‘ರಣಹದ್ದು’ ಸಿನಿಮಾಗೆ ಅಪ್ಪ ನಿರ್ದೇಶಕ, ಮಗ ಹೀರೋ, ಮತ್ತೊಬ್ಬ ಮಗ ವಿಲನ್
‘ರಣಹದ್ದು’ ಸಿನಿಮಾಗೆ ಪ್ರಸನ್ನ ಕುಮಾರ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಹಾಡುಗಳು ಮತ್ತು ಟೀಸರ್ ಬಿಡುಗಡೆ ಮಾಡಲಾಯಿತು. ಶಶಾಂಕ್, ಸೂರಜ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರರಂಗದ ಗಣ್ಯರು ಟೀಸರ್, ಸಾಂಗ್ಸ್ ಅನಾವರಣ ಮಾಡಿ ಶುಭ ಹಾರೈಸಿದ್ದಾರೆ. ‘ರಣಹದ್ದು’ ಚಿತ್ರದ ಶೂಟಿಂಗ್ ಮುಗಿದಿದ್ದು, ಬಿಡುಗಡೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ.
ಜಂಗ್ಲಿ ಪ್ರಸನ್ನ (Jungli Prasanna) ಅಲಿಯಾಸ್ ಪ್ರಸನ್ನ ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಕಳೆದ 40 ವರ್ಷಗಳಿಂದ ಪೋಷಕ ಕಲಾವಿದನಾಗಿ ಗುರುತಿಸಿಕೊಂಡಿದ್ದಾರೆ. ನೂರಾರು ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು ‘ರಣಹದ್ದು’ (Rana Haddu) ಸಿನಿಮಾದ ಮೂಲಕ ಡೈರೆಕ್ಟರ್ ಆಗಿ ಬಡ್ತಿ ಪಡೆದಿದ್ದಾರೆ. ಈ ಸಿನಿಮಾದ ನಿರ್ಮಾಣದ ಜವಾಬ್ದಾರಿ ಕೂಡ ಅವರದ್ದೇ. ವಿಶೇಷ ಏನೆಂದರೆ, ಪ್ರಸನ್ನ ಕುಮಾರ್ ಅವರ ಮಕ್ಕಳಾದ ಶಶಾಂಕ್ ಮತ್ತು ಸೂರಜ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಒಬ್ಬ ಮಗ ಹೀರೋ ಆಗಿ, ಮತ್ತೊಬ್ಬ ಮಗ ವಿಲನ್ ಆಗಿ ಈ ಸಿನಿಮಾದ (Kannada Cinema) ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಸಿಂಗರ್ ಶ್ರೀನಿವಾಸ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ‘ರಣಹದ್ದು’ ಸಿನಿಮಾ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..
‘ರಣಹದ್ದು’ ಸಿನಿಮಾದ ಹಾಡುಗಳು ಮತ್ತು ಟೀಸರ್ ಅನ್ನು ‘ಸಿರಿ ಮ್ಯೂಸಿಕ್’ ಮೂಲಕ ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಡಾ. ರಾಜ್ಕುಮಾರ್ ಅವರ ಪುತ್ರಿ ಲಕ್ಷ್ಮೀ ಗೋವಿಂದರಾಜು ಅವರು ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್.ಎ. ಗೋವಿಂದರಾಜು, ಎಸ್.ಎ. ಚಿನ್ನೇಗೌಡ, ಎಸ್.ಎ. ಶ್ರೀನಿವಾಸ್ ಈ ಸಿನಿಮಾದ ಟೀಸರ್ ಅನಾವರಣ ಮಾಡಿದರು. ಜನಪ್ರಿಯ ನಟ ಶರಣ್ ಅವರು ಹಾಡುಗಳನ್ನು ಬಿಡುಗಡೆ ಮಾಡಿ ಶುಭ ಕೋರಿದರು.
