
ನಟ ಜಗ್ಗೇಶ್ (Jaggesh) ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ಜೀವನದ ಅನುಭವಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರೊಂದು ಹೊಸ ಪೋಸ್ಟ್ ಮಾಡಿದ್ದಾರೆ. ಸೆಲೆಬ್ರಿಟಿಗಳ (Celebrity) ಬದುಕು ಯಾವ ರೀತಿ ಇರುತ್ತದೆ ಎಂಬುದನ್ನು ಅವರು ಇದರಲ್ಲಿ ವಿವರಿಸಿದ್ದಾರೆ. ಸೆಲೆಬ್ರಿಟಿಗಳು ಸಾಮಾನ್ಯರಂತೆ ಬದುಕುವುದು ಕಷ್ಟ ಎಂದು ಜಗ್ಗೇಶ್ ಹೇಳಿದ್ದಾರೆ. ‘ಸೆಲೆಬ್ರಿಟಿ ಆಗಲು ಎಲ್ಲರೂ ಒಂದಿಲ್ಲಾ ಒಂದು ರೀತಿ ಯತ್ನಿಸುತ್ತಾರೆ. ಕೆಲವರು ನಟ-ನಟಿ, ಕೆಲವರು ರಂಗಕಲಾವಿದರಾಗಿ, ಕೆಲವರು ಟಿವಿ, ಕೆಲವರು ತಮ್ಮ ಮೊಬೈಲ್ ಮೂಲಕ, ಮತ್ತೆಕೆಲವರು ಯೂಟ್ಯೂಬ್ ಮೂಲಕ.. ಒಟ್ಟಾರೆ ಹೇಗಾದರು ಸರಿ ಸೆಲಿಬ್ರಿಟ್ ಆಗಲೇ ಬೇಕು. ಆಗದಿದ್ದರೆ ಡಿಪ್ರೆಷನ್ಗೆ ಒಳಗಾಗುತ್ತಾರೆ’ ಎನ್ನವುದರೊಂದಿಗೆ ಜಗ್ಗೇಶ್ ಬರಹ ಆರಂಭಿಸಿದ್ದಾರೆ.
‘ಆದರೆ ನಾನು ಸೆಲಿಬ್ರಿಟಿ ಕನಸು ಕಂಡವನಲ್ಲ. ಕಟ್ಟಿಕೊಂಡ ಮಡದಿ ಹಾಗು ಸಾಧಿಸಿ ಸಾಯಬೇಕು ಎಂಬ ಸಾಮಾನ್ಯ ಮನುಷ್ಯನ ಕನಸು ಮಾತ್ರ ಆಗಿತ್ತು. ಯಾವ ದೇವರ ವರವೋ ಯಾವ ಗುರುವಿನ ಕೃಪೆಯೋ ಅನ್ನದ ಸೂರಿನ ಜೊತೆ ದೊಡ್ಡ ಹೆಸರು ಪ್ರಾಪ್ತವಾಯಿತು. ಜೊತೆಗೆ ನನ್ನ ವೈಯಕ್ತಿಕ ಸಂತೋಷ ಕಮರಿಹೋಯಿತು. ಎಲ್ಲರಂತೆ ಎಲ್ಲಾ ಕಡೆ ಎಲ್ಲಾ ಸಂತೋಷ ನೋಡುವ ಯೋಗ ಇಲ್ಲವಾಯಿತು’ ಎಂದಿದ್ದಾರೆ ಜಗ್ಗೇಶ್.
ಇದನ್ನೂ ಓದಿ: ‘ನಂಬಿಕೆ ದ್ರೋಹದ ಕಾಲಮಾನ’; ಫೋಟೋ ತೋರಿಸಿ ಜಗ್ಗೇಶ್ ಹೇಳಿದ್ದಿಷ್ಟು..
