ಭೀಕರ ಅಪಘಾತದಲ್ಲಿ ಸುನೀಲ್ ನಿಧನರಾದಾಗ ನಿಜವಾಗಿ ನಡೆದಿದ್ದು ಏನು? ಸಂಬಂಧಿ ಸಚಿನ್ ತೆರೆದಿಟ್ಟ ಸತ್ಯ
ಸುನೀಲ್ ಸಿನಿಮಾಗಳ ಶೂಟಿಂಗ್ಗೆ ತೆರಳುತ್ತಿದ್ದಾಗ ಹೆಚ್ಚಿನ ಸಂದರ್ಭದಲ್ಲಿ ಅವರ ಜೊತೆ ಸಚಿನ್ ಇರುತ್ತಿದ್ದರು. ಸುನಿಲ್ ಅಪಘಾತವಾಗಿ ನಿಧನರಾದ ದಿನ ಕೂಡ ಅವರ ಜೊತೆ ಸಚಿನ್ ಇದ್ದರು.
ಕನ್ನಡ ಚಿತ್ರರಂಗದಲ್ಲಿ ಆಗತಾನೇ ಮಿಂಚಲು ಆರಂಭಿಸಿದ್ದ ಸ್ಫುರದ್ರೂಪಿ ನಟ ಸುನೀಲ್ ಅವರು 1994ರಲ್ಲಿ ನಿಧನರಾಗಿದ್ದು ಅವರ ಅಭಿಮಾನಿಗಳನ್ನು ನೋವಿನ ಕಂದಕಕ್ಕೆ ದೂಡಿತ್ತು. ಭೀಕರ ರಸ್ತೆ ಅಪಘಾತದಲ್ಲಿ 1994ರ ಜು.24ರಂದು ಸುನೀಲ್ ಮೃತಪಟ್ಟರು. ನಿಜಕ್ಕೂ ಅಂದು ಏನು ನಡೆಯಿತು ಎಂಬುದನ್ನು ಅವರ ಮಾವನ ಮಗ ಸಚಿನ್ ಈಗ ವಿವರಿಸಿದ್ದಾರೆ. ಕನ್ನಡ ಚಿತ್ರರಂಗದ ನಟ, ನಿರ್ದೇಶಕ ರಘುರಾಮ್ ಅವರು ಇತ್ತೀಚೆಗೆ ಮಾಡಿರುವ ಒಂದು ಸಂದರ್ಶನದಲ್ಲಿ ಆ ಬಗ್ಗೆ ಸಚಿನ್ ಮಾತನಾಡಿದ್ದಾರೆ.
ಸುನೀಲ್ ಸಿನಿಮಾಗಳ ಶೂಟಿಂಗ್ಗೆ ತೆರಳುತ್ತಿದ್ದಾಗ ಹೆಚ್ಚಿನ ಸಂದರ್ಭದಲ್ಲಿ ಅವರ ಜೊತೆ ಸಚಿನ್ ಇರುತ್ತಿದ್ದರು. ಸುನಿಲ್ ಅಪಘಾತವಾಗಿ ನಿಧನರಾದ ದಿನ ಕೂಡ ಅವರ ಜೊತೆ ಸಚಿನ್ ಇದ್ದರು. ‘ನಿರಂತರವಾಗಿ ಜರ್ನಿ ಮಾಡುತ್ತ ಇದ್ದೆವು. ಆಗ ಎರಡು ಕಾರ್ಯಕ್ರಮದ ಸಲುವಾಗಿ ಸುನೀಲ್ ಅವರು ಹೈದರಾಬಾದ್ನಿಂದ ಕರ್ನಾಟಕಕ್ಕೆ ಬರುತ್ತಿದ್ದರು. ನಮ್ಮ ಡ್ರೈವರ್ ಬೆಂಗಳೂರಿನಿಂದ ಹೈದರಾಬಾದ್ಗೆ ಬಂದು ಸುನೀಲ್ರನ್ನು ಕರೆದುಕೊಂಡು ಬಂದರು’ ಎಂದು ಆ ದಿನದ ಬಗ್ಗೆ ಸಚಿನ್ ಮಾತು ಆರಂಭಿಸುತ್ತಾರೆ.
‘ಒಂದು ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿಯೇ ಇನ್ನೊಂದು ಜಾಗಕ್ಕೆ ಹೋದೆವು. ಡ್ರೈವರ್ಗೆ ಸರಿಯಾಗಿ ನಿದ್ರೆ ಆಗಿರಲಿಲ್ಲ ಎನಿಸುತ್ತದೆ. ಅದೇ ಸಮಸ್ಯೆ ಆಯ್ತು. ಕಾಂಟೆಸಾ ಕಾರಿನಲ್ಲಿ ಚಲಿಸುತ್ತಿದ್ದಾಗ, ನಿನಗೆ ಏನಾದರೂ ನಿದ್ರೆ ಬಂದರೆ ಹೇಳು ಎಂದು ಚಾಲಕನಿಗೆ ಸುನೀಲ್ ಕೇಳಿದರು. ಅಷ್ಟೇ ನನಗೆ ನೆನಪಿರುವುದು. ಆಮೇಲೆ ಎಚ್ಚರ ಆದಾಗ ಆಸ್ಪತ್ರೆಯಲ್ಲಿ ಇದ್ದೆ’ ಎಂದು ಆ ಭೀಕರ ದಿನವನ್ನು ಸಚಿನ್ ನೆಪಿಸಿಕೊಂಡಿದ್ದಾರೆ.
