ನಟ ರಾಜವರ್ಧನ್ ಪ್ಯಾನ್ ಏಷ್ಯಾ ಸಿನಿಮಾ ಕನಸಿಗೆ ವರ್ಷಗಳಿಂದ ನಡೆದಿದೆ ತಯಾರಿ

‘ಇದೇ ನನಗೆ ಮೊದಲ‌ ಸಿನಿಮಾ ಎನಿಸುತ್ತಿದೆ. ಅಷ್ಟು ತಯಾರಿ ಮಾಡಿಕೊಂಡಿದ್ದೇನೆ. ವಿಶ್ವ ದರ್ಜೆಯ ಸಿನಿಮಾ ಮಾಡುವ ಸಾಮರ್ಥ್ಯ ಇರುವ ತುಂಬಾ ಪ್ರತಿಭಾವಂತ ತಂಡ ನನ್ನ ಬೆನ್ನಿಗೆ ನಿಂತಿದೆ. ಸದ್ಯಕ್ಕೆ ಇಷ್ಟು ಮಾತ್ರ ಹೇಳಬಲ್ಲೆ’ ಎಂದಿರುವ ರಾಜವರ್ಧನ್ ಅವರು, ಇನ್ನುಳಿದ ಮಾಹಿತಿಯನ್ನು ಒಂದೊಂದಾಗಿ ಮುಂದಿನ ದಿನಗಳಲ್ಲಿ ತಿಳಿಸಲಿದ್ದಾರೆ.

ನಟ ರಾಜವರ್ಧನ್ ಪ್ಯಾನ್ ಏಷ್ಯಾ ಸಿನಿಮಾ ಕನಸಿಗೆ ವರ್ಷಗಳಿಂದ ನಡೆದಿದೆ ತಯಾರಿ
Rajavardhan

Updated on: Mar 24, 2026 | 4:51 PM

ಹಿರಿಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ ಈವರೆಗೂ 4 ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದಾರೆ. ಪ್ರತಿ ಸಿನಿಮಾದಲ್ಲಿ ಬೇರೆ ಬೇರೆ ರೀತಿಯ ಪ್ರಯತ್ನ ಮಾಡಿದ್ದರು. ಈಗ ಪ್ಯಾನ್ ಏಷ್ಯಾ ಪ್ರಯತ್ನಕ್ಕೆ ಕೈ ಹಾಕುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅವರ ಹೊಸ ಸಿನಿಮಾಗೆ ಈಗಾಗಲೇ ಮುಹೂರ್ತ ನೇರವೇರಿದೆ. ಗಣಪತಿ ದೇವಸ್ಥಾನದಲ್ಲಿ ಸಿನಿಮಾದ ಮುಹೂರ್ತಕ್ಕೆ ಚಾಲನೆ ನೀಡುವ ಮೂಲಕ ಕೆಲಸಗಳನ್ನು ಆರಂಭಿಸಲಾಗಿದೆ. ಈ ಸಿನಿಮಾಗಾಗಿ ರಾಜವರ್ಧನ್ (Rajavardhan) ಅವರು ಇತ್ತೀಚಿನ ಕೆಲವು ವರ್ಷಗಳಿಂದ ತಯಾರಿ ಮಾಡಿಕೊಂಡಿದ್ದಾರೆ.

ಕೆಜಿಎಫ್, ಕಾಂತಾರ, ಟಾಕ್ಸಿಕ್ ರೀತಿ ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಬೇಕು ಎಂಬುದು ರಾಜವರ್ಧನ್ ಕನಸು. ಅದಕ್ಕಾಗಿ ಒಂದು ತಂಡ ಕಟ್ಟಿಕೊಂಡು ಸುಮಾರು 5 ವರ್ಷಗಳಿಂದ ಸತತವಾಗಿ ಪೂರ್ವ ತಯಾರಿ ನಡೆಸುತ್ತಿದ್ದಾರಂತೆ. ಇದೀಗ ಎಲ್ಲ ತಯಾರಿ ಕೊನೆಯ ಹಂತಕ್ಕೆ ಬಂದಿದೆ. ಸದ್ಯದಲ್ಲೇ ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದ್ದಾರೆ.

