‘ಕಲಾ ತಪಸ್ವಿ’ ರಾಜೇಶ್​​ ಅವರಿಗಿತ್ತು ಮೂರು ಹೆಸರು; ಹೆಸರಿನ ಹಿಂದಿನ ಕುತೂಹಲಕರ ಮಾಹಿತಿ ಇಲ್ಲಿದೆ

TV9 Digital Desk

| Edited By: shivaprasad.hs

Updated on:Feb 19, 2022 | 12:52 PM

RIP Actor Rajesh: ಕನ್ನಡ ಚಿತ್ರರಂಗದ ಹಿರಿಯ ನಟ, ಕಲಾ ತಪಸ್ವಿ ಎಂದೇ ಗುರುತಿಸಿಕೊಂಡಿದ್ದ ರಾಜೇಶ್ ನಿಧನ ಹೊಂದಿದ್ದಾರೆ. ಬಾಲ್ಯದಲ್ಲಿ ಮುನಿ ಚೌಡಪ್ಪ ಹೆಸರಿನಿಂದ ಗುರುತಿಸಿಕೊಂಡಿದ್ದ ಅವರು, ರಂಗಭೂಮಿಯಲ್ಲಿ ವಿದ್ಯಾ ಸಾಗರ್ ಎಂದು ಗುರುತಿಸಿಕೊಂಡರು. ಸಿನಿಮಾದಲ್ಲಿ ರಾಜೇಶ್ ಆದರು. ಈ ಹೆಸರಿನ ಪಯಣದ ಕುರಿತು ಸ್ವತಃ ಅವರು ಈ ಹಿಂದೆ ಟಿವಿ9 ಡಿಜಿಟಲ್​ ಜತೆ ಮಾಹಿತಿ ಹಂಚಿಕೊಂಡಿದ್ದರು. ಅದರ ಮೆಲುಕು ಇಲ್ಲಿದೆ.

‘ಕಲಾ ತಪಸ್ವಿ’ ರಾಜೇಶ್​​ ಅವರಿಗಿತ್ತು ಮೂರು ಹೆಸರು; ಹೆಸರಿನ ಹಿಂದಿನ ಕುತೂಹಲಕರ ಮಾಹಿತಿ ಇಲ್ಲಿದೆ
ಹಿರಿಯ ನಟ ರಾಜೇಶ್ (ಸಂಗ್ರಹ ಚಿತ್ರ)

ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ (Actor Rajesh) ತಮ್ಮ ಅಭಿನಯದಿಂದಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಸರಳತೆ, ವಿನಯತೆ, ಸದಾ ನಗು, ಶುದ್ಧ ಕನ್ನಡ.. ರಾಜೇಶ್ ಎಲ್ಲರನ್ನೂ ಎದುರಾಗುತ್ತಿದ್ದುದೇ ಹೀಗೆ. ಈ ಹಿಂದೆ ಟಿವಿ9 ಡಿಜಿಟಲ್ ಜತೆ ಮಾತನಾಡುತ್ತಾ ರಾಜೇಶ್ ಅವರು ತಮ್ಮ ಮೂರು ಹೆಸರಿನ ಕುರಿತು ಕುತೂಹಲಕರ ಮಾಹಿತಿ ಹಂಚಿಕೊಂಡಿದ್ದರು. ಅವರ ಮೊದಲ ಹೆಸರು ಮುನಿ ಚೌಡಪ್ಪ (Muni Choudappa). ರಂಗಭೂಮಿಯಲ್ಲಿ ವಿದ್ಯಾ ಸಾಗರ್ (Vidya Sagar) ಎಂಬ ಹೆಸರಿನಿಂದ ಗುರುತಿಸಿಕೊಂಡರು. ಸಿನಿಮಾದಲ್ಲಿ ರಾಜೇಶ್ ಎಂದು ಖ್ಯಾತರಾದರು. ತಮ್ಮ ಹುಟ್ಟು ಹೆಸರು ಮುನಿ ಚೌಡಪ್ಪ ಎಂದು ಬರಲು ಕಾರಣವಾಗಿದ್ದರ ಕುರಿತು ಮಾಹಿತಿ ಹಂಚಿಕೊಂಡಿದ್ದ ರಾಜೇಶ್, ಇದರ ಹಿಂದಿನ ಕಾರಣವನ್ನು ಹೀಗೆ ವಿವರಿಸಿದ್ದರು. ‘‘ನನ್ನ ಹುಟ್ಟು ಹೆಸರು ಮುನಿ ಚೌಡಪ್ಪ. ಈ ಹೆಸರು ಬರಲು ಕಾರಣವಾದ ಘಟನೆ ಇದು. ನಾನು‌ ಮಗುವಾಗಿದ್ದಾಗ ಹಾಲು ಕುಡಿಯಲು ರಗಳೆ‌ ಮಾಡುತ್ತಿದ್ದೆನಂತೆ. ಆಗ ತಂದೆ ತಾಯಿಗಳು ಮನೆ ದೇವರಾದ ಮುನೇಶ್ವರ ಹಾಗೂ ಚೌಡೇಶ್ವರನಲ್ಲಿ ಹರಕೆ ಹೊತ್ತರು. ಚೌಡೇಶ್ವರನ ಬಳಿ‌ ಕೇಳಿದಾಗ ನಮ್ಮಣ್ಣನ ಹೆಸರಿನ ಅರ್ಧ, ನನ್ನ‌ಹೆಸರಿನ ಅರ್ಧವನ್ನು ಮಗುವಿಗಿಡಿ ಎಂದರಂತೆ. ಅದರಂತೆ, ಮುನೇಶ್ವರನ ಅರ್ಧವಾಗಿ ಮುನಿಯೆಂದೂ, ಚೌಡೇಶ್ವರನ ಅರ್ಧವಾಗಿ ಚೌಡಪ್ಪ ಅಂತ ಇಟ್ಟರು. ಹೀಗೆ ಮುನಿ ಚೌಡಪ್ಪ ಎಂಬ ಹೆಸರು ಬಂತು’’ ಎಂದು ಹೇಳಿಕೊಂಡಿದ್ದರು ರಾಜೇಶ್.

ಮುನಿ ಚೌಡಪ್ಪ ವಿದ್ಯಾ ಸಾಗರ್ ಆಗಿದ್ದು ಹೇಗೆ?

