ನಟ ರಾಜೇಶ್​ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ‘ಕಲಾತಪಸ್ವಿ’ಗೆ ಅಂತಿಮ ವಿದಾಯ

| Updated By: ಮದನ್​ ಕುಮಾರ್​

Updated on: Feb 19, 2022 | 7:14 PM

Kalatapasvi Rajesh Funeral: ಹಾಲುಮತ ಸಂಪ್ರದಾಯದಂತೆ ರಾಜೇಶ್​ ಅವರ ಅಂತ್ಯಕ್ರಿಯೆ ನೆರವೇರಿದೆ. ಬೆಂಗಳೂರು ಉತ್ತರ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಇರುವ ಸ್ನೇಹಿತ ಸಿದ್ದಲಿಂಗಯ್ಯನವರ ತೋಟದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ.

ನಟ ರಾಜೇಶ್​ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ‘ಕಲಾತಪಸ್ವಿ’ಗೆ ಅಂತಿಮ ವಿದಾಯ
ನಟ ರಾಜೇಶ್​ ಅಂತ್ಯಕ್ರಿಯೆ
Follow us on

ಹಿರಿಯ ನಟ ರಾಜೇಶ್​ (Kalatapasvi Rajesh) ನಿಧನದಿಂದಾಗಿ ಕನ್ನಡ ಚಿತ್ರದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ವಯೋಸಹಜ ಕಾಯಿಲೆಯಿಂದ ಇಂದು (ಫೆ.19) ಮೃತರಾದ ಅವರಿಗೆ 82 ವರ್ಷ ವಯಸ್ಸಾಗಿತ್ತು. ಶನಿವಾರ ಸಂಜೆಯೇ ಅವರ ಅವರ ಅಂತ್ಯಕ್ರಿಯೆ (Kalatapasvi Rajesh Funeral) ನೆರವೇರಿಸಲಾಗಿದೆ. ‘ಕಲಾತಪಸ್ವಿ’ ರಾಜೇಶ್​ ಅವರು ಹಲವು ವರ್ಷಗಳ ಕಾಲ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ. ಅಗಲಿದ ಈ ಸಾಧಕನಿಗೆ ಪೊಲೀಸ್ ಗೌರವದೊಂದಿಗೆ ಅಂತಿಮ ವಿದಾಯ ಹೇಳಲಾಗಿದೆ. ಹಾಲುಮತ ಸಂಪ್ರದಾಯದಂತೆ ರಾಜೇಶ್​ ಅವರ ಅಂತ್ಯಕ್ರಿಯೆ ನೆರವೇರಿದೆ. ಇಬ್ಬರು ಪುತ್ರರಾದ ಸದಾನಂದ, ಧನಂಜಯ ಹಾಗೂ ಅಳಿಯ ಅರ್ಜುನ್​ ಸರ್ಜ (Arjun Sarja) ಅವರು ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಇರುವ ಸ್ನೇಹಿತ ಸಿದ್ದಲಿಂಗಯ್ಯನವರ ತೋಟದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ರಾಜೇಶ್​ ಅವರನ್ನು ಫೆ.9ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲವು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ನೀಡಿದರೂ ಕೂಡ ಅವರು ಬದುಕುಳಿಯಲಿಲ್ಲ. ಚಿಕಿತ್ಸೆ ಫಲಿಸದೇ ಅವರು ಇಂದು ಮುಂಜಾನೆ ನಿಧನರಾದರು. ಕುಟುಂಬದವರು ಮತ್ತು ಆಪ್ತರು ಅಂತ್ಯಕ್ರಿಯೆಯಲ್ಲಿ ಭಾಗಿ ಆಗಿದ್ದಾರೆ.

