Mangli: ಕನ್ನಡಕ್ಕೆ ಬಂದ ಮಂಗ್ಲಿ! ‘ಕಣ್ಣೇ ಅದಿರಿಂದಿ..’ ಬಳಿಕ ‘ಕರಿಯಾ ಐ ಲವ್​ ಯೂ’ ಎಂದ ಸೆನ್ಸೇಷನಲ್​ ಸಿಂಗರ್​

Singer Mangli | Satyavathi: ತೆಲುಗಿನ ಖ್ಯಾತ ಗಾಯಕಿ ಮಂಗ್ಲಿ ಈಗ ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದ್ದಾರೆ. ‘ಕಣ್ಣೇ ಅದಿರಿಂದಿ..’ ಸೂಪರ್​ ಹಿಟ್​ ಆದ ಬಳಿಕ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಬಂದಿದೆ.

Mangli: ಕನ್ನಡಕ್ಕೆ ಬಂದ ಮಂಗ್ಲಿ! ‘ಕಣ್ಣೇ ಅದಿರಿಂದಿ..’ ಬಳಿಕ ‘ಕರಿಯಾ ಐ ಲವ್​ ಯೂ’ ಎಂದ ಸೆನ್ಸೇಷನಲ್​ ಸಿಂಗರ್​
ಕರಿಯಾ ಐ ಲವ್​ ಯೂ ಚಿತ್ರತಂಡದ ಜೊತೆ ಗಾಯಕಿ ಮಂಗ್ಲಿ
Edited By:

Updated on: Apr 05, 2021 | 11:25 AM

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ನಟನೆಯ ರಾಬರ್ಟ್​ ಸಿನಿಮಾದ ತೆಲುಗು ಅವತರಣಿಕೆಯ ‘ಕಣ್ಣೇ ಅದಿರಿಂದಿ’ ಹಾಡು ಯಾವ ಮಟ್ಟಕ್ಕೆ ಜನಪ್ರಿಯ ಆಯಿತು ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಆ ಗೀತೆ ಬಿಡುಗಡೆ ಆದ ಬಳಿಕ ಗಾಯಕಿ ಮಂಗ್ಲಿ ಅವರ ಖ್ಯಾತಿ ಕರ್ನಾಟಕದಲ್ಲಿ ಹೆಚ್ಚಾಯಿತು. ರಾಬರ್ಟ್​ ಸಿನಿಮಾದ ಪ್ರೀ ರಿಲೀಸ್​ ಇವೆಂಟ್​ನ ವೇದಿಕೆಯಲ್ಲಿ ಮಂಗ್ಲಿ ಹಾಡಿದ್ದು ಸಿಕ್ಕಾಪಟ್ಟೆ ವೈರಲ್​ ಆಯಿತು. ಅದರಿಂದಾಗಿ ಮಂಗ್ಲಿ ಅಭಿಮಾನಿಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆ ಆಯಿತು. ಹಾಗಾದರೆ ಅವರು ಕನ್ನಡದಲ್ಲಿ ಹಾಡುವುದು ಯಾವಾಗ ಎಂಬ ಪ್ರಶ್ನೆ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

ಮಂಗ್ಲಿ ಅವರನ್ನು ಕನ್ನಡಕ್ಕೆ ಕರೆತರುವ ಪ್ರಯತ್ನ ಈಗ ಯಶಸ್ವಿ ಆಗಿದೆ. ‘ಕರಿಯಾ ಐ ಲವ್​ ಯೂ’ ಎಂಬ ಸಿನಿಮಾದ ಒಂದು ಹಾಡಿಗೆ ಮಂಗ್ಲಿ ಧ್ವನಿ ನೀಡಿದ್ದಾರೆ. ‘ಬಿಟ್​ ಬಂದ್​ ಹಳ್ಳಿಯಿಂದ ಬಿಟ್ಯಾಕ್​ ಬಂದೆ..’ ಎನ್ನುವ ಗೀತೆ ಅವರ ಕಂಠದಲ್ಲಿ ಮೂಡಿಬಂದಿದೆ. ಕೆಲವೇ ದಿನಗಳ ಹಿಂದೆ ಈ ಹಾಡಿನ ರೆಕಾರ್ಡಿಂಗ್​ ನಡೆದಿದೆ. ಯಾವಾಗ ರಿಲೀಸ್​ ಆಗಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಮೂಡಿದೆ.

ಲೆಜೆಂಡರಿ ಸಂಗೀತ ನಿರ್ದೇಶಕ ಹಂಸಲೇಖ ಅವರ ಶಿಷ್ಯ ಲೋಕೇಶ್​ ‘ಕರಿಯಾ ಐ ಲವ್​ ಯೂ’ ಸಿನಿಮಾಗೆ ಸಂಗೀತ ಸಂಯೋಜಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ಮಂಜುನಾಥ್​ ಅವರು ಮಂಗ್ಲಿಯನ್ನು ಕನ್ನಡಕ್ಕೆ ಕರೆತಂದವರು. ಮಂಜುನಾಥ್​ ಅವರೇ ಈ ಸಿನಿಮಾದ ಹೀರೋ. ಈ ಚಿತ್ರಕ್ಕೆ ತಿಪ್ಪೇಶ್​ ನಿರ್ದೇಶನ ಮಾಡಿದ್ದಾರೆ.

ಮಂಗ್ಲಿ ಅವರದ್ದು ಕಂಚಿನ ಕಂಠ. ಜಾನಪದ ಗೀತೆಗಳನ್ನು ತಮ್ಮದೇ ಶೈಲಿಯಲ್ಲಿ ಹೇಳುವ ಮೂಲಕ ಅವರು ಗುರುತಿಸಿಕೊಂಡಿದ್ದಾರೆ. ಅಂತಹ ಹಾಡುಗಳಿಗೆ ಅವರ ಧ್ವನಿ ವಿಶೇಷವಾಗಿ ಹೊಂದಿಕೆ ಆಗುತ್ತದೆ. ಈಗ ಅವರು ಹಾಡಿರುವ ‘ಬಿಟ್​ ಬಂದ್​ ಹಳ್ಳಿಯಿಂದ ಬಿಟ್ಯಾಕ್​ ಬಂದೆ..’ ಯಾವ ರೀತಿ ಇರಬಹುದು ಎಂಬ ಕೌತುಕ ಮೂಡಿದೆ.

ಪರಭಾಷೆಯಿಂದ ಅನೇಕ ಗಾಯಕರು ಕನ್ನಡದಲ್ಲಿ ಯಶಸ್ವಿ ಆಗಿದ್ದಾರೆ. ಕನ್ನಡಿಗರ ಮನ ಗೆದ್ದಿದ್ದಾರೆ. ಶ್ರೇಯಾ ಘೋಷಾಲ್​, ಸೋನು ನಿಗಮ್​ ಮುಂತಾದ ಗಾಯಕರ ರೀತಿಯೇ ಮಂಗ್ಲಿ ಕೂಡ ಕನ್ನಡದಲ್ಲಿ ಮಿಂಚುತ್ತಾರಾ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ‘ರಾಬರ್ಟ್​’ ಗಾಯಕಿ ಮಂಗ್ಲಿ ಹಾಡಿಗೆ ಕುಣಿದು ಕುಪ್ಪಳಿಸಿದ ಸದ್ಗುರು! ‘ಕಣ್ಣೇ ಅದಿರಿಂದಿ’ ಬಳಿಕ ಮತ್ತೊಮ್ಮೆ ಮೋಡಿ

 

(Kanne Adirindi singer Mangli new Kannada song in Kariya I Love You movie)

Published On - 11:09 am, Mon, 5 April 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us