ಉಪೇಂದ್ರ ನಿರ್ದೇಶನದ ಕಲ್ಟ್ ಕ್ಲಾಸಿಕ್ ಸಿನಿಮಾ ಮರು ಬಿಡುಗಡೆ
ಉಪೇಂದ್ರ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿದ್ದ ‘ಎ’ ಸಿನಿಮಾ ಇದೀಗ ಮರು ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ವಿಶೇಷತೆ ಏನು? ಸಿನಿಮಾ ಮೊದಲು ಬಿಡುಗಡೆ ಆಗಿದ್ದಾಗ ಗಳಿಸಿದ್ದೆಷ್ಟು?

ನೆರೆಯ ತೆಲುಗು ಚಿತ್ರರಂಗದಲ್ಲಿ (Tollywood) ಸ್ಟಾರ್ ನಟರ ಸಿನಿಮಾಗಳ ಮರು ಬಿಡುಗಡೆ ಮಾಡುವ ಟ್ರೆಂಡ್ ಶುರುವಾಗಿದೆ. ಸ್ಟಾರ್ ನಟರ ಸಿನಿಮಾಗಳು ಮಾತ್ರವೇ ಅಲ್ಲದೆ ಬಿಡುಗಡೆ ಆದಾಗ ಹೊಸ ಅಲೆ ಎಬ್ಬಿಸಿದ್ದ ಸಿನಿಮಾಗಳನ್ನು ಮರು ಬಿಡುಗಡೆ ಮಾಡಿ ಭಾರಿ ಕಮಾಯಿಯನ್ನೇ ತೆಲುಗಿನ ನಿರ್ಮಾಪಕರು ಇತ್ತೀಚೆಗೆ ಮಾಡುತ್ತಿದ್ದಾರೆ. ಇದೀಗ ಈ ಟ್ರೆಂಡ್ ಕನ್ನಡಕ್ಕೂ ಹಬ್ಬಿದೆ. ಕನ್ನಡದಲ್ಲಿ ಆಯ್ದೆ ಕೆಲವು ಸಿನಿಮಾಗಳನ್ನಷ್ಟೆ ಮರು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಈಗ ಲೋಕಸಭೆ ಚುನಾವಣೆ ಹಾಗೂ ಐಪಿಎಲ್ ಕಾರಣದಿಂದ ಹೊಸ ಸಿನಿಮಾಗಳ ಬಿಡುಗಡೆ ಇಲ್ಲವಾದ ಕಾರಣ ಮತ್ತೆ ಹಳೆ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರುಗಳು ಮುಂದಾಗಿದ್ದಾರೆ.
ನಿನ್ನೆ (ಮೇ 10) ಯಷ್ಟೆ ದಿವಂಗತ ಪುನೀತ್ ರಾಜ್ಕುಮಾರ್ ನಟಿಸಿದ್ದ ಎರಡು ಸಿನಿಮಾಗಳು ಒಟ್ಟೊಟ್ಟಿಗೆ ಬಿಡುಗಡೆ ಆಗಿದ್ದವು. ಅಪ್ಪು ಹಾಗೂ ತ್ರಿಷಾ ನಟಿಸಿದ್ದ ‘ಪವರ್’ ಹಾಗೂ ಪುನೀತ್ ರಾಜ್ಕುಮಾರ್ ಹಾಗೂ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದ ‘ಅಂಜನಿಪುತ್ರ’ ಸಿನಿಮಾಗಳು ನಿನ್ನೆ ಬಿಡುಗಡೆ ಆಗಿದ್ದವು. ತಮ್ಮ ಮೆಚ್ಚಿನ ನಾಯಕನ ಎರಡು ಸಿನಿಮಾಗಳನ್ನು ಒಂದೇ ದಿನ ಬಿಡುಗಡೆ ಮಾಡಿ, ಪರಸ್ಪರ ಸಿನಿಮಾಗಳು ಸ್ಪರ್ಧೆಗಳು ಬೀಳುವಂತೆ ಮಾಡಿದ ನಿರ್ಮಾಪಕರ ವಿರುದ್ಧ ಅಪ್ಪು ಅಭಿಮಾನಿಗಳು ಅಸಮಾಧಾನವನ್ನು ಹೊರಹಾಕಿದರು.