ರಾಜೇಶ್ ಅವರಿಗೆ ರಂಗಭೂಮಿಯ ಗೀಳು ಹತ್ತಿಕೊಂಡಿದ್ದು ಬಹಳ ಆಕಸ್ಮಿಕವಾಗಿ. ನಾಟಕ, ಸಿನಿಮಾ ತಮ್ಮ ಜೀವನಕ್ಕೆ ಬರುತ್ತದೆ ಎಂದು‌ ಕನಸಿನಲ್ಲೂ ಅವರು ಯೋಚಿಸಿರಲಿಲ್ಲವಂತೆ. ಈ ಕುರಿತು ರಾಜೇಶ್ ಹೀಗೆ ಹೇಳಿಕೊಂಡಿದ್ದರು. ‘‘ನಮ್ಮನೆ ಬಾಡಿಗೆದಾರನಾಗಿದ್ದ ಒಬ್ಬ ಹುಡುಗ ಒಂದು ದಿನ ನನಗೆ ಹ್ಯಾಂಡ್ ಬಿಲ್ ಕೊಟ್ಟ. ಅದು ನಾಟಕದ್ದಾಗಿತ್ತು. ಎಲ್ಲಿಯ ನಾಟಕವಿದು ಎಂದು ಪ್ರಶ್ನಿಸಿದೆ. ಗುಬ್ಬಿ ಥಿಯೇಟರ್​ದು ಎಂದ. ನಿರ್ದೇಶಕರ ಕುರಿತು ಕೇಳಿದಾಗ ಪುಟ್ಟಯ್ಯ ರಾಜು ಎಂದ. ನಾನೂ ಸೇರಬೇಕು ಎಂದು ಯೋಚಿಸಿದ್ದೇನೆ ಎಂದೆ. ಆಗ ಆತ ಇಲ್ಲ, ನಿಮ್ಮ ತಂದೆತಾಯಿಯರು ಕೋಪ ಮಾಡಿಕೊಳ್ಳುತ್ತಾರೆ ಎಂದು ನಿರಾಕರಿಸಿದ. ನಾನು ಹಾಗೆ ಹೇಳೋದಿಲ್ಲ, ಮನೆಯಲ್ಲಿ ತೋರಿಸಿಕೊಳ್ಳುವುದೂ ಇಲ್ಲ. ಟ್ಯೂಷನ್​ಗೆ ಹೋಗುತ್ತೇನೆ ಎಂದು ಹೇಳಿ ಬಂದುಬಿಡುತ್ತೇನೆ. ಸಂಜೆ 6-8ರವರೆಗೆ ನಾಟಕ ಅಭ್ಯಾಸ ಮಾಡುತ್ತೇನೆ.‌‌ ಮನೆಯಲ್ಲಿ ಟ್ಯೂಷನ್ ಎಂದು ಹೇಳುತ್ತೇನೆ. ನೀನು ನಾಟಕ ಕಂಪನಿಗೆ ಸೇರಿಸಿಬಿಡು ಎಂದು‌ ಆ ಹುಡುಗನಲ್ಲಿ ಕೇಳಿಕೊಂಡೆ. ಹೀಗೆ ನಾಟಕಕ್ಕೆ ಸೇರಿದೆ’’ ಎಂದಿದ್ದರು ರಾಜೇಶ್.

ಹೀಗೆ ಅನಿರೀಕ್ಷಿತವಾಗಿ ಪ್ರಾರಂಭವಾದ ಅವರ ನಾಟಕ ಪಯಣದಲ್ಲಿ ನಂತರ ಅವರಿಗೆ ವಿಪರೀತ ಆಸಕ್ತಿ ಮೂಡಿತು. ‘‘ನಾಟಕ ಕಂಪನಿಗಳನ್ನು ಬದಲಾಯಿಸಿದೆ. ‘ಕರ್ನಾಟಕ ಮಿತ್ರ ಮಂಡಳಿ’ ಎಂಬ ಕಂಪನಿ ಸೇರಿಕೊಂಡೆ. ನನಗೆ ಕಲಾವಿದರ ಬಳಗ ಜಾಸ್ತಿ ಇತ್ತು. ನಾನೇ ಸ್ವಂತ ಸ್ವಂತ ನಾಟಕ ಮಂಡಳಿ ಆರಂಭಿಸಬೇಕು ಎಂದು ಯೋಚಿಸಿ, ‘ಶಕ್ತಿ ನಾಟಕ ಮಂಡಳಿ’ ಎಂದು ಆರಂಭಿಸಿದೆ. ಕನ್ನಡ‌ ಕಾದಂಬರಿಗಳನ್ನು‌ಓದೋದು ಎಂದರೆ ಬಹಳ ಇಷ್ಟ. ಅನಕೃ, ತರಾಸು, ಕುವೆಂಪು ಮೊದಲಾದ ಪುಸ್ತಕಗಳು ಬಹಳ ಪ್ರಿಯವಾಗಿದ್ದವು. ಓದುತ್ತಾ ಓದುತ್ತಾ ತುಸು ಸಾಹಿತ್ಯ ಜ್ಞಾನ ಬಂತು. ನಾನೇ ನಾಟಕ ಬರೆದೆ. ಅಲ್ಲಿಂದ ನಾಟಕ ರಚನೆ, ನಟನೆ, ನಿರ್ದೇಶನ ಶುರುವಾಯಿತು. ಆ ಸಂದರ್ಭದಲ್ಲಿ ನಾನು ಕಾವ್ಯನಾಮ ಎಂದು ಇಟ್ಟುಕೊಂಡಿದ್ದು ‘ವಿದ್ಯಾಸಾಗರ’’ ಎಂದು ವಿದ್ಯಾಸಾಗರ ಹೆಸರು ಬಂದಿದ್ದನ್ನು ವಿವರಿಸಿದ್ದರು ರಾಜೇಶ್.

