‘ಕಾಂತಾರ’ ಚಿತ್ರದ (Kantara Movie) ‘ವರಾಹ ರೂಪಂ..’ ಹಾಡು ಸದ್ಯ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ‘ತೈಕ್ಕುಡಂ ಬ್ರಿಡ್ಜ್’ ಬ್ಯಾಂಡ್ನ ‘ನವರಸಂ..’ ಹಾಡಿನ ಟ್ಯೂನ್ ಅನ್ನು ‘ವರಾಹ ರೂಪಂ..’ನಲ್ಲಿ ಬಳಕೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ‘ತೈಕ್ಕುಡಂ ಬ್ರಿಡ್ಜ್’ನವರು ಕೇರಳದ ಕೋಯಿಕ್ಕೋಡ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ‘ವರಾಹ ರೂಪಂ..’ (Varaha Roopam..) ಹಾಡನ್ನು ಪ್ರಸಾರ ಮಾಡದಂತೆ ಮಧ್ಯಂತರ ತಡೆಯಾಜ್ಞೆ ಆದೇಶ ಹೊರಡಿಸಿತ್ತು. ಈ ಸಂಬಂಧ ‘ಹೊಂಬಾಳೆ ಫಿಲ್ಮ್ಸ್’ ಮೇಲ್ಮನವಿ ಸಲ್ಲಿಕೆ ಮಾಡಿತ್ತು. ಈ ವೇಳೆ ಕೋರ್ಟ್ ತೀರ್ಪು ಕಾಂತಾರದ ಕಡೆಯಾಗಿದೆ.
‘ನವರಸಂ..’ ಹಾಡಿನಲ್ಲಿರುವ ಟ್ಯೂನ್ ‘ವರಾಹ ರೂಪಂ..’ನಲ್ಲಿ ಬಳಕೆ ಆಗಿದೆ ಎಂಬ ಅಭಿಪ್ರಾಯವನ್ನು ಪ್ರೇಕ್ಷಕರು ನೀಡಿದರು. ಇದನ್ನು ಗಂಭೀರವಾಗಿ ಸ್ವೀಕರಿಸಿದ ‘ತೈಕ್ಕುಡಂ ಬ್ರಿಡ್ಜ್’ ಕೇಸ್ ದಾಖಲು ಮಾಡಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಕೇರಳದ ‘ಕೋಯಿಕ್ಕೋಡ್ ನ್ಯಾಯಾಲಯ..’ ‘ವರಾಹ ರೂಪಂ..’ ಹಾಡಿಗೆ ತಡೆ ನೀಡಿತ್ತು. ಒಪ್ಪಿಗೆ ಇಲ್ಲದೆ ಹಾಡನ್ನು ಬಳಕೆ ಮಾಡುವಂತಿಲ್ಲ ಎಂದು ಹೇಳಿತ್ತು. ಈಗ ನ್ಯಾಯಾಲಯ ಹೊಸ ಆದೇಶ ಹೊರಡಿಸಿದೆ. ಇದರಿಂದ ಚಿತ್ರತಂಡಕ್ಕೆ ರಿಲೀಫ್ ಸಿಕ್ಕಿದೆ.
ಇದನ್ನೂ ಓದಿ: ‘ಕಾಂತಾರ’ ಚಿತ್ರತಂಡಕ್ಕೆ ಅರ್ಧ ಸಿಹಿ.. ಅರ್ಧ ಕಹಿ..: ಕೋರ್ಟ್ ತೀರ್ಪಿನ ಬಗ್ಗೆ ವಕೀಲ ಶಶಿರಾಜ್ ಕಾವೂರು ಹೇಳಿದ್ದಿಷ್ಟು
‘ವರಾಹ ರೂಪಂ..’ ಹಾಡು ‘ಕಾಂತಾರ’ ಕ್ಲೈಮ್ಯಾಕ್ಸ್ನಲ್ಲಿ ಬರುತ್ತದೆ. ಈ ಸಾಂಗ್ ಸಾಕಷ್ಟು ಗಮನ ಸೆಳೆದಿತ್ತು. ಹಾಡನ್ನು ಕೇಳಿ ಎಲ್ಲರೂ ಥ್ರಿಲ್ ಆಗಿದ್ದರು. ಕೋರ್ಟ್ನಿಂದ ಹಾಡಿಗೆ ತಡೆ ಬಿದ್ದಿದ್ದ ಕಾರಣ ಪ್ರೈಮ್ನಲ್ಲಿ ಪ್ರಸಾರಕಂಡ ವರ್ಷನ್ನಲ್ಲಿ ಹಾಡಿನ ಟೋನ್ ಬದಲಿಸಲಾಗಿದೆ. ‘ವರಾಹ ರೂಪಂ..’ ಹಾಡಿನ ಟೋನ್ನಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಲಾಗಿದೆ. ಇದನ್ನು ಕೇಳಿ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಈ ಹಾಡನ್ನು ಮೆಚ್ಚಿಕೊಂಡರೆ, ಇನ್ನೂ ಕೆಲವರು ಹೊಸ ಹಾಡಿನ ಬಗ್ಗೆ ಅಪಸ್ವರ ತೆಗೆದಿದ್ದಾರೆ. ಕೋರ್ಟ್ನಲ್ಲಿ ನಡೆಯುತ್ತಿರುವ ಕೇಸ್ ವಿಚಾರದಲ್ಲಿ ಹೊಂಬಾಳೆ ಫಿಲ್ಮ್ಸ್ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
Published On - 3:24 pm, Fri, 25 November 22