ಇದೀಗ ಉಪೇಂದ್ರ ನಟಿಸಿ, ನಿರ್ದೇಶನ ಮಾಡಿದ್ದ ಕಲ್ಟ್ ಕ್ಲಾಸಿಕ್ ಸಿನಿಮಾ ಒಂದನ್ನು ಮರು ಬಿಡುಗಡೆ ಮಾಡಲಾಗಿದೆ. ಉಪೇಂದ್ರ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿ, ನಿರ್ದೇಶನವನ್ನೂ ಮಾಡಿದ್ದ ‘ಎ’ ಸಿನಿಮಾವನ್ನು ಇದೀಗ ಮರು ಬಿಡುಗಡೆ ಮಾಡಲಾಗುತ್ತಿದೆ. 1998 ರಲ್ಲಿ ಈ ಸಿನಿಮಾ ಮೊದಲ ಬಾರಿಗೆ ಬಿಡುಗಡೆ ಆಗಿತ್ತು. ಆ ವರೆಗೆ ಕೇವಲ ನಿರ್ದೇಶಕನಾಗಿ ಹಾಗೂ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳನ್ನು ಮಾಡುತ್ತಿದ್ದ ಉಪ್ಪಿ ಈ ಸಿನಿಮಾ ಮೂಲಕ ಮೊದಲ ಬಾರಿಗೆ ನಾಯಕ ನಟರಾದರು. ಇದೀಗ ಈ ಸಿನಿಮಾ ಮೇ 17 ರಂದು ಮರು ಬಿಡುಗಡೆ ಆಗಲಿಕ್ಕಿದೆ.
ಇದನ್ನೂ ಓದಿ:‘ಹೀಗೆಲ್ಲ ಮಾಡಿದ್ರೆ ಸರ್ವಾಧಿಕಾರ ಆಗತ್ತೆ’: ಮತದಾನದ ದಿನವೇ ಉಪೇಂದ್ರ ನೇರ ಮಾತು
ಸಾಂಪ್ರದಾಯಿಕ ಕತೆ ಹೇಳುವ ಪದ್ಧತಿಯನ್ನು ನುಚ್ಚು ನೂರು ಮಾಡಿದ್ದ ಉಪೇಂದ್ರ ‘ಎ’ ಸಿನಿಮಾ ಮೂಲಕ ಭಿನ್ನ ವ್ಯಕ್ತಿಯ ಕತೆಯನ್ನು ಅಷ್ಟೆ ಭಿನ್ನವಾಗಿ ಹೇಳಿದ್ದರು. ಸಿನಿಮಾದ ನಾಯಕ, ನಾಯಕಿಗೆ ಆ ಹಿಂದೆ ಇದ್ದ ಎಲ್ಲ ಗಡಿಗಳನ್ನು ಒಡೆದು ನಾಯಕನನ್ನು ಬಹಳ ಭಿನ್ನವಾಗಿ ತೋರಿಸಿದ್ದರು. ಈ ಸಿನಿಮಾಕ್ಕೆ ಉಪೇಂದ್ರ ಬರೆದಿದ್ದ ಚುರುಕು ಸಂಭಾಷಣೆಗಳು ಈಗಲೂ ಜನಪ್ರಿಯ. ಈ ಸಿನಿಮಾದ ಹಾಡುಗಳು ಸಹ ಎವರ್ಗ್ರೀನ್. ಈ ಸಿನಿಮಾದ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿದ್ದು ಅದನ್ನೇ ಎನ್ಕ್ಯಾಶ್ ಮಾಡಿಕೊಳ್ಳುವ ಉದ್ದೇಶದಿಂದ ‘ಎ’ ಸಿನಿಮಾವನ್ನು ಈಗ ಮರು ಬಿಡುಗಡೆ ಮಾಡಲಾಗುತ್ತಿದೆ.
‘ಎ’ ಸಿನಿಮಾವನ್ನು ಉಪ್ಪಿ ಎಂಟರ್ಟೈನ್ಮೆಂಟ್ ವತಿಯಿಂದ ನಿರ್ಮಾಣ ಮಾಡಲಾಗಿತ್ತು. ಸಿನಿಮಾವನ್ನು ಯಶ್ ರಾಜ್ ಎಂಬುವರು ವಿತರಣೆ ಮಾಡಿದ್ದರು. ಕೇವಲ 1 ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಸುಮಾರು 20 ಕೋಟಿ ಗಳಿಕೆ ಮಾಡಿತ್ತು ಎಂಬುದು ವಿಕಿಪೀಡಿಯ ಒದಗಿಸುತ್ತಿರುವ ಮಾಹಿತಿ. ಈಗ ಮರು ಬಿಡುಗಡೆಯಲ್ಲಿ ಎಷ್ಟು ಗಳಿಸುತ್ತದೆಯೋ ಕಾದು ನೋಡಬೇಕು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