
ಕನ್ನಡದ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಒಂದು ಕಾಲದಲ್ಲಿ ಸ್ಯಾಂಡಲ್ವುಡ್ ಮಾರುಕಟ್ಟೆ ಚಿಕ್ಕದು ಎಂದು ಹೇಳಲಾಗುತ್ತಿತ್ತು. ಆದರೆ ಈಗ ಹಲವು ಸಿನಿಮಾಗಳು ಆ ಮಾತನ್ನು ಸುಳ್ಳು ಮಾಡಿವೆ. ‘ಕೆಜಿಎಫ್: ಚಾಪ್ಟರ್ 2’, ‘777 ಚಾರ್ಲಿ’ ಸಿನಿಮಾಗಳು ದೇಶಾದ್ಯಂತ ಸದ್ದು ಮಾಡಿವೆ. ಈಗ ಅಂಥದ್ದೇ ಭರವಸೆಯೊಂದಿಗೆ ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರದ ಬಗ್ಗೆ ಅನೇಕ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ‘ಕೆಜಿಎಫ್: ಚಾಪ್ಟರ್ 2’ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಶುಭ ಹಾರೈಸಿದ್ದಾರೆ. ಕಿಚ್ಚ ಸುದೀಪ್ (Kichcha Sudeep) ಮತ್ತು ಇಡೀ ‘ವಿಕ್ರಾಂತ್ ರೋಣ’ ತಂಡಕ್ಕೆ ಶುಭವಾಗಲಿ ಎಂದು ಪ್ರಶಾಂತ್ ನೀಲ್ (Prashanth Neel) ವಿಶ್ ಮಾಡಿದ್ದಾರೆ.
ನಿರ್ದೇಶಕ ಅನೂಪ್ ಭಂಡಾರಿ, ನಿರ್ಮಾಪಕ ಜಾಕ್ ಮಂಜು, ನಟ ಸುದೀಪ್ ಅವರ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ‘ವಿಕ್ರಾಂತ್ ರೋಣ’ ಸಿನಿಮಾ ಇಂದು (ಜುಲೈ 28) ಭರ್ಜರಿಯಾಗಿ ರಿಲೀಸ್ ಆಗಿದೆ. ಟ್ರೇಲರ್ ಮೂಲಕ ಗಮನ ಸೆಳೆದ ಈ ಚಿತ್ರದ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಇಂದು ಫಸ್ಟ್ ಡೇ ಫಸ್ಟ್ ಶೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ‘ರಾ ರಾ ರಕ್ಕಮ್ಮ..’ ಹಾಡಿಗೆ ಕುಣಿಯುತ್ತಾ ಸಿನಿಪ್ರಿಯರು ಎಂಜಾಯ್ ಮಾಡಿದ್ದಾರೆ. ರಾಜಮೌಳಿ, ಪ್ರಶಾಂತ್ ನೀಲ್, ಕಾರ್ತಿ ಮುಂತಾದ ದೊಡ್ಡ ಸೆಲೆಬ್ರಿಟಿಗಳು ಈ ಚಿತ್ರಕ್ಕೆ ಶುಭ ಕೋರಿದ್ದಾರೆ.
‘ದೃಶ್ಯ ವೈಭವದಂತಿರುವ ವಿಕ್ರಾಂತ್ ರೋಣ ಚಿತ್ರದಿಂದ ಕಿಚ್ಚ ಸುದೀಪ್ ಸರ್ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಅವರಿಗೆ ಎಲ್ಲ ಯಶಸ್ಸು ಸಿಗಲಿ. ಇಡೀ ತಂಡಕ್ಕೆ ಶುಭವಾಗಲಿ’ ಎಂದು ಪ್ರಶಾಂತ್ ನೀಲ್ ಅವರು ಟ್ವೀಟ್ ಮಾಡಿದ್ದಾರೆ. ಅನೇಕ ಸಂದರ್ಭಗಳಲ್ಲಿ ಸುದೀಪ್ ಅವರು ‘ಕೆಜಿಎಫ್ 2’ ಚಿತ್ರದ ಸಾಧನೆಯನ್ನು ಹೊಗಳಿದ್ದುಂಟು. ಈಗ ಅವರಿಗೆ ಆ ಚಿತ್ರದ ನಿರ್ದೇಶಕರಿಂದ ಶುಭ ಹಾರೈಕೆ ಸಿಕ್ಕಿದೆ.
ರಕ್ಷಿತ್ ಶೆಟ್ಟಿ, ರಿತೇಶ್ ದೇಶಮುಖ್, ಜೆನಿಲಿಯಾ ಡಿಸೋಜಾ, ಶರಣ್, ಸಂತೋಷ್ ಆನಂದ್ರಾಮ್, ಅರ್ಜುನ್ ಜನ್ಯ, ‘ಪೈಲ್ವಾನ್’ ನಿರ್ದೇಶಕ ಕೃಷ್ಣ, ಗೋಲ್ಡನ್ ಸ್ಟಾರ್ ಗಣೇಶ್, ತರುಣ್ ಸುಧೀರ್, ರಮ್ಯಾ, ಸುನೀಲ್ ಶೆಟ್ಟಿ, ಆರ್. ಚಂದ್ರು, ಕಬೀರ್ ದುಹಾನ್ ಸಿಂಗ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ‘ವಿಕ್ರಾಂತ್ ರೋಣ’ ಚಿತ್ರಕ್ಕೆ ವಿಶ್ ಮಾಡಿದ್ದಾರೆ.