ಮಾಮೂಲಿ ಕಥಾಹಂದರವನ್ನು ಬಿಟ್ಟು ಬೇರೆ ರೀತಿಯ ಡಿಫರೆಂಟ್ ವಿಷಯವನ್ನು ಬೆಳ್ಳಿತೆರೆಯಲ್ಲಿ ತೋರಿಸುವ ಪ್ರಯತ್ನಗಳು ಆಗಾಗ ನಡೆಯುತ್ತವೆ. ಅಂತಹ ಸಿನಿಮಾಗಳ ಸಾಲಿಗೆ ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಸಿನಿಮಾ ಕೂಡ ಸೇರ್ಪಡೆ ಆಗುತ್ತದೆ. ಯಾಕೆಂದರೆ, ಈ ಸಿನಿಮಾದಲ್ಲಿ ವಿಟಿಲೈಗೋ ಅಥವಾ ತೊನ್ನು ರೋಗದ ಬಗ್ಗೆ ಕಥೆಯನ್ನು ಹೇಳಲಾಗುತ್ತಿದೆ. ಈ ಸಿನಿಮಾ ಬಗ್ಗೆ ಚಿತ್ರತಂಡದವರು ಹಂತಹಂತವಾಗಿ ಕೆಲವು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನಾಯಕಿ ಪಾತ್ರದ ಬಗ್ಗೆ ಈಗ ಮಾಹಿತಿ ಸಿಕ್ಕಿದೆ. ಖ್ಯಾತ ನಟಿ ಕಾಜಲ್ ಕುಂದರ್ ಅವರು vitiligo ಕುರಿತ ಕಹಾನಿ ಇರುವ ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಸಿನಿಮಾಗೆ ನಾಯಕಿಯಾಗಿದ್ದಾರೆ.
ಈ ಮೊದಲು ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಾದ ಕೌತುಕ ಮೂಡಿಸಿತ್ತು. ತೊನ್ನು ಕಾಯಿಲೆ ಬಗ್ಗೆ ಮೂಡಿಬರುತ್ತಿರುವ ಮೊದಲ ಕಮರ್ಷಿಯಲ್ ಸಿನಿಮಾ ಎಂಬ ಖ್ಯಾತಿ ಈ ಸಿನಿಮಾಗೆ ಇದೆ. ಇಂಥ ಒಂದು ಅಪರೂಪದ ಕಥಾಹಂದರದ ಸಿನಿಮಾಗೆ ಮಹೇಶ್ ಗೌಡ ಅವರು ನಿರ್ದೇಶನ ಮಾಡಿದ್ದಾರೆ. ಮುಖ್ಯ ಪಾತ್ರದಲ್ಲಿ ನಟಿಸುವುದರ ಜೊತೆಗೆ ನಿರ್ಮಾಣವನ್ನೂ ಅವರೇ ಮಾಡಿದ್ದಾರೆ.
‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಸಿನಿಮಾದ ಪಾತ್ರವರ್ಗಕ್ಕೆ ಕಾಜಲ್ ಕುಂದರ್ ಅವರು ಎಂಟ್ರಿ ನೀಡಿದ್ದಾರೆ. ಕಾಜಲ್ ಕುಂದರ್ ಅವರು ಮಂಗಳೂರು ಮೂಲದವರು. ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಪಾತ್ರವನ್ನು ಪರಿಚಯಿಸುವಂತಹ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಆ ಮೂಲಕ ನಿರೀಕ್ಷೆ ಹೆಚ್ಚಿಸಲಾಗಿದೆ. ಈ ಪೋಸ್ಟರ್ ಕೂಡ ಒಂದು ಕಥೆಯನ್ನೇ ಹೇಳುವಂತಿದೆ.
ಇದನ್ನೂ ಓದಿ: ಡಿಸೆಂಬರ್ 27ರಂದು ಬಿಡುಗಡೆ ಆಗಲಿದೆ ‘ಔಟ್ ಆಫ್ ಸಿಲಬಸ್’ ಸಿನಿಮಾ
ಈ ಸಿನಿಮಾದಲ್ಲಿ ಕವಿತಾ ಎಂಬ ಪಾತ್ರವನ್ನು ಕಾಜಲ್ ಕುಂದರ್ ನಿಭಾಯಿಸಿದ್ದಾರೆ. ಮುಂಬೈನಲ್ಲಿ ವಾಸವಾಗಿರುವ ಕಾಜಲ್ ಕುಂದರ್ ಅವರು ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುತ್ತಾರೆ. ರಂಗಭೂಮಿಯಲ್ಲಿ ನಟಿಸಿದ ಅನುಭವ ಕೂಡ ಅವರಿಗೆ ಇದೆ. ಹಾಗಿದ್ದರೂ ಕೂಡ ಆಡಿಷನ್ ಮೂಲಕವೇ ಅವರು ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಸಿನಿಮಾಗೆ ಆಯ್ಕೆ ಆದರು. ಇದು ಅವರ ಪಾಲಿಗೆ ಮೈಲಿಗಲ್ಲಿನ ಸಿನಿಮಾ ಆಗಲಿದೆ ಎಂದು ಚಿತ್ರತಂಡ ಅಭಿಪ್ರಾಯಪಟ್ಟಿದೆ.
‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರ ‘ಹೊನ್ನುಡಿ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣ ಆಗಿದೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಸದ್ಯದಲ್ಲೇ ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಲಿದೆ. ತೊನ್ನು ಸಮಸ್ಯೆಯಿಂದ ಲಕ್ಷಾಂತರ ಜನರು ಕೊರಗುತ್ತಿದ್ದಾರೆ. ಅಂಥವರ ಮಾನಸಿಕ ತೊಳಲಾಟಗಳ ಸುತ್ತ ಇರುವ ಕಥೆಯನ್ನು ಈ ಸಿನಿಮಾ ಮೂಲಕ ತೆರೆಗೆ ತರಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.