ಪ್ರೇಮಿಗಳ ಗಮನಕ್ಕೆ: ಲಿವ್ ಇನ್ ರಿಲೇಶನ್‌ಶಿಪ್ ಕಥೆ ಇರುವ ಸಿನಿಮಾದಲ್ಲಿ ಬಿಗ್ ಬಾಸ್ ಶಶಿ
ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಕೆಲವು ಪ್ರೇಮಿಗಳು ಜೊತೆಯಾಗಿ ವಾಸಿಸುತ್ತಿದ್ದರು. ಆ ಕಥೆಯ ಎಳೆಯನ್ನು ಇಟ್ಟುಕೊಂಡು ‘ಪ್ರೇಮಿಗಳ ಗಮನಕ್ಕೆ’ ಸಿನಿಮಾ ಮಾಡಲಾಗಿದೆ. ಬಿಗ್ ಬಾಸ್ ಶಶಿ ಮತ್ತು ಚಿರಶ್ರೀ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಟ್ರೇಲರ್ ಬಿಡುಗಡೆ ಮಾಡಿ, ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.

ಆಧುನಿಕ ರೈತ, ‘ಬಿಗ್ ಬಾಸ್ ಕನ್ನಡ ಸೀಸನ್ 6’ ವಿಜೇತ ಶಶಿ (Bigg Boss Shashi) ಅವರು ನಟನೆಯಲ್ಲೂ ಆಸಕ್ತಿ ಹೊಂದಿದ್ದಾರೆ. ಅವರು ನಟಿಸಿರುವ ಹೊಸ ಸಿನಿಮಾದ ಬಗ್ಗೆ ಅಪ್ಡೇಟ್ ಸಿಕ್ಕಿದೆ. ಲಿವ್ ಇನ್ ರಿಲೀಶನ್ಶೀಪ್ (Live in Relationship) ಕಹಾನಿ ಇರುವ ಸಿನಿಮಾದಲ್ಲಿ ಶಶಿ ಅವರು ಅಭಿನಯಿಸಿದ್ದಾರೆ. ಈ ಸಿನಿಮಾಗೆ ‘ಪ್ರೇಮಿಗಳ ಗಮನಕ್ಕೆ’ (Premigala Gamanakke) ಎಂದು ಶೀರ್ಷಿಕೆ ಇಡಲಾಗಿದೆ. ‘ಸಿಟಾಡೆಲ್ ಫಿಲ್ಮ್ಸ್’ ಮತ್ತು ‘ಜೊಯಿಟಾ ಎಂಟರ್‌ಟೈನ್‌ಮೆಂಟ್ಸ್’ ಮೂಲಕ ಈ ಸಿನಿಮಾ ಸಿದ್ಧವಾಗಿದೆ. ಸುಬ್ಬು ಮತ್ತು ಯಕ್ಕಂಟಿ ರಾಜಶೇಖರ ರೆಡ್ಡಿ ಅವರು ‘ಪ್ರೇಮಿಗಳ ಗಮನಕ್ಕೆ’ ಸಿನಿಮಾವನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆ ಆಯಿತು.
ನಗರ ಪ್ರದೇಶಗಳಲ್ಲಿ ಲಿವ್ ಇನ್ ರಿಲೇಶನ್‌ಶಿಪ್ ಹೆಚ್ಚಾಗುತ್ತಿದೆ. ಐಟಿ, ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಲ್ಲಿ ಈ ರೀತಿಯ ಸಂಬಂಧಗಳು ಹೆಚ್ಚಾಗಿ ಕಂಡುಬರುತ್ತದೆ. ಯುವಕ-ಯುವತಿಯರು ಮದುವೆಯಾಗದೇ ಒಂದೇ ಮನೆಯಲ್ಲಿ ವಾಸಿಸುವುದಕ್ಕೆ ಲಿವ್ ಇನ್ ರಿಲೀಶನ್ಶೀಪ್ ಎನ್ನುತ್ತಾರೆ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಈ ರೀತಿ ಒಟ್ಟಿಗೆ ವಾಸವಿದ್ದ ಪ್ರೇಮಿಗಳ ಕಹಾನಿಯನ್ನು ‘ಪ್ರೇಮಿಗಳ ಗಮನಕ್ಕೆ’ ಸಿನಿಮಾದಲ್ಲಿ ತೋರಿಸಲಾಗುತ್ತಿದೆ.
