ದಂತಕಥೆಯ ದೈವಿಕ ಮೂಲ: ‘ಕಾಂತಾರ’ದ ಅದ್ಭುತ ಅನುಭವಕ್ಕೆ ತಯಾರಾಗಿ

Kantara Chapter 1: ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡಿ, ರಿಷಬ್ ಶೆಟ್ಟಿ ನಿರ್ದೇಶಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಹೊಸ ಪೋಸ್ಟರ್ ಒಂದನ್ನು ಇತ್ತೀಚೆಗಷ್ಟೆ ಹೊಂಬಾಳೆ ಫಿಲಮ್ಸ್ ಮತ್ತು ರಿಷಬ್ ಶೆಟ್ಟಿ ಹಂಚಿಕೊಂಡಿದ್ದಾರೆ. ಜೊತೆಗೆ ಸಿನಿಮಾ ಬಿಡುಗಡೆ ಬಗ್ಗೆ ಅಪ್​​ಡೇಟ್ ಒಂದನ್ನು ನೀಡಿದ್ದಾರೆ.

ದಂತಕಥೆಯ ದೈವಿಕ ಮೂಲ: ‘ಕಾಂತಾರ’ದ ಅದ್ಭುತ ಅನುಭವಕ್ಕೆ ತಯಾರಾಗಿ
Rishab Shetty

Updated on: Sep 19, 2025 | 11:22 AM

ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಸಿನಿಮಾ ಅಕ್ಟೋಬರ್ 2 ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಅಂತಿಮ ಹಂತದಲ್ಲಿವೆ. ಸಿನಿಮಾದ ಪ್ರಚಾರ ಕಾರ್ಯ ನಿಧಾನಕ್ಕೆ ಸಾಗಿದ್ದು, ಕೆಲವೇ ದಿನಗಳಲ್ಲಿ ಸಿನಿಮಾದ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಚಿತ್ರತಂಡ ಆಯೋಜಿಸಲಿದೆ ಎಂಬ ಸುದ್ದಿ ಇದೆ. ಇದರ ನಡುವೆ ಸಿನಿಮಾದ ಅದ್ಧೂರಿ ಬಿಡುಗಡೆಗೆ ಹೊಂಬಾಳೆ ಫಿಲಮ್ಸ್ ವೇದಿಕೆ ಸಜ್ಜುಗೊಳಿಸುತ್ತಿದ್ದು, ಭಾರಿ ಬಜೆಟ್​​ನಲ್ಲಿ ನಿರ್ಮಾಣವಾದ ಈ ಸಿನಿಮಾದ ಪೂರ್ಣ ಅನುಭವವನ್ನು ಪ್ರೇಕ್ಷಕರಿಗೆ ನೀಡಲು ಸಜ್ಜಾಗಿದೆ.

ಹೊಂಬಾಳೆ ಫಿಲಮ್ಸ್ ಮತ್ತು ರಿಷಬ್ ಶೆಟ್ಟಿ ನಿನ್ನೆಯಷ್ಟೆ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ಪೋಸ್ಟರ್​​​ನಲ್ಲಿ ರಿಷಬ್ ಶೆಟ್ಟಿ ಭಾವಪರವಶರಾಗಿ ಢೊಳ್ಳು ಭಾರಿಸುತ್ತಿರುವ ಚಿತ್ರವಿದೆ. ಚಿತ್ರದಲ್ಲಿ ಅವರ ಉದ್ದನೆಯ ಚೂಪು ಗಡ್ಡ ಮತ್ತು ಜಡೆ ಗಮನ ಸೆಳೆಯುತ್ತಿದೆ. ‘ದಂತಕಥೆಯ ದೈವಿಕ ಮೂಲದ ಅನಾವರಣ ಆಗಲಿದೆ’ ಎಂದು ಟ್ವೀಟ್ ಮಾಡಿದ್ದಾರೆ ರಿಷಬ್ ಶೆಟ್ಟಿ.

ಐಮ್ಯಾಕ್ಸ್ ಜೊತೆಗೆ ಒಪ್ಪಂದ ಮಾಡಿರುವ ಚಿತ್ರತಂಡ, ಐಮ್ಯಾಕ್ಸ್ ಸ್ಕ್ರೀನ್​​ಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲಿದ್ದು, ಹೊಂಬಾಳೆ ಹೇಳಿರುವಂತೆ, ‘ಹಿಂದೆಂದೂ ನೋಡಿರದ ಮಾದರಿಯ ಸಿನಿಮಾ ಅನುಭವವನ್ನು ಇದು ನೀಡಲಿದೆ’ ಎಂದಿದ್ದಾರೆ. ಉತ್ಕೃಷ್ಟ ಗುಣಮಟ್ಟದ ಕ್ಯಾಮೆರಾ ಮತ್ತು ಸೌಂಡ್ ಅನ್ನು ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕಾಗಿ ಬಳಸಲಾಗಿದ್ದು, ಐಮ್ಯಾಕ್ಸ್​​ನಲ್ಲಿ ಅದರ ಸಂಪೂರ್ಣ ಅನುಭವವನ್ನು ಪಡೆಯಬಹುದಾಗಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾ 2022 ರ ‘ಕಾಂತಾರ’ ಸಿನಿಮಾದ ಸೀಕ್ವೆಲ್ ಇದಾಗಿದೆ. 2022 ರಲ್ಲಿ ಬಿಡುಗಡೆ ಆಗಿದ್ದ ‘ಕಾಂತಾರ’ ಸಿನಿಮಾಕ್ಕೂ ಬಹಳ ಹಿಂದಿನ ಕತೆಯನ್ನು ಈ ಸಿನಿಮಾನಲ್ಲಿ ಹೇಳಲಾಗಿದೆ. ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡಿಗನಾದರೂ ಬಾಲಿವುಡ್​​ನಲ್ಲಿ ಮಿಂಚುತ್ತಿರುವ ಗುಲ್ಷನ್ ದೇವಯ್ಯ ನಟಿಸಿದ್ದಾರೆ. ಹಲವು ಹಾಲಿವುಡ್ ನುರಿತ ತಜ್ಞರು ಈ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