
ಕಾಂತಾರ: ಚಾಪ್ಟರ್ 1’ ಸಿನಿಮಾದ ದೃಶ್ಯವೊಂದರಲ್ಲಿ ನೀರಿನ ಬಾಟಲಿ ಕಾಣಿಸಿಕೊಂಡಿದೆ. ‘ಬ್ರಹ್ಮಕಳಶ’ ಹಾಡಿನಲ್ಲಿ ಎಲ್ಲರೂ ಊಟ ಮಾಡುತ್ತಿರುವ ದೃಶ್ಯದಲ್ಲಿ ಬಿಸ್ಲೆರಿ ನೀರಿನ ಬಾಟಲಿ ಕಾಣಿಸಿಕೊಂಡಿದೆ. ಇಷ್ಟು ಶ್ರಮ ಹಾಕಿ ಮಾಡಿದ ಸಿನಿಮಾನಲ್ಲಿ ಈ ರೀತಿಯ ಸಿಲ್ಲಿ ತಪ್ಪು ಕಣ್ಣಿಗೆ ಕಾಣಲಿಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ. ಅಂದಹಾಗೆ ಈ ರೀತಿಯ ತಪ್ಪುಗಳು ಸಿನಿಮಾಕ್ಕೆ ಹೊಸದೇನಲ್ಲ. ಸಾವಿರಾರು ಕೋಟಿ ಬಜೆಟ್ ಹಾಕಿ, ಸಾವಿರಾರು ಜನರ ತಂಡವುಳ್ಳ ಸಿನಿಮಾಗಳಲ್ಲಿಯೂ ಇಂಥಹಾ ತಪ್ಪುಗಳು ಹಲವು ಆಗಿವೆ. ಇಲ್ಲಿದೆ ಅಂಥಹಾ ಕೆಲ ಸಿನಿಮಾ ಹಾಗೂ ವೆಬ್ ಸರಣಿಗಳ ಪಟ್ಟಿ...

‘ಟೈಟ್ಯಾನಿಕ್’ ಸಿನಿಮಾ ವಿಶ್ವದಲ್ಲೇ ಅತ್ಯಂತ ಜನಪ್ರಿಯ ಸಿನಿಮಾ. ಹಲವಾರು ಆಸ್ಕರ್ಗಳನ್ನು ಗೆದ್ದಿರುವ ಸಿನಿಮಾ. ಆದರೆ ಈ ಸಿನಿಮಾದ ಕೊನೆಯಲ್ಲಿ ನಾಯಕಿ ನೀರಿನ ಮೇಲೆ ಆ ಅರ್ಧ ಮುರಿದ ಬಾಗಿಲಿನ ಮೇಲೆ ಮಲಗಿದ್ದಾಗ ಮೇಲೆ ನೋಡುತ್ತಾಳೆ ಆಗ ಅಲ್ಲಿ ನಕ್ಷತ್ರಗಳ ಗುಚ್ಛ ಕಾಣಿಸುತ್ತದೆ. ಆದರೆ ನಿಜವಾಗಿ ಟೈಟಾನಿಕ್ ಮುಳುಗಿದ ದಿನ ಆ ಸ್ಥಳದಲ್ಲಿ ಇದ್ದ ನಕ್ಷತ್ರ ಗುಚ್ಛ ಬೇರೆಯದ್ದೇ ರೀತಿಯದ್ದಾಗಿತ್ತು. ಅದೇ ಸಿನಿಮಾದ ಮುಂಚಿನ ದೃಶ್ಯದಲ್ಲಿ ಬಳಸಲಾಗಿದ್ದ ನಕ್ಷತ್ರ ತುಂಬಿದ್ದ ಆಕಾಶದ ದೃಶ್ಯವನ್ನೇ ನಿರ್ದೇಶಕ ಜೇಮ್ಸ್ ಕ್ಯಾಮರನ್ ಕೊನೆಯ ದೃಶ್ಯದಲ್ಲಿಯೂ ಬಳಸಿದ್ದರು. ಇದು ಟೀಕೆಗೆ ಗುರಿಯಾಗಿತ್ತು.

‘ಗೇಮ್ ಆಫ್ ಥ್ರೋನ್ಸ್’ ವಿಶ್ವವೇ ಮೆಚ್ಚಿರುವ, ವಿಶ್ವದ ನಂಬರ್ 1 ವೆಬ್ ಸರಣಿ. ಎಂಟು ಸೀಸನ್ಗಳ ಕಾಲ ಇದು ಪ್ರಸಾರವಾಗಿತ್ತು. ಆದರೆ ಎಂಟನೇ ಸೀಸನ್ನ ಮೂರನೇ ಎಪಿಸೋಡ್ನಲ್ಲಿ ಶೋನಲ್ಲಿ ಒಂದು ಕಾಫಿ ಕಪ್ ಕಾಣಿಸಿತು. ಸಾವಿರಾರು ವರ್ಷಗಳ ಹಿಂದಿನ ಕತೆಯುಳ್ಳ ಶೋನಲ್ಲಿ ಕಾಫಿ ಕಪ್. ಚಿತ್ರತಂಡ ಕ್ಷಮೆ ಕೋರಿತಷ್ಟೆ.

