ಚಿಕ್ಕಬಳ್ಳಾಪುರ: ಕನ್ನಡ ಚಿತ್ರರಂಗದ ಹಿರಿಯ ನಟ ಜಗ್ಗೇಶ್ ಅವರ ದ್ವಿತೀಯ ಪುತ್ರ ಯತಿರಾಜ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಬೆಂಗಳೂರು ಹೈದರಾಬಾದ್ ರಸ್ತೆಯಲ್ಲಿ ಚಲಿಸುವಾಗ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಅಗಲಗುರ್ಕಿ ಗ್ರಾಮದ ಬಳಿ ಯತಿರಾಜ್ ಚಲಿಸುತ್ತಿದ್ದ KA 51 ME 9339 ಸಂಖ್ಯೆಯ ಬಿಳಿ ಬಣ್ಣದ BMW ಕಾರು ಅಪಘಾತಕ್ಕೆ ತುತ್ತಾಗಿದ್ದು, ಕಾರಿನ ಮುಂಬಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಪ್ರತ್ಯಕ್ಷದರ್ಶಿಗಳು ಹೇಳುವಂತೆ ಕಾರು ಡಿವೈಡರ್ಗೆ ಗುದ್ದಿದ ರಭಸಕ್ಕೆ ಹೆಚ್ಚಿನ ಅವಘಡ ಆಗದೇ ಇರುವುದು ಅದೃಷ್ಟವೇ ಸರಿ. ವೇಗವಾಗಿ ಬಂದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು 10 ಅಡಿ ಮೇಲಕ್ಕೆ ಹಾರಿ ಉರುಳಿ ಬಿದ್ದಿದೆ ಎಂದು ಅಲ್ಲಿದ್ದವರು ಘಟನೆಯನ್ನು ವಿವರಿಸಿದ್ದಾರೆ.
ಟಿವಿ9ಗೆ ಈ ಬಗ್ಗೆ ಮಾಹಿತಿ ನೀಡಿದ ಪ್ರತ್ಯಕ್ಷದರ್ಶಿಗಳು, ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು ಹತ್ತು ಅಡಿ ಮೇಲೆ ಹಾರಿ ಉರುಳಿ ಬಿದ್ದಿದೆ. ಇದಕ್ಕೆ ಕಾರು ಅತಿವೇಗವಾಗಿ ಚಲಿಸಿದ್ದೇ ಕಾರಣ. ರಭಸವಾಗಿ ಗುದ್ದಿದರೂ ಸಣ್ಣಪುಟ್ಟ ಗಾಯವಾಗಿದೆಯೆಂದರೆ ಅವರನ್ನು ಕಾರ್ನಲ್ಲಿದ್ದ ಏರ್ಬ್ಯಾಗ್ ಕಾಪಾಡಿದೆ. ಒಂದುವೇಳೆ ಕಾರಿನಲ್ಲಿ ಆ ಸೌಲಭ್ಯ ಇಲ್ಲದೇ ಇದ್ದರೆ ಹೆಚ್ಚು ಪೆಟ್ಟಾಗುವ ಸಂಭವ ಇತ್ತು, ಕಾರಿನಲ್ಲಿದ್ದ ಏರ್ಬ್ಯಾಗ್ನಿಂದ ಜಗ್ಗೇಶ್ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಾವು ಕಣ್ಣಾರೆ ನೋಡಿದ್ದನ್ನು ಹೇಳಿದ್ದಾರೆ.
ಜಗ್ಗೇಶ್ ಅವರ ಎರಡನೇ ಮಗ ಯತಿರಾಜ ಪ್ರಯಾಣಿಸುತ್ತಿದ್ದ ಕಾರು ಅದಾಗಿದ್ದು, ಅಪಘಾತದ ನಂತರ ಅವರು ಸ್ಥಳೀಯ ಆಸ್ಪತ್ರೆ, ಸ್ಥಳೀಯ ಪೊಲೀಸ್ ಠಾಣೆಗೆ ಬಂದಿಲ್ಲ. ಆದರೆ, ಚಿಕ್ಕಬಳ್ಳಾಪುರ ಸರ್ಕಲ್ ಇನ್ಸ್ಪೆಕ್ಟರ್ಗೆ ಮಾಹಿತಿ ನೀಡಿರುವ ಯತಿರಾಜ್ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ. ತನಗೆ ಏನೂ ಆಗಿಲ್ಲವೆಂದು ಹೇಳಿರುವ ಅವರು ಸುರಕ್ಷಿತವಾಗಿರುವ ಬಗ್ಗೆ ಪೋನ್ ಕರೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕಾರನ್ನು ಸ್ವತಃ ಯತಿರಾಜ್ ಡ್ರೈವ್ ಮಾಡುತ್ತಿದ್ದರು. ಆದರೆ, ಹೇಗೆ ಅಪಘಾತವಾಯಿತು ಎನ್ನುವ ಬಗ್ಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸದ್ಯಕ್ಕೆ ಯತಿರಾಜ್ ಅವರ ಆರೋಗ್ಯ ಸ್ಥಿತಿ ಚೆನ್ನಾಗಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಯತಿರಾಜ್ ಬಲಗೈಗೆ ಸಣ್ಣ ಗಾಯವಾಗಿದೆ. ತೀರಾ ಗಂಭೀರ ಗಾಯಗಳೇನೂ ಆಗಿಲ್ಲ. ಹೀಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಜಗ್ಗೇಶ್ ಕುಟುಂಬದಿಂದ ಮಾಹಿತಿ ಲಭ್ಯವಾಗಿದೆ.
