ನಿಧನದ ಸುಳ್ಳು ಸುದ್ದಿಗೆ ಸ್ವತಃ ಲಕ್ಷ್ಮೀದೇವಿ ಸ್ಪಷ್ಟನೆ; ಕ್ಷೇಮವಾಗಿದ್ದಾರೆ ಹಿರಿಯ ನಟಿ
ಹಿರಿಯ ನಟಿ ಲಕ್ಷ್ಮೀದೇವಿ ಅವರು ಆರೋಗ್ಯವಾಗಿದ್ದಾರೆ. ಆದರೆ ಅವರು ನಿಧನರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ಸುಳ್ಳು ಸುದ್ದಿಗೆ ಕುಟುಂಬದವರಿಂದ ಹಾಗೂ ಸ್ವತಃ ಲಕ್ಷ್ಮೀದೇವಿ ಅವರಿಂದ ಸ್ಪಷ್ಟನೆ ಸಿಕ್ಕಿದೆ. ಲಕ್ಷ್ಮಿದೇವಿ ಅವರು ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ತಾವು ಕ್ಷೇಮವಾಗಿರುವುದಾಗಿ ತಿಳಿಸಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ಅಭಿನೇತ್ರಿ ಲಕ್ಷ್ಮೀದೇವಿ ಅವರು ನಿಧನರಾಗಿದ್ದಾರೆ ಎಂಬ ವದಂತಿಗೆ ಕುಟುಂಬದವರು ಸ್ಪಷ್ಟನೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಡಿದ್ದ ಸುಳ್ಳು ಸುದ್ದಿಯನ್ನು ಮೊಮ್ಮಗಳು ದೀಪಿಕಾ ಶರಣ್ ಅವರು ತಳ್ಳಿಹಾಕಿದ್ದಾರೆ. ‘ಲಕ್ಷ್ಮೀದೇವಿ ಅವರು ಆರೋಗ್ಯವಾಗಿದ್ದಾರೆ. ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ’ ಎಂದು ಅವರು ಮನವಿ ಮಾಡಿದ್ದಾರೆ. ಲಕ್ಷ್ಮೀದೇವಿ ಅವರಿಗೆ 92 ವರ್ಷ ವಯಸ್ಸಾಗಿದೆ. ಅವರು ನಿಧನರಾಗಿಲ್ಲ ಎಂಬ ವಿಷಯವನ್ನು ಕುಟುಂಬದವರು ಖಚಿತಪಡಿಸಿದ್ದಾರೆ. ವಿಡಿಯೋ ಮೂಲಕ ಲಕ್ಷ್ಮೀದೇವಿ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಹಿರಿಯ ಕಲಾವಿದರ ಬಗ್ಗೆ ಆಗಾಗ ಸುಳ್ಳು ಸುದ್ದಿ ಹಬ್ಬಿಸಲಾಗುತ್ತದೆ. ಈ ಹಿಂದೆ ಹಿರಿಯ ನಟ ದೊಡ್ಡಣ್ಣ ಅವರ ಬಗ್ಗೆ ಕೂಡ ಇಂಥ ಫೇಕ್ ನ್ಯೂಸ್ ಹರಿದಾಡಿತ್ತು. ಅವರು ಕೂಡ ಸ್ವತಃ ಸ್ಪಷ್ಟನೆ ನೀಡುವ ಮೂಲಕ ಸುಳ್ಳು ಸುದ್ದಿಯನ್ನು ತಳ್ಳಿಹಾಕಿದ್ದರು. ಈಗ ಲಕ್ಷ್ಮೀದೇವಿ ಅವರು ಕೂಡ ಸ್ಪಷ್ಟನೆ ನೀಡಿದ್ದಾರೆ.
ಕಪ್ಪು-ಬಿಳುಪು ಕಾಲದಿಂದಲೂ ಲಕ್ಷ್ಮೀದೇವಿ ಅವರು ಸ್ಯಾಂಡಲ್‌ವುಡ್‌ನಲ್ಲಿ ಸಕ್ರಿಯರಾಗಿದ್ದಾರೆ. ಸುಮಾರು 1000ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದ ಖ್ಯಾತಿ ಅವರಿಗೆ ಸಲ್ಲುತ್ತದೆ. ವಿವಿಧ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಪೋಷಕ ಪಾತ್ರಗಳ ಮೂಲಕ ಅವರು ಮನರಂಜನೆ ನೀಡಿದ್ದಾರೆ.
ಲಕ್ಷ್ಮೀದೇವಿ ಅವರು ‘ಶ್ರೀನಿವಾಸ ಕಲ್ಯಾಣ’ ಚಿತ್ರದ ಮೂಲಕ ತಮ್ಮ ಅಭಿನಯದ ಪಯಣವನ್ನು ಆರಂಭಿಸಿದರು. ಕನ್ನಡ ಚಿತ್ರರಂಗದ ದಿಗ್ಗಜರೊಂದಿಗೆ ಅಭಿನಯಿಸಿದ ಹಿರಿಮೆ ಅವರದ್ದಾಗಿದೆ. ‘ಭಕ್ತ ಕನಕದಾಸ’, ‘ಬಂಗಾರದ ಮನುಷ್ಯ’, ಹಾಗೂ ‘ವೀರ ಕೇಸರಿ’ ರೀತಿಯ ಅತ್ಯಂತ ಯಶಸ್ವಿ ಮತ್ತು ಐತಿಹಾಸಿಕ ಚಿತ್ರಗಳಲ್ಲಿ ಅಭಿನಯಿಸಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: ‘ದೊಡ್ಡಣ್ಣ ನಿಧನ’ ಅಂತ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ನಡುಕ; ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ
ತಮ್ಮ ಸುದೀರ್ಘ ನಟನಾ ಪಯಣದಲ್ಲಿ ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಿರುವ ಲಕ್ಷ್ಮೀದೇವಿ ಅವರು ‘ಕಳ್ಳರ ಕಳ್ಳ’ ಸಿನಿಮಾದ ಅದ್ಭುತ ನಟನೆಗಾಗಿ ರಾಜ್ಯ ಪ್ರಶಸ್ತಿ ಪಡೆದರು. ಪೋಷಕ ನಟಿಯಾಗಿ, ತಾಯಿಯಾಗಿ ಹಾಗೂ ವಿಭಿನ್ನ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