2000 ರಲ್ಲಿ ಬಿಡುಗಡೆ ಆಗಿದ್ದ ‘ಗ್ಲಾಡಿಯೇಟರ್’ ಸಿನಿಮಾ ಬರೋಬ್ಬರಿ ಐದು ಆಸ್ಕರ್ಗಳನ್ನು ಗೆದ್ದಿದೆ. ರೋಮ್ ಸಾಮ್ರಾಜ್ಯದ ಕಾಲದ ಕತೆ ಈ ಸಿನಿಮಾನಲ್ಲಿದೆ. ಸಿನಿಮಾದ ದೃಶ್ಯವೊಂದರಲ್ಲಿ ರಥಗಳಲ್ಲಿ ಚೇಸ್ ನಡೆಯುತ್ತಿರುತ್ತದೆ. ಬಿದ್ದ ರಥದಲ್ಲಿ ಗ್ಯಾಸ್ ಎಂಜಿನ್ ಕಾಣಿಸುತ್ತದೆ. ಯೂಟ್ಯೂಬ್ನಲ್ಲಿ ವಿಡಿಯೋ ಈಗಲೂ ಲಭ್ಯವಿದೆ.

ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿರುವ ಅತ್ಯದ್ಭುತ ಸಂಭಾಷಣೆಗಳು, ಆಕ್ಷನ್ ದೃಶ್ಯಗಳನ್ನು ಹೊಂದಿರುವ ‘ಬ್ರೇವ್ಹಾರ್ಟ್’ 1280ರಲ್ಲಿ ನಡೆವ ಕತೆಯನ್ನು ಒಳಗೊಂಡಿದೆ. ಸಿನಿಮಾದ ಒಂದು ದೃಶ್ಯದಲ್ಲಿ ದೂರದಲ್ಲಿ ಕಾರೊಂದು ಪಾರ್ಕ್ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ.

ಲಾರ್ಡ್ ಆಫ್ ದಿ ರಿಂಗ್ಸ್ ಸಿನಿಮಾನಲ್ಲಿ ಗೆಂಡಾಲ್ಫ್ ಪಾತ್ರ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಒಂದು. ಯುದ್ಧದ ದೃಶ್ಯವೊಂದರಲ್ಲಿ ಗಾಂಡಾಲ್ಫ್ ಕೈಯಿಗೆ ಆಧುನಿಕ ವಾಚ್ ಒಂದನ್ನು ಕಟ್ಟಿಕೊಂಡಿರುವುದನ್ನು ಅಭಿಮಾನಿಗಳು ಹುಡುಕಿ ತೋರಿಸಿದ್ದರು.

ಪೈರೇಟ್ಸ್ ಆಫ್ ದಿ ಕೆರೆಬಿಯನ್ ಬಿಡುಗಡೆ ಆದಾಗಲೆಲ್ಲ ಬಾಕ್ಸ್ ಆಫೀಸ್ ಅನ್ನು ಕೊಳ್ಳೆ ಹೊಡೆದಿದೆ. 2003 ರಲ್ಲಿ ಬಿಡುಗಡೆ ಆದ ‘ಪೇರೇಟ್ಸ್ ಆಫ್ ದಿ ಕೆರೆಬಿಯನ್’ ಸಿನಿಮಾದ ದೃಶ್ಯವೊಂದರಲ್ಲಿ ಸೆಟ್ನಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬ ಫ್ರೇಮ್ನಲ್ಲಿ ಕಾಣಿಸಿಕೊಳ್ಳುತ್ತಾನೆ.

ಹಲವು ಆಸ್ಕರ್ಗಳನ್ನು ಗೆದ್ದಿರುವ ಹಾಲಿವುಡ್ನ ಅತ್ಯುತ್ತಮ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿರುವ ‘ಲಾರ್ಡ್ ಆಫ್ ದಿ ರಿಂಗ್ಸ್’ ಸಿನಿಮಾದ ದೃಶ್ಯವೊಂದರಲ್ಲಿ ಬಲು ದೂರದಲ್ಲಿ ಕಾರೊಂದು ಹಾದು ಹೋಗುತ್ತಿರುವ ದೃಶ್ಯವಿದೆ.
Published On - 5:00 pm, Tue, 14 October 25