12 ವರ್ಷಗಳ ಬಳಿಕ ಮತ್ತೆ ಚಾಂಪಿಯನ್ ಆದ ಕರ್ನಾಟಕ ಬುಲ್ಡೋಜರ್ಸ್
Karnataka Bulldozers: ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡವು ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2026ನಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಬಂಗಾಳದ ವಿರುದ್ಧ ನಡೆದ ಫೈನಲ್ನಲ್ಲಿ ಸುದೀಪ್ ಅವರ ತಂಡ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸಿದೆ. ಬರೋಬ್ಬರಿ 12 ವರ್ಷಗಳ ಬಳಿಕ ಫೈನಲ್ ಗೆದ್ದಿದೆ ಕರ್ನಾಟಕ ತಂಡ.

ವಿವಿಧ ಚಿತ್ರರಂಗದವರು ಒಟ್ಟಿಗೆ ಸೇರಿ ಕ್ರಿಕೆಟ್ ಆಡುವ ಸಿಸಿಎಲ್ (ಸೆಲೆಬ್ರಿಟಿ ಕ್ರಿಕೆಟ್ ಲೀಗ್) 2026 ಫೈನಲ್ ಇಂದು (ಫೆಬ್ರವರಿ 1) ನಡೆದಿದ್ದು, ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಇಂದು ಕೊಯಮತ್ತೂರಿನಲ್ಲಿ ನಡೆದ ಫೈನಲ್ನಲ್ಲಿ ಬಂಗಾಳ ತಂಡವನ್ನು ಎದುರಿಸಿದ ಕರ್ನಾಟಕ ಬುಲ್ಡೋಜರ್ಸ್ ತಂಡ ಆಲ್ರೌಂಡ್ ಪ್ರದರ್ಶನ ತೋರಿ ಫೈನಲ್ ಪಂದ್ಯದಲ್ಲಿ ಗೆಲುವು ತನ್ನದಾಗಿಸಿಕೊಂಡಿದೆ. ಅದೂ ಬರೋಬ್ಬರಿ 12 ವರ್ಷಗಳ ಬಳಿಕ ಕರ್ನಾಟಕ ಬುಲ್ಡೋಜರ್ಸ್ ತಂಡ ಚಾಂಪಿಯನ್ ಎನಿಸಿಕೊಂಡಿದೆ.
ಕರ್ನಾಟಕ ಬುಲ್ಡೋಜರ್ಸ್ ಈಗಾಗಲೆ ಎರಡು ಬಾರಿ ಚಾಂಪಿಯನ್ ಆಗಿತ್ತು. ಇದೀಗ 12 ವರ್ಷಗಳ ಬಳಿಕ ಮತ್ತೆ ಗೆದ್ದು ಮೂರನೇ ಬಾರಿ ಚಾಂಪಿಯನ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುಂಚೆ ಬರೋಬ್ಬರಿ ಆರು ಬಾರಿ ಫೈನಲ್ ವರೆಗೂ ತಲುಪಿ ರನ್ನರ್ ಅಪ್ ಎನಿಸಿಕೊಂಡಿದ್ದರು. ಆದರೆ ಈ ಸೀಸನ್ನಲ್ಲಿ ಆರಂಭದ ಮ್ಯಾಚಿನಿಂದಲೇ ಅದ್ಭುತವಾಗಿ, ಸಂಘಟಿತ ಆಟವಾಡುತ್ತಾ ಬಂದ ಕರ್ನಾಟಕ ತಂಡ ಇದೀಗ ಫೈನಲ್ ಗೆದ್ದಿದೆ. 2013 ಮತ್ತು 2014 ರಲ್ಲಿ ಕರ್ನಾಟಕ ಬುಲ್ಡೋಜರ್ಸ್ ಸಿಸಿಎಲ್ ಚಾಂಪಿಯನ್ ಆಗಿತ್ತು, ಇದೀಗ ಮೂರನೇ ಬಾರಿ ಗೆದ್ದಿದೆ.
ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಾಲ್ ಟೈಗರ್ಸ್ ತಂಡ, ಕರ್ನಾಟಕದ ಉತ್ತಮ ಬೌಲಿಂಗ್ ದಾಳಿಯ ಮುಂದೆ ದೊಡ್ಡ ಮೊತ್ತ ಕಲೆ ಹಾಕಲು ವಿಫಲವಾದವು. ಬೆಂಗಾಲ್ ಟೈಗರ್ಸ್ ತಂಡ 20 ಓವರ್ಗಳಲ್ಲಿ ಗಳಿಸಿದ್ದು ಕೇವಲ 129 ರನ್ನುಗಳನ್ನಷ್ಟೆ. ಕರ್ನಾಟಕದ ಪರ ಉತ್ತಮ ಬೌಲಿಂಗ್ ಮಾಡಿದ ಪ್ರತಾಪ್ ಮೂರು ವಿಕೆಟ್ ಪಡೆದರೆ, ಸುನೀಲ್ ಎರಡು ವಿಕೆಟ್ ಗಳಿಸಿದರು.
ಬಳಿಕ ಬ್ಯಾಟಿಂಗ್ಗೆ ಇಳಿದ ಕರ್ನಾಟಕಕ್ಕೆ ಬಹಳ ಉತ್ತಮ ಆರಂಭ ಒದಗಿತು. ಕರ್ನಾಟಕ ಬುಲ್ಡೋಜರ್ಸ್ ತಂಡದ ಪ್ರಮುಖ ದಾಂಡಿಗ ರಾಜೀವ್ ಪ್ರತಿ ಬಾರಿಯಂತೆ ಈ ಬಾರಿಯೂ ಅದ್ಭುತ ಆರಂಭ ಒದಗಿಸಿದರು. ಕೇವಲ 37 ಬಾಲಿಗೆ 69 ರನ್ ಭಾರಿಸಿದರು. ಆದರೆ ರಾಜೀವ್ ಔಟಾದ ಬಳಿಕ ಆಟ ತುಸು ನಿಧಾನವಾಯ್ತು. ಬೆಂಗಾಲ್ ಪರ ರತನ್ದೀಪ್ ಅವರು ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಗಮನ ಸೆಳೆದರು. ಆದರೆ ಕರ್ನಾಟಕ ತಂಡದ ಆಟಗಾರರು ಎಚ್ಚರಿಕೆಯ ಆಟವಾಡಿ ಗೆಲುವು ತಮ್ಮದಾಗಿಸಿಕೊಂಡರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:45 pm, Sun, 1 February 26