ಟೀಸರ್ ಮತ್ತು ಸಾಂಗ್ಸ್ ಬಿಡುಗಡೆ ಕಾರ್ಯಕ್ರಮಕ್ಕೆ ಚಿತ್ರರಂಗದ ಅನೇಕ ಗಣ್ಯರು ಸಾಕ್ಷಿಯಾದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್, ನಿರ್ದೇಶಕರ ಸಂಘದ ಅಧ್ಯಕ್ಷ ಎನ್.ಆರ್.ಕೆ ವಿಶ್ವನಾಥ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಸಿರಿ ಮ್ಯೂಸಿಕ್ನ ಸುರೇಶ್ ಚಿಕ್ಕಣ್ಣ ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಪ್ರಸನ್ನ ಕುಮಾರ್ (ಜಂಗ್ಲಿ ಪ್ರಸನ್ನ) ಜೊತೆಗಿನ ಒಡನಾಟವನ್ನು ಅವರೆಲ್ಲ ನೆನಪಿಸಿಕೊಂಡರು.
ಇದನ್ನೂ ಓದಿ: ‘ಅಂಜನಿಪುತ್ರ’, ‘ಪವರ್’ ಒಂದೇ ದಿನ ಮರು ಬಿಡುಗಡೆ ಆಗಿದ್ದಕ್ಕೆ ಅಪ್ಪು ಫ್ಯಾನ್ಸ್ ಬೇಸರ
ಬಳಿಕ ಪ್ರಸನ್ನ ಕುಮಾರ್ ಮಾತನಾಡಿದರು. ‘ನನಗೆ ಕಳೆದ 40 ವರ್ಷಗಳಿಂದ ಕನ್ನಡ ಚಿತ್ರರಂಗ ಅನ್ನ ಹಾಕುತ್ತಿದೆ. ನಾನು ಮತ್ತು ನನ್ನ ಕುಟುಂಬದವರು ಚಿತ್ರರಂಗಕ್ಕೆ ಚಿರಋಣಿ. ಕೆಲವು ವರ್ಷಗಳ ಹಿಂದೆ ಆ್ಯಕ್ಸಿಡೆಂಟ್ನಲ್ಲಿ ನನ್ನ ಕಾಲಿಗೆ ಪೆಟ್ಟಾಯಿತು. ಆಗ ಬಹಳ ಯೋಚನೆ ಮಾಡುತ್ತಿದೆ. ಸ್ವಲ್ಪ ದಿನಗಳ ಬಳಿಕ ಸಿನಿಮಾವೊಂದರ ನಿರ್ಮಾಣದ ಜೊತೆಗೆ ನಿರ್ದೇಶನ ಕೂಡ ಮಾಡಬೇಕು ಎಂಬ ಆಸೆ ಉಂಟಾಯಿತು. ಅದನ್ನು ಮಕ್ಕಳ ಬಳಿ ಹೇಳಿದೆ. ನನ್ನ ಆಸೆಗೆ ಮಕ್ಕಳು ನೀರೆರೆದರು’ ಎಂದು ಅವರು ಹೇಳಿದ್ದಾರೆ.
‘ಈ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ನನ್ನ ಇಬ್ಬರು ಮಕ್ಕಳು ಚಿತ್ರರಂಗವನ್ನು ಪ್ರವೇಶಿಸಿದ್ದಾರೆ. ಅನೇಕ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹಣವಿಲ್ಲದ ವ್ಯಕ್ತಿಯನ್ನು ಈ ಸಮಾಜ ಹೇಗೆ ನೋಡುತ್ತದೆ ಎಂಬುದೇ ಈ ಸಿನಿಮಾ ಕಥಾ ಸಾರಾಂಶ. ಪ್ರೇಕ್ಷಕರಿಗೆ ಬೇಕಾದ ಎಲ್ಲ ಅಂಶಗಳು ಈ ಸಿನಿಮಾದಲ್ಲಿವೆ. ಶೂಟಿಂಗ್ ಮುಕ್ತಾಯವಾಗಿದೆ. ಬಿಡುಗಡೆಗೆ ತಯಾರಿ ನಡೆಯುತ್ತಿದೆ’ ಎಂದು ಪ್ರಸನ್ನ ಕುಮಾರ್ ಮಾಹಿತಿ ನೀಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.