‘ಪ್ರತಿದಿನ ಯಾರು ಏನು ಹೇಳುತ್ತಾರೋ, ಯಾರು ತಪ್ಪು ಕಂಡು ಹಂಗಿಸುತ್ತಾರೋ, ನಮ್ಮ ಬಾಯಿಂದ ಬಂದ ಅರಿಯದ ಮಾತು ಬಳಸಿ ಯಾರು ಲೈಕ್ಸ್ ಪಡೆದು ಗಹಗಹಿಸಿ ನಗುತ್ತಾರೋ, ನನ್ನ ಖಾಸಗಿ ಸಂತೋಷವನ್ನು ಕಾಣದಂತೆ ಮೊಬೈಲ್ನಲ್ಲಿ ಚಿತ್ರಿಸಿ ಲೈಕ್ಸ್ಗಾಗಿ ಸಂಭ್ರಮಿಸೋ ಪುಣ್ಯಾತ್ಮರು ಬರುತ್ತಾರೋ, ಯಾರು ನನ್ನ ಕೇಡು ಬಯಸುತ್ತಾರೋ.. ಒಟ್ಟಾರೆ ಸೆಲಿಬ್ರಿಟಿ ಬದುಕು ಜೀವನ ಪರ್ಯಂತ ಜೈಲುವಾಸ ಬದುಕು ಅಥವಾ ಮಹಡಿ ಮನೆಯ ಒಂಟಿ ಭಿಕ್ಷುಕನ ಜೀವನ ಸೆಲಿಬ್ರಿಟಿಯ ಬದುಕು’ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
‘ಇದನ್ನೆಲ್ಲಾ ಬದಿಗೊತ್ತಿ ನಾನು ಎಲ್ಲರಂತೆ ಸ್ವತಂತ್ರ ಜೀವಿಯೋ ಅಥವಾ ಪಂಜರದಿಂದ ಹಾರಿ ಪರಿಸರ ಸವಿಯುವ ಪಕ್ಷಿಯಂತೆ ಒಬ್ಬಂಟಿಯಾಗಿ ಆನಂದ ಪಡೆಯೋ ಯತ್ನ ಮಾಡುತ್ತಿದ್ದೇನೆ. ಇದರಲ್ಲಿ ಪೂರ್ಣಸಂತೋಷ ಸಿಗುತ್ತಿದೆಯೇ? ಸತ್ಯವಾಗಿಯೂ ಇಲ್ಲ. ಏನೋ ಒಂದೆಕಡೆ ಗೂಬೆಯಂತೆ ಇರಬಾರದು ಎಂಬ ಸಣ್ಣ ಪರಿವರ್ತನೆ ಅಷ್ಟೇ. ಈ ಸೆಲಿಬ್ರಿಟಿಯ ಬದುಕು. ನಾನು ನನ್ನ ಸಹಾಯಕ ರಸ್ತೆಯಲ್ಲಿ ಸಿಕ್ಕ ತಾಟಿಲಿಂಗು ವ್ಯಾಪಾರಿಯ ಜೊತೆ ವ್ಯಾಪಾರ ಮುಗಿಸಿ ಅವನಿಗೆ ಸಂತೋಷ ಆಗುವಂತೆ ಅವನ ಬಂಡವಾಳ ಎರಡು ಹಣ್ಣಿಗೆ ನೀಡಿದಾಗ ಅವನ ಕಂಗಳ ಆನಂದಭಾಷ್ಪ ಶಿವನ ಜಲಾಭಿಷೇಕದಂತೆ ಬಾಸವಾಯಿತು. ಸೆಲಿಬ್ರಿಟಿಯ ಬದುಕು ಕಂಡು ನೀವು ಸೆಲಿಬ್ರಿಟಿ ಆಗಬೇಕಾ ಇಲ್ಲಾ ಸೆಲಿಬ್ರಿಟಿಯ ಮೇಲೆ ಪ್ರೀತಿ ಕರುಣೆ ತೋರಬೇಕಾ? ದೇವರು ವಾಸಮಾಡೋ ನಿಮ್ಮ ಹೃದಯಕ್ಕೆ ಸೇರಿದ್ದು. ಜೀವನ ನಾಟಕರಂಗ. ಸಮಾಜವೇ ರಂಗಮಂದಿರ, ದೇವರೇ ಸೂತ್ರದಾರ. ಅಭಿಮಾನಿಗಳೇ ಬಂಧುಮಿತ್ರರು’ ಎಂದು ಜಗ್ಗೇಶ್ ಅವರು ಈ ಬರಹ ಪೂರ್ಣಗೊಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.