ಈಗಾಗಲೇ 2024ರಲ್ಲಿ ನಾಲ್ಕು ತಿಂಗಳು ಪೂರ್ಣಗೊಂಡಿದೆ. ಈ ಅವಧಿಯಲ್ಲಿ ಕನ್ನಡ ಚಿತ್ರರಂಗದಲ್ಲಿ (Kannada Film Industry) ಬರೋಬ್ಬರಿ 80ಕ್ಕೂ ಅಧಿಕ ಸಿನಿಮಾಗಳು ರಿಲೀಸ್ ಆಗಿವೆ. ಆದರೆ, ಪ್ರೇಕ್ಷಕರು ಕೈ ಹಿಡಿದಿದ್ದು ಕೆಲವೇ ಕೆಲವು ಸಿನಿಮಾಗಳಿಗೆ ಮಾತ್ರ. ಈ ಅವಧಿಯಲ್ಲಿ ಸ್ಟಾರ್ ಸಿನಿಮಾ ಎಂದು ರಿಲೀಸ್ ಆಗಿದ್ದು ಕೂಡ ಕಡಿಮೆಯೇ. ಹಾಗಾದರೆ ಈ ವರ್ಷ ರಿಲೀಸ್ ಆಗಿ ಗೆಲುವಿನ ನಗೆ ಬೀರಿದ ಸಿನಿಮಾಗಳು ಎಷ್ಟು ಎನ್ನುವ ಬಗ್ಗೆ ಇಲ್ಲಿದೆ ವಿವರ.
2023 ಅಂತ್ಯ ಸ್ಯಾಂಡಲ್ವುಡ್ ಪಾಲಿಗೆ ವಿಶೇಷ ಎನಿಸಿಕೊಂಡಿತ್ತು. ಇದಕ್ಕೆ ಕಾರಣವಾಗಿದ್ದು ದರ್ಶನ್ ನಟನೆಯ ‘ಕಾಟೇರ’ ಚಿತ್ರ. ದರ್ಶನ್ ನಟನೆಯ ಈ ಸಿನಿಮಾ ದೊಡ್ಡ ಗೆಲುವು ಕಂಡಿತು. ಇದೇ ಜೋಶ್ನಲ್ಲಿ 2024ರಲ್ಲಿ ಕನ್ನಡ ಚಿತ್ರಗಳು ಒಂದಾದ ಮೇಲೆ ಒಂದರಂತೆ ಬಿಡುಗಡೆ ಆಗೋಕೆ ಆರಂಭಿಸಿದವು. ಆದರೆ, ಜನರು ಮೆಚ್ಚಿಕೊಂಡ ಸಿನಿಮಾಗಳು ತುಂಬಾನೇ ಕಡಿಮೆ.
ಈ ವರ್ಷ ಜನಪ್ರಿಯ ನಟರ ಸಿನಿಮಾ ಎಂದು ರಿಲೀಸ್ ಆಗಿದ್ದು ದಿಗಂತ್, ಯೋಗೇಶ್ ನಟನೆಯ ‘ಬ್ಯಾಚುಲರ್ ಪಾರ್ಟಿ’, ಚಿಕ್ಕಣ್ಣ ನಟನೆಯ ‘ಉಪಾಧ್ಯಕ್ಷ’, ಜಗ್ಗೇಶ್ ನಟನೆಯ ‘ರಂಗನಾಯಕ’, ಶರಣ್ ನಟನೆಯ ‘ಅವತಾರ ಪುರುಷ 2’, ಶಿವಣ್ಣ ನಟನೆಯ ‘ಕರಟಕ ಧಮನಕ’ ಸಿನಿಮಾ ರಿಲೀಸ್ ಆಗಿದೆ. ಇದು ಜನಪ್ರಿಯ ಹೀರೋಗಳ ಸಿನಿಮಾಗಳು. ಉಳಿದ ಬಹುತೇಕ ಎಲ್ಲವೂ ಹೊಸ ಹೀರೋಗಳ ಸಿನಿಮಾಗಳೇ.