‘ಪ್ರೇಮಿಗಳ ಗಮನಕ್ಕೆ’ ಸಿನಿಮಾ ಟ್ರೇಲರ್:
ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆ ಆಗಲಿದೆ. ಈಗ ಟ್ರೇಲರ್ ಮೂಲಕ ಗಮನ ಸೆಳೆಯಲಾಗಿದೆ. ಬಿಗ್ ಬಾಸ್ ಶಶಿ ಹೀರೋ ಆಗಿ ನಟಿಸಿರುವ ಈ ಸಿನಿಮಾದಲ್ಲಿ ಚಿರಶ್ರೀ ಅವರು ನಾಯಕಿ ಆಗಿದ್ದಾರೆ. ‘ನಿರ್ಮಾಪಕ ಸುಬ್ಬು ಅವರು ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ವಿನ್ಸೆಂಟ್ ಇನ್ಬರಾಜ್ ಅವರು ಈ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅರುಳ್ ಸೆಲ್ವನ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಡೆನ್ನಿಸ್ ವಲ್ಲಭನ್ ಅವರ ಸಂಗೀತ ನಿರ್ದೇಶನ ಈ ಸಿನಿಮಾಗಿದೆ.

Premigala Gamanakke Movie Team
ಅಂದಹಾಗೆ, ಇದು ನೈಜ ಘಟನೆ ಆಧಾರಿತ ಸಿನಿಮಾ. 5 ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ನಡೆದ ಘಟನೆಯೇ ಈ ಸಿನಿಮಾಗೆ ಪ್ರೇರಣೆ ಎಂದು ಚಿತ್ರತಂಡ ಹೇಳಿದೆ. ವಿಶೇಷ ಏನೆಂದರೆ, ಇಡೀ ಸಿನಿಮಾದ ಕಥೆ ನಡೆಯುವುದು ಒಂದೇ ಮನೆಯಲ್ಲಿ. ಎರಡೇ ಪಾತ್ರಗಳು ಪ್ರಮುಖವಾಗಿ ಇರಲಿವೆ. ಜಾಗೃತಿ ಮೂಡಿಸುವುದರ ಜೊತೆಗೆ ಮನರಂಜನೆ ನೀಡುವುದು ಚಿತ್ರದ ಆಶಯ. ಬೆಂಗಳೂರಿನ ಉತ್ತರಹಳ್ಳಿಯ ಮನೆಯೊಂದರಲ್ಲಿ ಶೂಟಿಂಗ್ ಮಾಡಲಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಇದನ್ನೂ ಓದಿ: ಸ್ಪರ್ಧಿಗಳಿಗೆ ಕೊನೆಯ ಅವಕಾಶ ಕೊಟ್ಟ ‘ಬಿಗ್ ಬಾಸ್’; ಮಾಡು ಇಲ್ಲವೇ ಮಡಿ ಆಯ್ಕೆ
‘ಇದೇ ತಿಂಗಳ ಅಂತ್ಯದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವ ಪ್ಲ್ಯಾನ್ ಇದೆ’ ಎಂದು ನಿರ್ಮಾಪಕ ಸುಬ್ಬು ಹೇಳಿದ್ದಾರೆ. ಸಿನಿಮಾ ಉತ್ತಮವಾಗಿ ಮೂಡಿಬಂದಿದೆ ಎಂದು ಮತ್ತೊಬ್ಬ ನಿರ್ಮಾಪಕ ಯಕ್ಕಂಟಿ ರಾಜಶೇಖರ ರೆಡ್ಡಿ ಹೇಳಿದರು. ‘ಈಗಿನ ಕಾಲದ ಯುವಕರಿಗೆ ಈ ಸಿನಿಮಾ ಕನೆಕ್ಟ್ ಆಗುತ್ತದೆ’ ಎಂದು ಶಶಿ ಹೇಳಿದರು. ಐಟಿ ಕಂಪನಿ ಉದ್ಯೋಗಿಯ ಪಾತ್ರ ಮಾಡಿರುವುದಾಗಿ ಚಿರಶ್ರೀ ಮಾಹಿತಿ ನೀಡಿದರು. ಇದು ಅವರ 10ನೇ ಸಿನಿಮಾ. ಈ ಚಿತ್ರಕ್ಕೆ ಸಹ-ನಿರ್ದೇಶಕರಾಗಿ ಕೃಷ್ಣ ಅವರು ಕೆಲಸ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:13 pm, Tue, 14 October 25