ರಾಜೇಶ್​ ಅಗಲಿಕೆಗೆ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಲಾಗಿದೆ. ಅಂತ್ಯಸಂಸ್ಕಾರಕ್ಕೂ ಮುನ್ನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜೇಶ್​ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಆಪ್ತರು ಬಂದು ಹಿರಿಯ ನಟನಿಗೆ ಅಂತಿಮ ನಮನ ಸಲ್ಲಿಸಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ರಾಜೇಶ್ ಅವರ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಂತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ‘ರಾಜೇಶ್​ ಅಗಲಿಕೆ ಸದಾಕಾಲ ನಮ್ಮನ್ನು ಕಾಡಲಿದೆ. ಅವರು ನಟಿಸಿರುವ ಚಿತ್ರಗಳು ಸದಾಕಾಲ ನೆನಪಿರುತ್ತದೆ. ಕುಟುಂಬಸ್ಥರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ’ ಎಂದು ಬೊಮ್ಮಾಯಿ ಹೇಳಿದರು. ಸಿಎಂ ಬೊಮ್ಮಾಯಿ ಜೊತೆ ಆಗಮಿಸಿದ್ದ ಸಚಿವ ಮುರುಗೇಶ್ ನಿರಾಣಿ ಕೂಡ ಅಂತಿಮ ದರ್ಶನ ಪಡೆದರು.

ರಾಜೇಶ್​ ಜೊತೆಗಿನ ಒಡನಾಟ ಸ್ಮರಿಸಿದ ಸಿದ್ದರಾಮಯ್ಯ:

ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನದ ಬಳಿಕ ರಾಜೇಶ್​ ಬಗ್ಗೆ ಸಿದ್ದರಾಮಯ್ಯ ಮಾತನಾಡಿದರು. ‘ಆ ಕಾಲದಲ್ಲಿ ರಾಜೇಶ್​ ಅವರು ಬಹಳ ಜನಪ್ರಿಯರಾಗಿದ್ದರು. ವೈಯಕ್ತಿಕವಾಗಿ ನನಗೆ ಅವರು ಹೆಚ್ಚು ಪರಿಚಯವಿದ್ದರು. ಅನೇಕ ಬಾರಿ ಕನಕ ಜಯಂತಿ ಕಾರ್ಯಕ್ರಮದ ವೇದಿಕೆಗಳಲ್ಲಿ ನಾವು ಜೊತೆಯಾಗಿದ್ದೆವು. ಹಲವು ಸಲ ಅವರು ನಮ್ಮ ಮನೆಗೆ ಬಂದಿದ್ದರು. ಕನಕದಾಸರ ಬಗ್ಗೆ ರಾಜೇಶ್​ ಅವರು ಬಹಳ ಅಧ್ಯಯನ ಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ಅವರನ್ನು ಭೇಟಿ ಆಗಲು ಸಾಧ್ಯವಾಗಿರಲಿಲ್ಲ. ಅವರ ಅನಾರೋಗ್ಯದ ಬಗ್ಗೆ ಪತ್ರಿಕೆಯಲ್ಲಿ ನೋಡಿದಾಗ ತಿಳಿದಿತ್ತು. ವಯೋಸಹಜ ಕಾಯಿಲೆಗಳು ಬರುತ್ತವೆ. ರಾಜೇಶ್​ ನಿಧನದಿಂದ ಕನ್ನಡ ಚಿತ್ರರಂಗ ಉತ್ತಮ ನಟನನ್ನು ಕಳೆದುಕೊಂಡಿದೆ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ:

ಪುನೀತ್​-ರಾಜೇಶ್​ ಕೊನೇ ಭೇಟಿಯ ಕ್ಷಣಗಳು; ಅಗಲಿದ ಸಾಧಕರಿಗೆ ಇದು ಚಿತ್ರನಮನ

‘ಕಲಾ ತಪಸ್ವಿ’ ರಾಜೇಶ್​​ ಅವರಿಗಿತ್ತು ಮೂರು ಹೆಸರು; ಹೆಸರಿನ ಹಿಂದಿನ ಕುತೂಹಲಕರ ಮಾಹಿತಿ ಇಲ್ಲಿದೆ

Published On - 6:53 pm, Sat, 19 February 22