ವಿಷ್ಣು ಸ್ಮಾರಕಕ್ಕೆ ಸ್ಥಳ ಕೋರಿ ಅರ್ಜಿ: ಅಭಿಮಾನಿಗಳಿಗೆ ಹಿನ್ನಡೆ

|

Updated on: Jun 06, 2024 | 6:24 PM

ವಿಷ್ಣುವರ್ಧನ್ ಸ್ಮಾರಕವನ್ನು ಅಭಿಮಾನ್ ಸ್ಟುಡಿಯೋನಲ್ಲಿ ನಿರ್ಮಿಸಬೇಕೆಂಬ ಉದ್ದೇಶದಿಂದ ಅಭಿಮಾನಿಗಳು ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯದಲ್ಲಿ ಅಭಿಮಾನಿಗಳಿಗೆ ಹಿನ್ನಡೆ ಆಗಿದೆ.

ವಿಷ್ಣು ಸ್ಮಾರಕಕ್ಕೆ ಸ್ಥಳ ಕೋರಿ ಅರ್ಜಿ: ಅಭಿಮಾನಿಗಳಿಗೆ ಹಿನ್ನಡೆ
Follow us on

ವಿಷ್ಣುವರ್ಧನ್ (Vishnuvardhan) ನಿಧನ ಹೊಂದಿ 13 ವರ್ಷಗಳಾಗಿವೆ. ಆದರೆ ಅವರ ಸ್ಮಾರಕಕ್ಕೆ ಸಂಬಂಧಿಸಿದಂತೆ ವಿವಾದಗಳು, ಚರ್ಚೆಗಳು ಇಂದಿಗೂ ಚಾಲ್ತಿಯಲ್ಲಿವೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕವನ್ನು ಉದ್ಘಾಟನೆ ಮಾಡಲಾಗಿದೆ. ಈ ಸ್ಮಾರಕ ಉದ್ಘಾಟನೆ ಮಾಡಿದ್ದಕ್ಕೆ ವಿಷ್ಣುವರ್ಧನ್ ಕುಟುಂಬದವರಿಗೆ ತೃಪ್ತಿಯಿದೆ. ಆದರೆ ವಿಷ್ಣುವರ್ಧನ್ ಅಭಿಮಾನಿಗಳು ಕೆಲವರು ಅಭಿಮಾನ್ ಸ್ಟುಡಿಯೋನಲ್ಲಿ ವಿಷ್ಣುವರ್ಧನ್ ಸ್ಮಾರಕ ಮಾಡಬೇಕೆಂದು ವರ್ಷಗಳಿಂದಲೂ ಪ್ರಯತ್ನಿಸುತ್ತಲೇ ಇದ್ದರು. ಇದೇ ವಿಷಯವಾಗಿ ಹೈಕೋರ್ಟ್​ಗೂ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅರ್ಜಿ ವಜಾ ಆಗಿದೆ.

ಅಭಿಮಾನ್ ಸ್ಟುಡಿಯೋನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಲು 10 ಗುಂಟೆ ಸ್ಥಳ ಬೇಕು ಎಂದು ವಿಷ್ಣುವರ್ಧನ್ ಅಭಿಮಾನಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿ. ಎಸ್. ಎಸ್. ಅಭಿಮಾನ್ ಡಾ. ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ವತಿಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಮುಖ್ಯ ನ್ಯಾಯಮೂರ್ತಿ ಎನ್‌.ವಿ ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠವು ಅರ್ಜಿಯ ವಿಚಾರಣೆ ನಡೆಸಿ, ಕೊನೆಗೆ ಅರ್ಜಿಯನ್ನು ವಜಾ ಮಾಡಿದೆ.

ಇದನ್ನೂ ಓದಿ:ಭಾರತಿ ವಿಷ್ಣುವರ್ಧನ್ ಆರೋಗ್ಯ ಹೇಗಿದೆ? ಅಪ್​ಡೇಟ್ ಕೊಟ್ಟ ಅನಿರುದ್ಧ್

ಸಂಬಂಧಪಟ್ಟ ಪ್ರಾಧಿಕಾರದ ಮೂಲಕ ಸಮಸ್ಯೆಯನ್ನು ಇತ್ಯರ್ಥ ಮಾಡಿಕೊಳ್ಳಿ ಎಂದಿರುವ ನ್ಯಾಯಾಲಯ, ಚಲನಚಿತ್ರ ಕಲಾವಿದರ ಸ್ಮಾರಕ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿಸುವಂತೆ ಸರ್ಕಾರಕ್ಕೆ ಸೂಚಿಸಿ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದು ಸರಿಯಲ್ಲ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಸಲ್ಲಿಕೆ ಆಗಿರುವ ಅರ್ಜಿಯಲ್ಲಿ ಯಾವ ಸಾರ್ವಜನಿಕ ಹಿತಾಸಕ್ತಿಯೂ ಇಲ್ಲ. ಇಂತಹ ವಿಚಾರಗಳ ಬಗ್ಗೆ ಹೈಕೋರ್ಟ್‌ ವ್ಯವಹರಿಸುವುದು ಸೂಕ್ತವಲ್ಲ’ ಎಂದು ಹೈಕೋರ್ಟ್ ಹೇಳಿದೆ.

ಈ ಹಿಂದೆ ಬೆಂಗಳೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕಕ್ಕೆ ಮಂಜೂರಾಗಿದ್ದ ಜಾಗದ ಬಗ್ಗೆ ಅರಣ್ಯ ಇಲಾಖೆ ತಕರಾರು ಸಲ್ಲಿಸಿತ್ತು. ಅದರಿಂದ ಆ ಜಾಗವನ್ನು ಕೈಬಿಡಲಾಯ್ತು. ಅಭಿಮಾನ್ ಸ್ಟುಡಿಯೋನಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು ಎಂಬ ಕೂಗಿಗೆ ಸರ್ಕಾರದ ಸ್ಪಂದನೆ, ಕುಟುಂಬದ ಸ್ಪಂದನೆ ಸಿಕ್ಕಿಲ್ಲ. ಕೊನೆಗೆ ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಿ ಬಸವರಾಜ ಬೊಮ್ಮಾಯಿ ಅವರು ಅದನ್ನು ಉದ್ಘಾಟನೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