
ಕಿಚ್ಚ ಸುದೀಪ್ ನಟಿಸುತ್ತಿರುವ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ’ ಸಿನಿಮಾಗೆ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಕೊರೊನಾ ವೈರಸ್ನಿಂದ ಉಂಟಾದ ಅಡ್ಡಿ ಆತಂಕ ಏನೇ ಇದ್ದರೂ ಕೂಡ ಬಹಳ ಬೇಗ ಚಿತ್ರೀಕರಣ ಮುಗಿಸಲಾಗಿದೆ. ಕೊವಿಡ್ ಎರಡನೇ ಅಲೆ ಆರಂಭ ಆಗುವುದಕ್ಕೂ ಮುನ್ನ ಮಾತಿನ ಭಾಗದ ಶೂಟಿಂಗ್ ಮುಕ್ತಾಯ ಮಾಡಿಕೊಂಡಿದ್ದ ತಂಡ, ಕೇವಲ ಒಂದು ಹಾಡಿನ ಚಿತ್ರೀಕರಣ ಬಾಕಿ ಉಳಿಸಿಕೊಂಡಿತ್ತು. ಈಗ ಅದನ್ನೂ ಪೂರ್ಣಗೊಳಿಸಲಾಗಿದೆ. ಆ ಹಾಡಿನಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಡ್ಯಾನ್ಸ್ ಮಾಡಿರುವುದು ವಿಶೇಷ.
ಬಾಲಿವುಡ್ನಲ್ಲಿ ಸಖತ್ ಫೇಮಸ್ ಆಗಿರುವ ಜಾಕ್ವೆಲಿನ್ ಫರ್ನಾಂಡಿಸ್ ಅವರು ಇದೇ ಮೊದಲ ಬಾರಿಗೆ ‘ವಿಕ್ರಾಂತ್ ರೋಣ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಂತಾಗಿದೆ. ಅವರಿಗೆ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಸ್ವಾಗತ ಕೋರಿದ್ದಾರೆ. ‘ಜಾಕ್ವೆಲಿನ್ ಅವರೇ ನಿಮಗೆ ಚಂದನವನಕ್ಕೆ ಸ್ವಾಗತ. ನಿಮ್ಮ ಜೊತೆ ಕೆಲಸ ಮಾಡಿದ್ದು ಖುಷಿ ನೀಡಿತು. ನಿಮ್ಮ ಪಾತ್ರದ ಹೆಸರು ಮತ್ತು ಫಸ್ಟ್ಲುಕ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಪ್ರೇಕ್ಷಕರಿಗೆ ಇದು ಖಂಡಿತ ಇಷ್ಟವಾಗಲಿದೆ ಎಂಬ ನಂಬಿಕೆ ನನಗಿದೆ. ಡಬ್ಬಿಂಗ್ ಸ್ಟುಡಿಯೋದಲ್ಲಿ ಮತ್ತೆ ಭೇಟಿ ಆಗೋಣ. ಅಲ್ಲಿಯವರೆಗೆ ಸ್ವಲ್ಪ ಜೋಪಾನ’ ಎಂದು ಅನೂಪ್ ಭಂಡಾರಿ ಟ್ವೀಟ್ ಮಾಡಿದ್ದಾರೆ.
ಜಾಕ್ವೆಲಿನ್ ಫರ್ನಾಂಡಿಸ್ ಅವರ ಕಾರ್ಯವೈಖರಿಗೆ ಸುದೀಪ್ ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ‘ಈ ಹಾಡು ಮತ್ತು ಸಿನಿಮಾಗೆ ಎನರ್ಜಿ ತುಂಬಿದ್ದಕ್ಕಾಗಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಧನ್ಯವಾದಗಳು’ ಎಂದು ಸುದೀಪ್ ಹೇಳಿದ್ದಾರೆ. ಬಾಲಿವುಡ್ ನಟಿಯ ಆಗಮನದಿಂದಾಗಿ ವಿಕ್ರಾಂತ್ ರೋಣ ಚಿತ್ರಕ್ಕೆ ಹೊಸ ಮೆರುಗು ಸಿಕ್ಕಾಂತಾಗಿದೆ.
ಚಿತ್ರೀಕರಣ ಮುಗಿದಿರುವುದಕ್ಕೆ ಇಡೀ ತಂಡಕ್ಕೆ ಕಿಚ್ಚ ಸುದೀಪ್ ವಂದನೆಗಳನ್ನು ತಿಳಿಸಿದ್ದಾರೆ. ‘ಸಿನಿಮಾದ ಕೆಲಸ ಶುರು ಮಾಡಿದಾಗ ಯಾವ ಭಾವನೆ ಇತ್ತೋ ಅದೇ ಭಾವನೆಯೊಂದಿಗೆ ನಾವು ಕೆಲಸ ಮುಗಿಸುವುದು ತುಂಬ ವಿರಳ. ಸುತ್ತಮುತ್ತ ಇದ್ದ ಎಲ್ಲರೂ ತುಂಬ ಪಾಸಿಟಿವ್ ಆಗಿದ್ದರು. ಅದಕ್ಕಾಗಿ ವಿಕ್ರಾಂತ್ ರೋಣ ತಂಡದ ಎಲ್ಲರಿಗೂ ಧನ್ಯವಾದಗಳು’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಶಾಲಿನಿ ಮಂಜುನಾಥ್ ಮತ್ತು ಅಲಂಕಾರ್ ಪಾಂಡಿಯನ್ ಜೊತೆಯಾಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕಿಚ್ಚ ಸುದೀಪ್ ಜೊತೆ ನಿರೂಪ್ ಭಂಡಾರಿ, ನೀತಾ ಅಶೋಕ್ ಮುಂತಾದವರು ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಆಗಸ್ಟ್ 19ರಂದು ಈ ಸಿನಿಮಾ ವಿಶ್ವಾದ್ಯಂತ 3ಡಿ ವರ್ಷನ್ನೊಂದಿಗೆ ಬಿಡುಗಡೆ ಆಗಲಿದೆ. ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ:
ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಪೋಸ್ಟರ್ ಕದ್ದ ಬಾಲಿವುಡ್; ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್
‘ವಿಕ್ರಾಂತ್ ರೋಣ’ ಬಜೆಟ್ ಎಷ್ಟು? ನಂಬರ್ ಹೇಳುವ ಬದಲು ನಿರ್ದೇಶಕರು ಹೇಳಿದ್ದೇ ಬೇರೆ