ಇತ್ತೀಚೆಗೆ ರಾಜವರ್ಧನ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. ನಟನೆಯಿಂದ ಅವರು ದೂರ ಉಳಿದಿದ್ದು ಕೂಡ ಇದೇ ಹೊಸ ಪ್ರಾಜೆಕ್ಟ್ ಕಾರಣಕ್ಕೆ ಎಂದು ಹೇಳಲಾಗುತ್ತಿದೆ. ಇದನ್ನು ಅವರು ಪ್ಯಾನ್ ಏಷ್ಯಾ ಸಿನಿಮಾ ಎಂದು ಕರೆದಿರುವ ಕಾರಣ ಸಹಜವಾಗಿಯೇ ಸಿನಿಪ್ರಿಯರಲ್ಲಿ ಕೌತುಕ ಮೂಡಿದೆ. ಆ ಬಗ್ಗೆ ಇನ್ನಷ್ಟೇ ಅಪ್​ಡೇಟ್ ಸಿಗಬೇಕಿದೆ.

ಈ ಬಗ್ಗೆ ರಾಜವರ್ಧನ್ ಅವರು ಮಾತನಾಡಿದ್ದಾರೆ. ‘ಬಿಚ್ಚುಗತ್ತಿ ಚಿತ್ರದಿಂದ ಗಜರಾಮ ಸಿನಿಮಾದ ತನಕವೂ ಮಾಡಿದ ಎಲ್ಲಾ ಸಿನಿಮಾಗಳು ಒಂದೊಂದು ಬಗೆಯಲ್ಲಿ ಪಾಠ ಹೇಳಿಕೊಟ್ಟಿವೆ. ಕಳೆದ ವರ್ಷ ನಾನು‌ ಕ್ರಿಯೇಟೀವ್ ಹೆಡ್ ಆಗಿ, ನಿರ್ಮಾಪಕನಾಗಿ ಕೆಲಸ ಮಾಡಿದ್ದ ‘ಕಮಲ್ ಶ್ರೀದೇವಿ’ ಸಿನಿಮಾದೊಳಗಿನ, ಹೊರಗಿನ
ಬೇಕು-ಬೇಡ ಮತ್ತು ವ್ಯವಹಾರಿಕ ಜ್ಞಾನವನ್ನ ಕಲಿಸಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ದರ್ಶನ್ ಬಹಳ ಭಾವನಾತ್ಮಕ ಜೀವಿ, ಹಾಗಾಗಿ ನೋವಾಗಿದೆ: ರಾಜವರ್ಧನ್

‘ನಾನೂ ಮೂಲತಃ ಚಿತ್ರಕಲಾ ವಿದ್ಯಾರ್ಥಿ‌. ಸಿನಿಮಾದೊಳಗೆ ಕೊನೆಯವರೆಗೂ ನಾನು ವಿದ್ಯಾರ್ಥಿಯೇ. ಈವರೆಗೂ ನಾನು ಮಾಡಿದ ಚಿತ್ರಗಳೆಲ್ಲವೂ ಸಿನಿಮಾ ಕೆಲಸಗಳೆಲ್ಲವೂ ಒಂದೊಂದು ಕಲಿಕೆ. ಈವರೆಗೂ ನಾನೇನು ಮಾಡಿದ್ದೇನೂ ಅದೆಲ್ಲವೂ ಅನುಭವ ಅಷ್ಟೇ. ನನ್ನ ಅಸಲಿ ಸಿನಿಮಾ ಪಯಣ ಇಲ್ಲಿಂದ ಆರಂಭ. ನನ್ನ ಸಿನಿಮಾ ಕನಸು, ದಾರಿ, ಗುರಿ ಈ ಪ್ರಾಜೆಕ್ಟ್ ಆಗಲಿದೆ ಎಂಬುದು ನನ್ನ ಭರವಸೆ’ ಎಂದು ರಾಜ್​ವರ್ಧನ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us