‘ವಿಕ್ರಾಂತ್ ರೋಣ’ ಬಜೆಟ್ ಎಷ್ಟು? ನಂಬರ್ ಹೇಳುವ ಬದಲು ನಿರ್ದೇಶಕರು ಹೇಳಿದ್ದೇ ಬೇರೆ
ಅನೂಪ್ ಭಂಡಾರಿ ನಿರ್ದೇಶನದ ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಶಾಲಿನಿ ಮಂಜುನಾಥ್, ಅಲಂಕಾರ್ ಪಾಂಡಿಯನ್ ಬಂಡವಾಳ ಹೂಡುತ್ತಿದ್ದಾರೆ. ಬಜೆಟ್ ಎಷ್ಟು ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಇದೆ.
ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ’ ಚಿತ್ರ ದೊಡ್ಡ ಕ್ಯಾನ್ವಾಸ್ನಲ್ಲಿ ಮೂಡಿಬರುತ್ತಿದೆ. ಬಹುಕೋಟಿ ರೂಪಾಯಿ ವೆಚ್ಚದಲ್ಲಿ ದೊಡ್ಡ ದೊಡ್ಡ ಸೆಟ್ಗಳನ್ನು ಹಾಕಿ ಶೂಟಿಂಗ್ ಮಾಡಲಾಗಿದೆ. ಹಾಗಾದರೆ ಈ ಸಿನಿಮಾದ ಬಜೆಟ್ ಎಷ್ಟು ಎಂಬ ಕುತೂಹಲ ಎಲ್ಲರಿಗೂ ಇದೆ. ಈ ಪ್ರಶ್ನೆಯನ್ನು ನಿರ್ದೇಶಕ ಅನೂಪ್ ಭಂಡಾರಿ ಎದುರು ಇಟ್ಟಾಗ ಅವರು ಹೇಳುವ ಉತ್ತರವೇ ಬೇರೆ. ‘ಬಜೆಟ್ ಎಷ್ಟು ಎಂಬುದನ್ನು ನಿರ್ಮಾಪಕರೇ ಹೇಳಬೇಕು. ತುಂಬ ದೊಡ್ಡ ಬಜೆಟ್ನಲ್ಲಿ ಮಾಡಿರುವ ಸಿನಿಮಾ. ನಿರ್ಮಾಪಕ ಮಂಜು ಅವರ ಧೈರ್ಯವನ್ನು ನಾವು ಮೆಚ್ಚಲೇಬೇಕು. ಎಂಥ ಕಷ್ಟದ ಸಂದರ್ಭದಲ್ಲೂ ಅವರು ಬಜೆಟ್ ಕಡಿಮೆ ಮಾಡಿಲ್ಲ. ದಿನದಿಂದ ದಿನಕ್ಕೆ ವೆಚ್ಚ ಹೆಚ್ಚುತ್ತಲೇ ಇದೆ. 3ಡಿ ವರ್ಷನ್ನಲ್ಲೂ ಸಿನಿಮಾ ಮೂಡಿಬರುತ್ತಿರುವುದರಿಂದ ಬಜೆಟ್ ಇನ್ನೂ ಹೆಚ್ಚಿದೆ’ ಎಂದು ಅನೂಪ್ ಹೇಳಿದ್ದಾರೆ.
ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆ ನಿರೂಪ್ ಭಂಡಾರಿ, ನೀತಾ ಅಶೋಕ್ ಮುಂತಾದವರು ನಟಿಸುತ್ತಿದ್ದಾರೆ. ಶಾಲಿನಿ ಮಂಜುನಾಥ್ ಮತ್ತು ಅಲಂಕಾರ್ ಪಾಂಡಿಯನ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಬಿ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ವಿಲಿಯಂ ಡೇವಿಡ್ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿದಿದ್ದು, ಹಾಡಿನ ಶೂಟಿಂಗ್ ಬಾಕಿ ಇದೆ.
ಇದನ್ನೂ ಓದಿ:
‘ಫ್ಯಾಂಟಮ್’ ಬದಲು ‘ವಿಕ್ರಾಂತ್ ರೋಣ’ ಎಂದು ಶೀರ್ಷಿಕೆ ಬದಲಾಗಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
Kichcha sudeep: ಅಮೆರಿಕಾ ಅಮೆರಿಕಾ ಸಿನಿಮಾ ಕಿಚ್ಚ ಸುದೀಪ್ ಕೈ ತಪ್ಪಿದ್ದೇಕೆ?