
ಹೊಂಬಾಳೆ ಫಿಲಮ್ಸ್ (Hombale Films) ನಿರ್ಮಾಣ ಮಾಡಿ, ರಿಷಬ್ ಶೆಟ್ಟಿ ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆದಿದೆ. ಭಾರತದಾದ್ಯಂತ ಸಿನಿಮಾ ಅತ್ಯುತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದ್ದು, ಆಂಧ್ರ, ತೆಲಂಗಾಣ ವಿಶೇಷವಾಗಿ ಉತ್ತರ ಭಾರತದ ಹಿಂದಿ ಪ್ರದೇಶದಲ್ಲಿ ಭರ್ಜರಿ ಜನಪ್ರೀತಿ ಗಳಿಸಿದೆ, ಗಲ್ಲಾಪೆಟ್ಟಿಗೆಯನ್ನೂ ಸಹ ತುಂಬಿಸಿಕೊಂಡಿದೆ. ಇದೀಗ ಸಿನಿಮಾದ ಇಂಗ್ಲೀಷ್ ಆವೃತ್ತಿ ಬಿಡುಗಡೆ ಆಗಲಿದ್ದು, ಇಂದಷ್ಟೆ ಸಿನಿಮಾದ ಸ್ಪ್ಯಾನಿಷ್ ಭಾಷೆಯ ಟ್ರೈಲರ್ ಸಹ ಬಿಡುಗಡೆ ಆಗಿದೆ. ಇಷ್ಟೆಲ್ಲದರ ಮಧ್ಯೆ, ಹೊಂಬಾಳೆಯು ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟಿಕೆಟ್ ದರವನ್ನು ಇಳಿಕೆ ಮಾಡಿದ್ದು ಕನ್ನಡ ರಾಜ್ಯೋತ್ಸವಕ್ಕೆ ಕನ್ನಡಿಗರಿಗೆ ಉಡುಗೊರೆ ಎನ್ನಲಾಗುತ್ತಿದೆ. ಅಸಲಿಗೆ ಇದು ನಿಜಕ್ಕೂ ಉಡುಗೊರೆಯಾ? ಅಥವಾ ಮಾರುಕಟ್ಟೆ ತಂತ್ರವಾ?
ಭಾರತದಾದ್ಯಂತ ಅಬ್ಬರಿಸುತ್ತಿರುವ ಈ ಸಿನಿಮಾ ಕರ್ನಾಟಕ ಒಂದರಲ್ಲೇ 250 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. 2025ರ ಅತ್ಯಂತ ಯಶಸ್ವಿ ಸಿನಿಮಾ ಎನಿಸಿಕೊಂಡಿದೆ. ಇದೀಗ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಿನಿಮಾದ ಟಿಕೆಟ್ ದರಗಳನ್ನು ಕರ್ನಾಟಕದಲ್ಲಿ ಇಳಿಕೆ ಮಾಡಲಾಗಿದೆ. ನಾಳೆಯಿಂದ (ಅಕ್ಟೋಬರ್ 31) ‘ಕಾಂತಾರ ಚಾಪ್ಟರ್ 1’ ಸಿನಿಮಾದ ಟಿಕೆಟ್ ದರಗಳು ಕಡಿಮೆ ಆಗಲಿದ್ದು, ಸಿಂಗಲ್ ಸ್ಕ್ರೀನ್‌ಗಳಲ್ಲಿ (ಏಕಪರದೆ) ಕೇವಲ 99 ರೂಪಾಯಿಗೆ ಸಿನಿಮಾ ವೀಕ್ಷಿಸಬಹುದಾಗಿದೆ. ಇನ್ನು ರಾಜ್ಯದ ಯಾವುದೇ ಮಲ್ಟಿಪ್ಲೆಕ್ಸ್‌ಗಳಲ್ಲಿ ಕೇವಲ 150 ರೂಪಾಯಿಗಳಿಗೆ ‘ಕಾಂತಾರ: ಚಾಪ್ಟರ್ 1’ ಸಿನಿಮಾ ವೀಕ್ಷಣೆ ಮಾಡಬಹುದಾಗಿದೆ.