‘ಆ ದಿನ ನಾವು ಹೊರಡಬೇಕು ಎಂದುಕೊಂಡಿರಲಿಲ್ಲ. ಒಂದು ದಿನ ಉಳಿದುಕೊಳ್ಳೋಣ ಎನಿಸುತ್ತಿತ್ತು. ಆದರೆ ಡ್ರೈವರ್ ಮಗಳ ಬರ್ತ್ಡೇ ಇದೆ ಎಂಬ ಕಾರಣಕ್ಕೆ ನಾವು ಅದೇ ದಿನ ರಾತ್ರಿ ಹೊರೆಟೆವು. ಅಪಘಾತ ಆದ ಬಳಿಕ ನಮ್ಮನ್ನು ಬೆಂಗಳೂರಿಗೆ ಶಿಫ್ಟ್ ಮಾಡುವಾಗ ಸುನೀಲ್ ನಿಧನರಾದರು. ನನಗೆ ಎಷ್ಟೋ ದಿನಗಳ ಬಳಿಕ ಪ್ರಜ್ಞೆ ಬಂತು’ ಎಂದಿದ್ದಾರೆ ಸಚಿನ್.
ಸುನೀಲ್ ಅವರ ಬಾಲ್ಯದ ಕೆಲವು ವಿವರಗಳನ್ನೂ ಸಚಿನ್ ಹಂಚಿಕೊಂಡಿದ್ದಾರೆ. ‘ಹುಟ್ಟಿದಾಗ ಅವರಿಗೆ ಸುನಿಲ್ ಅಂತ ಹೆಸರು ಇಟ್ಟಿದ್ದರು. ನಂತರ ಮೂರು ವರ್ಷದವನಾಗಿದ್ದಾಗ ರಾಮಕೃಷ್ಣ ಅಂತ ಹೆಸರಿಟ್ಟರು. ಅದು ನಮ್ಮ ತಾತನ ಹೆಸರು. ಶಾಲೆಯಲ್ಲೂ ಅದೇ ಹೆಸರು ಇತ್ತು. ನಂತರ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಾಗ ಸುನೀಲ್ ಅಂತ ಬದಲಾಯಿಸಿಕೊಂಡರು’ ಎಂದು ಸಚಿನ್ ಹೇಳಿದ್ದಾರೆ.
‘ವಯಸ್ಸಿನಲ್ಲಿ ನನಗೂ ಮತ್ತು ಸುನೀಲ್ಗೆ 9 ವರ್ಷ ವ್ಯತ್ಯಾಸ. ಆದರೂ ನಮ್ಮಿಬ್ಬರ ನಡುವೆ ಒಳ್ಳೆಯ ಒಡನಾಟ ಇತ್ತು. ಮಂಗಳೂರಿನ ಬ್ರಹ್ಮಾವರದ ಬಳಿ ಇರುವ ಯಡ್ತಾಡಿ ಎಂಬಲ್ಲಿ ಸುನೀಲ್ ಹುಟ್ಟಿ ಬೆಳೆದಿದ್ದು. ಪಿಯುಸಿವರೆಗೆ ಅಲ್ಲಿಯೇ ಓದಿದ್ದು. ಇಂಜಿನಿಯರಿಂಗ್ ಮಾಡಲು ಬೆಂಗಳೂರಿಗೆ ಬಂದರು. ಆರ್ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಬ್ರ್ಯಾಂಚ್ ಸೇರಿಕೊಂಡರು’ ಎಂದು ಸಚಿನ್ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.
‘ಸುನೀಲ್ಗೆ ಮೂರು ಜನ ಒಡಹುಟ್ಟಿದವರು. ತಂದೆ-ತಾಯಿಗೆ ಸುನೀಲ್ ನಾಲ್ಕನೇ ಮಗು. ಈಗ ದೊಡ್ಡಕ್ಕ ಬಾರ್ಕೂರಿನಲ್ಲಿ ಇದ್ದಾರೆ. ಎರಡನೇ ಅಕ್ಕ ಬೆಂಗಳೂರಿನಲ್ಲಿ ಇದ್ದಾರೆ. ಒಬ್ಬ ಅಣ್ಣ ಕೂಡ ಬೆಂಗಳೂರಿನಲ್ಲಿಯೇ ಇದ್ದಾರೆ’ ಎಂದು ಮಾಹಿತಿ ನೀಡಿರುವ ಸಚಿನ್ ಅಮೆರಿಕದಲ್ಲಿ ನೆಲೆಸಿದ್ದಾರೆ.
ಇದನ್ನೂ ಓದಿ:
ತಲೆ ಬಾಗಿ ಕ್ಷಮೆ ಕೋರುವೆ; ರಾಮು ನಿಧನದ ಬಗ್ಗೆ ಮಾಲಾಶ್ರೀಗೆ ಜಗ್ಗೇಶ್ ಹೀಗೆ ಹೇಳಿದ್ದೇಕೆ?
Koti Ramu: ಕೋಟಿ ರಾಮು ನಿಧನದ ಬಳಿಕ ಮೊದಲ ಬಾರಿ ಮೌನ ಮುರಿದ ಪತ್ನಿ ಮಾಲಾಶ್ರೀ
Published On - 4:22 pm, Fri, 11 June 21