ಸ್ಯಾಂಡಲ್ವುಡ್ನಲ್ಲಿ ಮೇಲಿಂದ ಮೇಲೆ ಕಹಿ ಸುದ್ದಿಗಳು ಕೇಳಿಬರುತ್ತಿವೆ. ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಬಹುಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ನಿಧನರಾದರು. ಇಂದು (ಜೂ.14) ಬೆಳಗ್ಗೆ 9 ಗಂಟೆಯಿಂದ ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು.
ಹಲವು ವರ್ಷಗಳಿಂದ ಕೆಸಿಎನ್ ಚಂದ್ರಶೇಖರ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಡಾ. ರಾಜ್ಕುಮಾರ್ ನಟನೆಯ ‘ಹುಲಿಯ ಹಾಲಿನ ಮೇವು’, ‘ಬಬ್ರುವಾಹನ’ ಮುಂತಾದ ಕ್ಲಾಸಿಕ್ ಸಿನಿಮಾಗಳಿಗೆ ಬಂಡವಾಳ ಹೂಡುವ ಮೂಲಕ ಕೆಸಿಎನ್ ಚಂದ್ರಶೇಖರ್ ಅವರು ಗುರುತಿಸಿಕೊಂಡಿದ್ದರು. ಇಂದು ಅವರ ನಿಧನಕ್ಕೆ ಚಂದನವನದ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ.
ನಿರ್ಮಾಪಕನಾಗಿ ಮಾತ್ರವಲ್ಲದೆ, ವಿತರಕರಾಗಿಯೂ ಕೆಸಿಎನ್ ಚಂದ್ರಶೇಖರ್ ಕೆಲಸ ಮಾಡಿದ್ದರು. ಎರಡು ಬಾರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಹಾಗೂ ಒಮ್ಮೆ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು. ಚಂದ್ರಶೇಖರ್ ಅವರ ಇಡೀ ಕುಟುಂಬವೇ ಸಿನಿಮಾರಂಗದಲ್ಲಿ ತೊಡಗಿಕೊಂಡಿತ್ತು. ಅವರ ತಂದೆ ಕೆಸಿಎನ್ ಗೌಡ ಅವರು ನಿರ್ಮಾಪಕರಾಗಿ, ಪ್ರದರ್ಶಕರಾಗಿ, ವಿತರಕರಾಗಿ ಗುರುತಿಸಿಕೊಂಡಿದ್ದರು. ಸಹೋದರ ಕೆಸಿಎನ್ ಮೋಹನ್ ನಿರ್ಮಾಪಕರಾಗಿದ್ದಾರೆ.
ಕೆಸಿಎನ್ ಚಂದ್ರಶೇಖರ್ ನಿಧನಕ್ಕೆ ಗೀತರಚನಕಾರ, ನಿರ್ದೇಶಕ ನಾಗೇಂದ್ರ ಪ್ರಸಾದ್ ಅವರು ಕಂಬನಿ ಮಿಡಿದಿದ್ದಾರೆ. ‘ನಲ್ಲ’ ಚಿತ್ರದ ನಿರ್ಮಾಪಕರು. ನನ್ನನ್ನು ನಿರ್ದೇಶಕನನ್ನಾಗಿ ಮಾಡಿದ ಅನ್ನದಾತರು ಕೆ.ಸಿ.ಎನ್. ಚಂದ್ರು ಸರ್ ಆತ್ಮಕ್ಕೆ ಭಗವಂತ ಶಾಂತಿ ನೀಡಲೆಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ’ ಎಂದು ನಾಗೇಂದ್ರ ಪ್ರಸಾದ್ ಪೋಸ್ಟ್ ಮಾಡಿದ್ದಾರೆ.
ಈ ವರ್ಷ ಕೊವಿಡ್ ಎರಡನೇ ಅಲೆ ಆರಂಭ ಆದ ನಂತರವಂತೂ ಅನೇಕರನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿದೆ. ನಿರ್ಮಾಪಕ ಕೋಟಿ ರಾಮು, ಯುವ ನಿರ್ಮಾಪಕ, ನಟ ಡಿಎಸ್ ಮಂಜುನಾಥ್, ಪುಟ್ಟಣ್ಣ ಕಣಗಾಲ್ ಪುತ್ರ ರಾಮು, ಹಿರಿಯ ನಟಿಯರಾದ ಸುರೇಖಾ, ಬಿ. ಜಯಾ, ಕವಿರತ್ನ ಕಾಳಿದಾಸ ಸಿನಿಮಾ ನಿರ್ದೇಶಕ ರೇಣುಕಾ ಶರ್ಮಾ, ನಟ ಶಂಖನಾದ ಅರವಿಂದ್, ನಟ-ಪತ್ರಕರ್ತ ಸುರೇಶ್ ಚಂದ್ರ ಸೇರಿದಂತೆ ಅನೇಕರು ನಿಧನರಾಗಿರುವುದು ನೋವಿನ ಸಂಗತಿ.
ಇದನ್ನೂ ಓದಿ:
ಭೀಕರ ಅಪಘಾತದಲ್ಲಿ ಸುನೀಲ್ ನಿಧನರಾದಾಗ ನಿಜವಾಗಿ ನಡೆದಿದ್ದು ಏನು? ಸಂಬಂಧಿ ಸಚಿನ್ ತೆರೆದಿಟ್ಟ ಸತ್ಯ
Suresh Chandra Death: ಕೊರೊನಾದಿಂದ ಹಿರಿಯ ನಟ ಸುರೇಶ್ ಚಂದ್ರ ನಿಧನ
Published On - 8:10 am, Mon, 14 June 21