
ಮಾಜಿ ಸಚಿವ ಜನಾರ್ಧನ ರೆಡ್ಡಿ (Janardhan Reddy) ಅವರ ಪುತ್ರ ಕಿರೀಟಿ ಮೊದಲ ಸಿನಿಮಾ ‘ಜೂನಿಯರ್’ ಪ್ರಾರಂಭವಾಗಿ ವರ್ಷಗಳೇ ಕಳೆದಿವೆ. ಆ ಸಿನಿಮಾ ನಿಂತೇ ಹೋಗಿದೆ ಎಂಬ ಸುದ್ದಿಗಳೂ ಹರಿದಾಡಿದ್ದವು. 2022 ರಲ್ಲಿ ಕಿರೀಟಿ ಅವರ ಮೊದಲ ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನಡೆದಿತ್ತು. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಈ ಸಿನಿಮಾವನ್ನು ನಿರ್ಮಾಣ ಮತ್ತು ಬಿಡುಗಡೆ ಮಾಡುವುದಾಗಿ ಹೇಳಲಾಗಿತ್ತು. ಆರಂಭದಲ್ಲಿ ಚಿತ್ರೀಕರಣ ಜೋರಾಗಿಯೇ ನಡೆಯಿತು. ಆದರೆ ಬಳಿಕ ಸಿನಿಮಾದ ಸುದ್ದಿಯೇ ಇರಲಿಲ್ಲ. ಇದೀಗ ರೆಡ್ಡಿ ಪುತ್ರನ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆಗಿದೆ.
ಜನಾರ್ಧನ ರೆಡ್ಡಿ ಅವರ ಪುತ್ರ ಕಿರೀಟಿಯ ಮೊದಲ ಸಿನಿಮಾ ‘ಜೂನಿಯರ್ ಜುಲೈ 18ಕ್ಕೆ ಬಿಡುಗಡೆ ಆಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಕಾಲೇಜು ಪ್ರೇಮಕತೆ ತೆರೆಗೆ ಬರಲಿದೆ. ಕನ್ನಡದ ‘ಮಾಯಾಬಜಾರ್’ ತಮಿಳುನ ‘ನಾಂಗು ರೊಂಬ ಬ್ಯುಸಿ’ ಸಿನಿಮಾಗಳನ್ನು ನಿರ್ದೇಶಿಸಿರುವ ರಾಧಾ ಕೃಷ್ಣ ರೆಡ್ಡಿ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ‘ಈಗ’ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಸಿನಿಮಾ ನಿರ್ಮಾಣ ಮಾಡಿರುವ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವರಾಹಿ ‘ಜೂನಿಯರ್’ ಸಿನಿಮಾಕ್ಕೆ ಬಂಡವಾಳ ಹೂಡಿದೆ.
ಇದನ್ನೂ ಓದಿ:ಮೊದಲ ಹಿಂದಿ ಸಿನಿಮಾ ಚಿತ್ರೀಕರಣ ಮುಗಿಸಿದ ನಟಿ ಶ್ರೀಲೀಲಾ
‘ಜೂನಿಯರ್’ ಸಿನಿಮಾದ ಮೊದಲ ಹಾಡು ಇದೇ ತಿಂಗಳ 19ನೇ ತಾರೀಖು ಬಿಡುಗಡೆ ಆಗಲಿದೆ. ಸಿನಿಮಾಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ‘ಜೂನಿಯರ್’ ಸಿನಿಮಾನಲ್ಲಿ ಶ್ರೀಲೀಲಾ ನಾಯಕಿ. ಈ ಸಿನಿಮಾನಲ್ಲಿ ಜೆನಿಲಿಯಾ ಹಾಗೂ ನಟ ರವಿಚಂದ್ರನ್ ಸಹ ನಟಿಸಿದ್ದಾರೆ. ತೆಲುಗು ಹಾಗೂ ಕನ್ನಡ ಚಿತ್ರರಂಗದ ಇನ್ನೂ ಕೆಲವು ಸ್ಟಾರ್ ನಟ, ನಟಿಯರು ಈ ಸಿನಿಮಾನಲ್ಲಿದ್ದಾರೆ.
ಸಿನಿಮಾ ಪ್ರಾರಂಭವಾದಾಗ ನಿರ್ದೇಶಕ ರಾಜಮೌಳಿ ಮುಹೂರ್ತಕ್ಕೆ ಆಗಮಿಸಿ ಶುಭಾಶಯ ತಿಳಿಸಿದ್ದರು. ‘ಬಾಹುಬಲಿ’ ಖ್ಯಾತಿಯ ಸೆಂಥಿಲ್ ಈ ಸಿನಿಮಾಕ್ಕೆ ಕ್ಯಾಮೆರಾಮನ್ ಆಗಿದ್ದು, ಆರಂಭದಲ್ಲಿ ಬಿಡುಗಡೆ ಮಾಡಿದ್ದ ಸಿನಿಮಾದ ಟೀಸರ್ ಸಹ ಸಖತ್ ಸದ್ದು ಮಾಡಿತ್ತು. ಸಿನಿಮಾಕ್ಕೆ ಖ್ಯಾತ ಆಕ್ಷನ್ ಕೊರಿಯೋಗ್ರಾಫರ್ ಪೀಟರ್ ಹೇನ್ ಆಕ್ಷನ್ ನೀಡಿದ್ದಾರೆ. ಇದೇ ತಿಂಗಳ 19 ರಂದು ಹಾಡು ಬಿಡುಗಡೆ ಮೂಲಕ ಸಿನಿಮಾದ ಪ್ರಚಾರ ಆರಂಭವಾಗುತ್ತಿದ್ದು, ಜುಲೈ 18ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಮೂರು ವರ್ಷಗಳ ಬಳಿಕ ಕಿರೀಟಿಯ ಸಿನಿಮಾ ತೆರೆಗೆ ಬರುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:07 pm, Thu, 15 May 25