ಶಿವರಾಜ್ಕುಮಾರ್, ಜಗ್ಗೇಶ್, ಶರಣ್ ನಟನೆಯ ಸಿನಿಮಾಗಳು ಮಾತ್ರ ಈ ವರ್ಷ ರಿಲೀಸ್ ಆಗಿವೆ. ಉಳಿದಂತೆ ಯಶ್, ದರ್ಶನ್, ಸುದೀಪ್, ಧ್ರುವ ಅವರ ಸಿನಿಮಾಗಳು ಬಿಡುಗಡೆ ಆಗಿಲ್ಲ. ಯಶ್ ಸಿನಿಮಾ ಹೊರತುಪಡಿಸಿ ಉಳಿದ ಯಾವ ಹೀರೋಗಳ ಸಿನಿಮಾಗಳ ರಿಲೀಸ್ ಡೇಟ್ ಕೂಡ ಘೋಷಣೆ ಆಗಿಲ್ಲ. ಶಿವರಾಜ್ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ ಆಗಸ್ಟ್ 15ರಂದು ರಿಲೀಸ್ ಆಗುತ್ತಿದೆ. ಅಲ್ಲಿವರೆಗೆ ಯಾವುದೇ ದೊಡ್ಡ ಹೀರೋಗಳ ಸಿನಿಮಾ ರಿಲೀಸ್ ಆಗುತ್ತಿಲ್ಲ.
ಜನವರಿ ತಿಂಗಳಲ್ಲಿ 15 ಸಿನಿಮಾಗಳು ರಿಲೀಸ್ ಆಗಿವೆ. ಫೆಬ್ರವರಿಯಲ್ಲಿ 28 ಸಿನಿಮಾಗಳು ಬಿಡುಗಡೆ ಕಂಡಿವೆ. ಮಾರ್ಚ್ನಲ್ಲಿ ಬರೋಬ್ಬರಿ 27 ಸಿನಿಮಾಗಳು ಬಿಡುಗಡೆ ಆಗಿವೆ. ಏಪ್ರಿಲ್ನಲ್ಲಿ 17 ಸಿನಿಮಾಗಳು ರಿಲೀಸ್ ಆಗಿವೆ. ಈ ಮೂಲಕ ಒಟ್ಟೂ 80ಕ್ಕೂ ಅಧಿಕ ಸಿನಿಮಾಗಳು ಬಿಡುಗಡೆ ಆಗಿವೆ. ಇದರ ಜೊತೆಗೆ ಕೆಲವು ಸಿನಿಮಾಗಳು ಮರುಬಿಡುಗಡೆ ಆಗಿದೆ.
ಇದನ್ನೂ ಓದಿ: ಶಾಶ್ವತ ಮಾತ್ರವಲ್ಲ ತಾತ್ಕಾಲಿಕವಾಗಿಯೂ ಬಂದ್ ಆಗುತ್ತಿವೆ ಥಿಯೇಟರ್ಗಳು; ಕಾರಣವೇನು?
ಚಿಕ್ಕಣ್ಣ ನಟನೆಯ ‘ಉಪಾಧ್ಯಕ್ಷ’ ಸಿನಿಮಾ ಗೆದ್ದಿದೆ. ಯುವ ರಾಜ್ಕುಮಾರ್ ನಟನೆಯ ‘ಯುವ’ ಸಿನಿಮಾ ತಂಡ ಕೂಡ ಸಕ್ಸಸ್ ಪಾರ್ಟಿ ಮಾಡಿತ್ತು. ಶಿವಣ್ಣ ನಟನೆಯ ‘ಕರಟಕ ಧಮನಕ’ ಚಿತ್ರ ಕೂಡ ಮೆಚ್ಚುಗೆ ಪಡೆಯಿತು. ವಿನಯ್ ರಾಜ್ಕುಮಾರ್ ನಟನೆಯ ‘ಒಂದು ಸರಳಪ್ರೇಮಕಥೆ’ ಯಶಸ್ಸಿನ ನಗೆ ಬೀರಿದೆ. ‘ಬ್ಲಿಂಕ್’ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.