ಅಂದಹಾಗೆ ರಾಜ್ಯ ಸರ್ಕಾರವು ಏಕರೂಪ ಟಿಕೆಟ್ ದರದ ಆದೇಶ ಹೊರಡಿಸಿದಾಗ ಆದೇಶಕ್ಕೆ ತಡೆ ತರುವಲ್ಲಿ ಹೊಂಬಾಳೆಯ ಪಾತ್ರ ಮಹತ್ವದ್ದು, ಸರ್ಕಾರದ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಹೊಂಬಾಳೆ ನಿರ್ಮಾಣ ಸಂಸ್ಥೆ, ಸರ್ಕಾರದ ಆದೇಶದಿಂದ ಕಡಿಮೆ ಆಗಿದ್ದ ಟಿಕೆಟ್ ದರಗಳು ಮತ್ತೆ ಹೆಚ್ಚಾಗುವಂತೆ ಮಾಡಿದ ನಿರ್ಮಾಣ ಸಂಸ್ಥೆಗಳಲ್ಲಿ ಪ್ರಮುಖವಾದದ್ದಾಗಿತ್ತು ಎಂಬುದನ್ನು ಇಲ್ಲಿ ಮರೆಯುವಂತಿಲ್ಲ.
ಇದನ್ನೂ ಓದಿ:ಅ.31ಕ್ಕೆ ಒಟಿಟಿಗೆ ಬರ್ತಿದೆ ಕಾಂತಾರ: ಚಾಪ್ಟರ್ 1 ಚಿತ್ರ
ಇದನ್ನು ಹೊಂಬಾಳೆ ಕಡೆಯಿಂದ ರಾಜ್ಯೋತ್ಸವಕ್ಕೆ ಉಡುಗೊರೆ ಎನ್ನಲಾಗುತ್ತಿದೆಯಾದರೂ, ಇದರ ಹಿಂದೆ ಮಾರುಕಟ್ಟೆ ತಂತ್ರವೂ ಇದೆ. ನಾಳೆ ಅಂದರೆ ಅಕ್ಟೋಬರ್ 31 ರಿಂದಲ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭ ಮಾಡಲಿದೆ. ಅದಕ್ಕೆ ಸರಿಯಾಗಿ ಚಿತ್ರಮಂದಿರಗಳಲ್ಲಿಯೂ ಸಹ ಸಿನಿಮಾದ ಟಿಕೆಟ್ ದರವನ್ನು ಕಡಿಮೆ ಮಾಡಲಾಗಿದೆ. ಸಿನಿಮಾ ಒಟಿಟಿಗೆ ಬಂದಮೇಲೂ ಚಿತ್ರಮಂದಿರಗಳಿಗೆ ಜನರನ್ನು ಸೆಳೆಯಲೆಂದು ಹೀಗೊಂದು ಅದ್ಭುತ ಆಫರ್ ಅನ್ನು ಹೊಂಬಾಳೆ ನೀಡಿದೆ. ಸಿನಿಮಾ ಒಟಿಟಿಗೆ ಬಂದಮೇಲೆಯೂ ಸಹ ಜನ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ಅಕ್ಟೋಬರ್ 2 ರಂದು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಯ್ತು. ಈ ಸಿನಿಮಾ ಈ ವರೆಗೆ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಸುಮಾರು 900 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಈ ವರ್ಷ ಭಾರತದ ಯಾವುದೇ ಭಾಷೆಯಲ್ಲಿ ಈ ವರೆಗೆ ಬಿಡುಗಡೆ ಆದ ಸಿನಿಮಾಗಳ ಪೈಕಿ ಅತ್ಯಂತ ಯಶಸ್ವಿ ಸಿನಿಮಾ ಇದೆನಿಸಿಕೊಂಡಿದೆ. 2022 ರಲ್ಲಿ ಬಿಡುಗಡೆ ಆದ ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ಅಂದರೆ ಮುಂದಿನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ರಿಷಬ್ ಶೆಟ್ಟಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ರುಕ್ಮಿಣಿ ವಸಂತ್ ನಾಯಕಿ. ಬಾಲಿವುಡ್ನಲ್ಲಿ ಮಿಂಚುತ್ತಿರುವ ಕನ್ನಡಿಗ ಗುಲ್ಷನ್ ದೇವಯ್ಯ, ಮಲಯಾಳಂ ನಟ ಜಯರಾಂ ಇನ್ನೂ ಕೆಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