ನಾಯಿ ಅಡ್ಡ ಬಂದಿದ್ದರಿಂದ ಅಪಘಾತವಾಯಿತು: ಜಗ್ಗೇಶ್
ಅಪಘಾತದ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, ಕೊರೊನಾ ಬಂದಾಗಿನಿಂದ ಆತ ಹೊರ ಹೋಗಿಲ್ಲ. ಹೋಗಿಬರುವೆ ಎಂದು ಅಮ್ಮನಿಗೆ ಹೇಳಿ ಹೊರ ಹೋದ ಮಗ ಯತಿರಾಜ, ಅವನ ಇಷ್ಟದ ಬೆಂಗಳೂರು – ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಹೋಗಿ ಬರುವಾಗ ಅಡ್ಡ ಬಂದ ನಾಯಿಯನ್ನು ರಕ್ಷಿಸಲು ಹೋಗಿ ರಸ್ತೆ ವಿಭಜಕಕ್ಕೆ ಕಾರು ಹೊಡೆದು ಪಕ್ಕದ ರಸ್ತೆಗೆಬಿದ್ದಿದೆ. ರಾಯರ ದಯೆ ಹಾಗೂ ನಿಮ್ಮ ಶುಭ ಹಾರೈಕೆ, ಯತಿರಾಜನಿಗೆ ಸಣ್ಣ ಗಾಯವೂ ಇಲ್ಲ ಎಂದು ತಿಳಿಸಿದ್ದಾರೆ.
ಕೊರೋನ ಬಂದಾಗಿನಿಂದ ಹೊರ ಹೋಗಿಲ್ಲಾ ಹೋಗಿಬರುವೆ ಎಂದು ಅಮ್ಮನಿಗೆ ಹೇಳಿ ಹೊರ ಹೋದ ಮಗ ಯತಿರಾಜ,ಅವನು ಪ್ರತಿಬಾರಿ ಅವನ ಇಷ್ಟದ ರಸ್ತೆ bnglr to ಚಿಕ್ಕಬಳ್ಳಾಪುರ ಹೋಗಿ ಬರುವಾಗ ಅಡ್ಡ ಬಂದ ನಾಯಿ ರಕ್ಷಿಸಲು ಹೋಗಿ ರಸ್ತೆ ವಿಭಜಕ್ಕೆ ಹೊಡೆದು ಕಾರು ಪಕ್ಕದ ರಸ್ತೆಗೆಬಿದ್ದಿದೆ!ರಾಯರದಯೇ ಹಾಗು ನಿಮ್ಮ ಶುಭಹಾರೈಕೆ ಯತಿರಾಜನಿಗೆ ಸಣ್ಣ ಗಾಯವು ಇಲ್ಲ!? pic.twitter.com/xtVf53Y9d4
— ನವರಸನಾಯಕ ಜಗ್ಗೇಶ್ (@Jaggesh2) July 1, 2021
ಇದನ್ನೂ ಓದಿ:
Jaggesh Son Car Accident: ನಟ ಜಗ್ಗೇಶ್ ಪುತ್ರ ಯತಿರಾಜ್ ಇದ್ದ ಕಾರು ಅಪಘಾತ; ಹೈದರಾಬಾದ್ ರಸ್ತೆಯಲ್ಲಿ ಅವಘಡ
ಅಪಘಾತದಲ್ಲಿ ನಟ ಜಗ್ಗೇಶ್ ಮಗ ಯತಿರಾಜ್ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜು; ಇಲ್ಲಿವೆ ಫೋಟೋಗಳು