
‘ಕರಾವಳಿ’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಈವೆಂಟ್ ಹಲವು ಡ್ರಾಮಾಗಳಿಗೆ ಸಾಕ್ಷಿ ಆಯಿತು. ಪ್ರಜ್ವಲ್ (Prajwal Devaraj) ಅಭಿಮಾನಿಗಳು ಗಲಾಟೆ ಮಾಡಿದ್ದರು. ಈ ಗಲಾಟೆ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಉದ್ದೇಶಪೂರ್ವಕವಾಗಿ ಗುಂಪು ಕಟ್ಟಿಕೊಂಡು ಬಂದು ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ಆಪ್ತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಚಿತ್ರದ ಕಾರ್ಯಕಾರಿ ನಿರ್ಮಾಪಕ ಅಂಕಿತ್ ಅವರು ನೀಡಿದ ದೂರಿನ ಆಧಾರದ ಮೇಲೆ ದಿಲೀಪ್, ಅವಿನಾಶ್ ಮತ್ತು ನಂದಕುಮಾರ್ ಎಂಬ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ‘ಆರೋಪಿಗಳು ಉದ್ದೇಶಪೂರ್ವಕವಾಗಿಯೇ ಟ್ರೇಲರ್ ರಿಲೀಸ್ ಆಗುವ ಸ್ಥಳಕ್ಕೆ ನುಗ್ಗಿದ್ದಾರೆ. ಗುಂಪು ಸೇರಿಕೊಂಡು ನಿರ್ದೇಶಕ, ನಿರ್ಮಾಪಕ ಹಾಗೂ ಅಲ್ಲಿದ್ದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿ ತೊಂದರೆ ಕೊಟ್ಟಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ಆರಂಭದಲ್ಲಿ, ಗಲಾಟೆ ಮಾಡಿದವರು ನಟ ಪ್ರಜ್ವಲ್ ದೇವರಾಜ್ ಅವರ ಅಭಿಮಾನಿಗಳು ಎಂದು ಹೇಳಲಾಗಿತ್ತು. ಆದರೆ, ಈಗ ಅಚ್ಚರಿಯ ಸತ್ಯವೊಂದು ಬಯಲಾಗಿದೆ. ಗಲಾಟೆ ಮಾಡಿದ ದಿಲೀಪ್, ಅವಿನಾಶ್ ಮತ್ತು ನಂದಕುಮಾರ್ ಕೇವಲ ಅಭಿಮಾನಿಗಳಲ್ಲ, ಬದಲಾಗಿ ಅವರು ಪ್ರಜ್ವಲ್ ದೇವರಾಜ್ ಅವರ ಜೊತೆಯಲ್ಲೇ ಕೆಲಸ ಮಾಡುವ ಸಹಾಯಕರು ಎಂಬುದು ಪತ್ತೆಯಾಗಿದೆ. ಇವರು ‘ಕರಾವಳಿ’ ಸಿನಿಮಾದ ಶೂಟಿಂಗ್ ಸಮಯದಲ್ಲೂ ಪ್ರಜ್ವಲ್ ಅವರಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ರಾಜ್ ಬಿ. ಶೆಟ್ಟಿ ಮೇಲೆ ಅಸಮಾಧಾನವೇ? ಪ್ರಜ್ವಲ್ ದೇವರಾಜ್ ಉತ್ತರ ಏನು?
ಸಂಭಾವನೆ ಸಿಕ್ಕಿಲ್ಲ ಎಂಬ ಕಾರಣಕ್ಕೆ ಕಾರಣಕ್ಕೆ ಸ್ವತಃ ನಟ ಪ್ರಜ್ವಲ್ ದೇವರಾಜ್ ಅವರೇ ತಮ್ಮ ಸಹಾಯಕರನ್ನು ಎತ್ತಿಕಟ್ಟಿ ಈ ಗಲಾಟೆ ಮಾಡಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸದ್ಯ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು, ಗಲಾಟೆ ಮಾಡಿದವರು ಪ್ರಜ್ವಲ್ ಸಹಾಯಕರೇ ಎಂಬುದಕ್ಕೆ ಪೂರಕ ಸಾಕ್ಷ್ಯಗಳನ್ನು ಕಲೆಹಾಕಿದ್ದು, ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:22 am, Fri, 10 July 26