕ್ತಿ ಎನಿಸಿತ್ತು’ ಎಂದಿದ್ದಾರೆ.
ಇದನ್ನೂ ಓದಿ:ಲೂಸಿಯಾದಲ್ಲಿ ರಿಷಬ್ ಶೆಟ್ಟಿ ಮಾಡಿದ ಪಾತ್ರ ನೆನಪಿದೆಯೇ? 12 ವರ್ಷಗಳಲ್ಲಿ ಅದೆಷ್ಟು ಬದಲಾವಣೆ
ಮೊದಲ ಬಾರಿ ನಾವು ಕುಂದಾಪುರದಲ್ಲಿ ಭೇಟಿ ಆದೆವು. ಅದಾದ ಬಳಿಕ ರಿಷಬ್ ಅವರು ನನಗೆ ಕತೆ ಹೇಳಲು ಸುಮಾರು ಒಂದು ತಿಂಗಳು ಸಮಯ ತೆಗೆದುಕೊಂಡರು. ಕತೆ ಹೇಳುವ ಮುಂಚೆ ರಿಷಬ್ ಅವರು ನನ್ನನ್ನು ಕರಾವಳಿ, ಪಶ್ಚಿಮ ಘಟ್ಟ, ಸಮುದ್ರ ತೀರ ಎಲ್ಲ ಕಡೆ ಕರೆದುಕೊಂಡು ಹೋದರು. ಅಲ್ಲಿಯ ಜನ, ಅವರ ಸಂಸ್ಕೃತಿ, ಆಚರಣೆಗಳ ಮಹತ್ವ ಎಲ್ಲದರ ಪರಿಚಯ ಮಾಡಿಸಿದರು. ಅದಾದ ಬಳಿಕ ಕತೆ ಹೇಳಿದರು. ನನ್ನ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಸಿನಿಮಾದ ಕತೆ ನರೇಷನ್ ಒಂದು ರೀತಿ ಶಿಕ್ಷಣದಂತೆ ಭಾಸವಾಯ್ತು’ ಎಂದಿದ್ದಾರೆ ಬಂಗ್ಲನ್.
‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 02 ರಂದು ಬಿಡುಗಡೆ ಆಗಲಿದೆ. ಸಿನಿಮಾಕ್ಕೆ ಹೊಂಬಾಳೆ ಫಿಲಮ್ಸ್ ಬಂಡವಾಳ ಹಾಕಿದ್ದು, ಸಿನಿಮಾದ ಪ್ರೀ ರಿಲೀಸ್ ಬ್ಯುಸಿನೆಸ್ ಚಾಲ್ತಿಯಲ್ಲಿದೆ. ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅದ್ಧೂರಿಯಾಗಿ ನಡೆಯುವ ಸಾಧ್ಯತೆ ಇದೆ. ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿ. ಸಿನಿಮಾನಲ್ಲಿ ಗುಲ್ಷನ್ ದೇವಯ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನವನ್ನೂ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




