‘ರಣಹದ್ದು’ ಫಸ್ಟ್ ಲುಕ್ ಬಿಡುಗಡೆ ಮಾಡಿದ ‘ಜಂಬದ ಹುಡುಗಿ’
Ranahaddu: ಮತ್ತೊಂದು ಹೊಸಬರ ತಂಡ ಹೊಸ ಸಿನಿಮಾದೊಟ್ಟಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಬಹುತೇಕ ಹೊಸಬರೇ ನಟಿಸಿರುವ 'ರಣಹದ್ದು' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ನಟಿ ಪ್ರಿಯಾ ಹಾಸನ್ ಬಿಡುಗಡೆ ಮಾಡಿದ್ದಾರೆ.
!['ರಣಹದ್ದು' ಫಸ್ಟ್ ಲುಕ್ ಬಿಡುಗಡೆ ಮಾಡಿದ 'ಜಂಬದ ಹುಡುಗಿ'](https://images.tv9kannada.com/wp-content/uploads/2023/09/Ranahaddu.jpg?w=1280)
ದಿನೇ-ದಿನೇ ಚಿತ್ರರಂಗಕ್ಕೆ (Sandalwood) ಹೊಸತಂಡಗಳು ಎಂಟ್ರಿ ನೀಡುತ್ತಲೇ ಇವೆ. ಒಳ್ಳೆಯ ಕಂಟೆಂಟ್ ಹೊತ್ತು ತರುವ ತಂಡಗಳು ಉಳಿದುಕೊಳ್ಳುತ್ತವೆ, ಇಲ್ಲದ ತಂಡಗಳು ನಿರ್ಗಮಿಸುತ್ತವೆ. ಆದರೆ ಹೊಸ ನೀರಿನ ಹರಿವು ನಿಲ್ಲಬಾರದಷ್ಟೆ. ಹೀಗೆಯೇ ಚಂದನವನದ ಸಮುದ್ರಕ್ಕೆ ಈಗ ಮತ್ತೊಂದು ಹೊಸ ನದಿಯ ಸೇರ್ಪಡೆಯಾಗಿದೆ. ಹೊಸ ತಂಡವೊಂದು ‘ರಣಹದ್ದು’ ಹೆಸರಿನ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.
ಬಹುತೇಕ ಹೊಸ ನಟರೇ ‘ರಣಹದ್ದು’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಫಸ್ಟ್ ಲುಕ್ ಇದೀಗ ಬಿಡುಗಡೆ ಆಗಿದೆ. ತಮಿಳು ನಿರ್ದೇಶಕ ಮಾಣಿಕ್ಯ ಜೈ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಮಾಣಿಕ್ಯ ನಿರ್ದೇಶನ ಮಾಡುವ ಜೊತೆಗೆ ‘ರಣಹದ್ದು’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಸಹ.
ಈಗಾಗಲೇ ತಮಿಳಿನಲ್ಲಿ ಎರಡು ಸಿನಿಮಾಗಳನ್ನು ಮಾಣಿಕ್ಯ ಜೈ ನಿರ್ದೇಶನ ಮಾಡಿದ್ದಾರೆ. ‘ರಣಹದ್ದು’ ಅವರ ಮೊದಲ ಕನ್ನಡ ಸಿನಿಮಾ ಆಗಿದೆ. ಇದೀಗ ‘ರಣಹದ್ದು’ ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ಅನ್ನು ಸ್ಯಾಂಡಲ್ ವುಡ್ ನಟಿ, ನಿರ್ಮಾಪಕಿ ಪ್ರಿಯಾ ಹಾಸನ್ ಹಾಗೂ ನಿರ್ಮಾಪಕ ಟೇಶಿವೆಂಕಟೇಶ್ ಬಿಡುಗಡೆ ಮಾಡಿದ್ದಾರೆ. ಇಬ್ಬರೂ ರಣಹದ್ದು ಚಿತ್ರಕ್ಕೆ ಸಾಥ್ ನೀಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಪ್ರಿಯಾ ಹಾಸನ್ ‘ಜಂಭದ ಹುಡುಗಿ’ ಸಿನಿಮಾದಿಂದ ಖ್ಯಾತಿ ಗಳಿಸಿದವರು. ಯಶ್ರ ಮೊದಲ ನಾಯಕಿ ಎಂಬ ಖ್ಯಾತಿಯೂ ಇವರಿಗಿದೆ.
‘ರಣಹದ್ದು’ ಸಿನಿಮಾ, ಆಧುನಿಕ ತಂತ್ರಜ್ಞಾನ ಅದರಲ್ಲಿಯೂ ಮೊಬೈಲ್ ಫೋನ್ ನಿಂದ ಆಗುತ್ತಿರುವ ಮೋಸ, ವಂಚನೆ ಕುರಿತಾಗಿ ಕತೆಯುಳ್ಳ ಸಿನಿಮಾ. ದಿನನಿತ್ಯವೂ ಸಮಾಜದಲ್ಲಿ ನಡೆಯುತ್ತಿರುವ ನಿಜ ಘಟನೆಗಳನ್ನೇ ಆಧರಿಸಿ ಈ ಸಿನಿಮಾದ ಕತೆ ಹೆಣೆಯಲಾಗಿದೆ. ಸಸ್ಪೆನ್ಸ್-ಆಕ್ಷನ್- ಥ್ರಿಲ್ಲರ್ ಅಂಶಗಳನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದ ಫಸ್ಟ್ ಲುಕ್ ಸಹ ಗಮನ ಸೆಳೆಯುವ ರೀತಿಯಲ್ಲಿದೆ.
ಇದನ್ನೂ ಓದಿ:ಚಿತ್ರರಂಗಕ್ಕೆ ಕಾಲಿಡೋಕೆ ರೆಡಿ ಆದ ‘ರಾಮಾಚಾರಿ’ ಧಾರಾವಾಹಿ ಖ್ಯಾತಿಯ ರಾಧಾ ಭಗವತಿ
‘ರಣಹದ್ದು’ ಸಿನಿಮಾದ ಪಾತ್ರಗಳಲ್ಲಿ ಮಾಣಿಕ್ಯ ಜೈ ಜೊತೆಗೆ ರಂಜಿತ್, ಯತೀಶ್ ಮತ್ತು ನಾಯಕಿಯಾಗಿ ಸೌಮ್ಯ ನಟಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಸದ್ಯದಲ್ಲೆ ಚಿತ್ರೀಕರಣ ಪೂರ್ಣಗೊಳಿಸಿ ನವೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಸರಸ್ವತಿ ಹಾಗೂ ಮಾಣಿಕ್ಯ ಜೈ ಒಟ್ಟಿಗೆ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ತಾಜ್ ಎಂಬುವರು ಸಿನಿಮಾಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಜೀವನ್ ಸಿನಿಮಾಟೊಗ್ರಫರ್ ಕಾರ್ಯ ನಿರ್ವಹಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