ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಹಣದ ವ್ಯವಹಾರ; ಮತ್ತೆ ಸಂಕಷ್ಟದಲ್ಲಿ ದರ್ಶನ್

| Updated By: ರಾಜೇಶ್ ದುಗ್ಗುಮನೆ

Updated on: Sep 25, 2024 | 12:27 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್​ ಹಾಗೂ ನಟಿ ಪವಿತ್ರಾ ಗೌಡ ಅವರು ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದು ಗಂಭೀರ ಪ್ರಕರಣ ಆದ್ದರಿಂದ ಅಷ್ಟು ಸುಲಭಕ್ಕೆ ಜಾಮೀನು ಸಿಗುತ್ತಿಲ್ಲ. ಈ ಮಧ್ಯೆ ದರ್ಶನ್​ಗೆ ಸಂಕಷ್ಟ ಒಂದು ಎದುರಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಹಣದ ವ್ಯವಹಾರ; ಮತ್ತೆ ಸಂಕಷ್ಟದಲ್ಲಿ ದರ್ಶನ್
ದರ್ಶನ್
Follow us on

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​​ ಜೈಲು ಸೇರಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರು ಬಳ್ಳಾರಿ ಜೈಲಿನಲ್ಲಿ ಇದ್ದು, ಜಾಮೀನಿಗಾಗಿ ಹಾತೊರೆಯುತ್ತಿದ್ದಾರೆ. ಕುಟುಂಬದವರ ಜೊತೆ ಅವರು ವಕೀಲರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಹಣದ ವಹಿವಾಟು ಕೂಡ ನಡೆದಿದೆ. ಹೀಗಾಗಿ, ಈ ಪ್ರಕರಣದ ವಿಚಾರಣೆಯನ್ನು ಐಟಿ ಅಧಿಕಾರಿಗಳು ಕೈಗೆತ್ತಿಕೊಂಡಿದ್ದಾರೆ. ಈ ಕೇಸ್​ನಲ್ಲಿ ದರ್ಶನ್ ಅವರ ವಿಚಾರಣೆ ನಡೆಯಲಿದೆ. ಇದರಿಂದ ಅವರಿಗೆ ಸಂಕಷ್ಟ ಹೆಚ್ಚುವ ಸಾಧ್ಯತೆ ಇದೆ.

ಗುರುವಾರ (ಸೆಪ್ಟೆಂಬರ್ 26) ಅಥವಾ ಶುಕ್ರವಾರ (ಸೆಪ್ಟೆಂಬರ್ 27) ಬಳ್ಳಾರಿ ಜೈಲಿಗೆ ಐಟಿ ಅಧಿಕಾರಿಗಳು ಬರಲಿದ್ದಾರೆ. ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದರ್ಶನ್​ನ ವಿಚಾರಣೆ ಮಾಡಲಿದ್ದಾರೆ. ಐಟಿ ಅಧಿಕಾರಿಗಳಿಗೆ ಸಹಕಾರ ನೀಡುವಂತೆ ನ್ಯಾಯಾಲಯದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಇ-ಮೇಲ್ ರವಾನೆ ಆಗಿದೆ.

ಕೊಲೆ ಆರೋಪ ಮತ್ತೊಬ್ಬರ ಮೇಲೆ ಹೊರಿಸಲು ದರ್ಶನ್ ಪ್ಲ್ಯಾನ್ ಮಾಡಿದ್ದರು. ಇದಕ್ಕಾಗಿ ಲಕ್ಷ ಲಕ್ಷ ಹಣ ಖರ್ಚು ಮಾಡಿದ್ದರು. ಅಷ್ಟು ದೊಡ್ಡ ಮೊತ್ತದ ಕ್ಯಾಶ್ ಎಲ್ಲಿಂದ ಬಂತು? ಹೇಗೆಲ್ಲ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಬಗ್ಗೆ ಐಟಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಸದ್ಯ ಐಟಿ ಅಧಿಕಾರಿಗಳು ಬರುವುದನ್ನು ಜೈಲಾಧಿಕಾರಿಗಳು ಖಚಿತಪಡಿಸಿದ್ದಾರೆ.

ದರ್ಶನ್ ಈಗಾಗಲೇ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದರ ವಿಚಾರಣೆ ಸೆಪ್ಟೆಂಬರ್ 27ರಂದು ಕೋರ್ಟ್​ನಲ್ಲಿ ನಡೆಯಲಿದೆ. ಈ ಪ್ರಕರಣದಲ್ಲಿ ಅವರು ಜಾಮೀನು ನಿರೀಕ್ಷೆಯಲ್ಲಿ ಇರುವಾಗಲೇ ಮತ್ತೊಂದು ಶಾಕ್ ಎದುರಾಗಿದೆ. ಐಟಿ ಅಧಿಕಾರಿಗಳು ಕೇಳುವ ಪ್ರಶ್ನೆಗೆ ಅವರು ಉತ್ತರ ನೀಡಬೇಕಿದೆ.

ಇದನ್ನೂ ಓದಿ: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸೆ.27ಕ್ಕೆ ಮುಂದೂಡಿಕೆ; ಪವಿತ್ರಾ ಗೌಡಗೂ ಸಿಕ್ಕಿಲ್ಲ ಬೇಲ್

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ರೇಣುಕಾ ಸ್ವಾಮಿಯನ್ನು ದರ್ಶನ್ ಹಾಗೂ ಗ್ಯಾಂಗ್ ಕೊಲೆ ಮಾಡಿದ ಆರೋಪ ಇದೆ. ಈ ಪ್ರಕರಣದಲ್ಲಿ ಜೂನ್ 11ರಂದು ದರ್ಶನ್ ಬಂಧನಕ್ಕೆ ಒಳಗಾದರು. ಆರಂಭದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಇದ್ದ ಅವರು ನಂತರ ನ್ಯಾಯಾಂಗ ಬಂಧನಕ್ಕೆ ಒಳಗಾದರು. ಬೆಂಗಳೂರು ಜೈಲಿನಿಂದ ಅವರು ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.