‘ನಮ್ಮ ಊರು’ ಚಿತ್ರದ ನಂತರ ರಾಜೇಶ್ ಆಗಿ ಗುರುತಿಸಿಕೊಂಡ ವಿದ್ಯಾ ಸಾಗರ್:

1962ರಲ್ಲಿ ವಿದ್ಯಾ ಸಾಗರ್ ಎಂಬ ಹೆಸರಿನಿಂದ ಚಿತ್ರರಂಗ ಪ್ರವೇಶಿಸಿದ ರಾಜೇಶ್ ಅವರಿಗೆ ದೊಡ್ಡ ಗೆಲುವು ನೀಡಿದ್ದು ‘ನಮ್ಮ ಊರು’ ಚಿತ್ರ. ಆ ಸಿನಿಮಾ ಮಾಡುತ್ತಿರುವಾಗ ಮೂರೇ ತಿಂಗಳ ಅವಧಿಯಲ್ಲಿ ಅವರಿಗೆ 18 ಸಿನಿಮಾಗಳ ಆಫರ್ ಬಂದಿದ್ದವಂತೆ. ನಂತರ ಮೂರು ವರ್ಷ ಬಹಳ ಸಕ್ರಿಯವಾಗಿದ್ದೆ ಎಂದು ಅವರು ಹೇಳಿಕೊಂಡಿದ್ದರು. ‘ನಮ್ಮ ಊರು’ ಚಿತ್ರದ ನಂತರ ವಿದ್ಯಾ ಸಾಗರ್ ರಾಜೇಶ್ ಆಗಿ ಗುರುತಿಸಿಕೊಂಡರು. ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿದ್ದ ಅವರು 150 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದರು. ಚಿತ್ರರಂಗದ ಸೇವೆಗೆ ಗೌರವ ಡಾಕ್ಟರೇಟ್ ಕೂಡ ಲಭಿಸಿತ್ತು.

ಹೀಗೆ ತಮ್ಮ ಸಹಜ ಅಭಿನಯ, ಮಾತು, ನಗುವಿನ ಮೂಲಕ ಅಪಾರ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದ ರಾಜೇಶ್ ಅವರು, ಇಂದು (ಶನಿವಾರ, ಫೆ.19) ನಿಧನರಾಗಿದ್ದಾರೆ. ಅವರ ನಿಧನದಿಂದ ಕನ್ನಡ ಚಿತ್ರರಂಗದ ಮತ್ತೊಂದು ಹಿರಿಯ ಕೊಂಡಿ ಕಳಚಿದಂತಾಗಿದೆ. ಅವರ ನಿಧನಕ್ಕೆ ಕಲಾವಿದರು, ಗಣ್ಯರು ಕಂಬನಿ ಮಿಡಿದಿದ್ದಾರೆ. ಇಂದು ಸಂಜೆ ಅಂತ್ಯಕ್ರಿಯೆ ನೆರವೇರಲಿದೆ.

ಇದನ್ನೂ ಓದಿ:

Actor Rajesh: ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ನಟ ರಾಜೇಶ್ ಅಂತಿಮ ದರ್ಶನಕ್ಕೆ ಅವಕಾಶ: ಅರ್ಜುನ್ ಸರ್ಜಾ ಮಾಹಿತಿ

Actor Rajesh: 150ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ರಾಜೇಶ್; ಅಪರೂಪದ ಫೋಟೋಗಳು ಇಲ್ಲಿವೆ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada