
‘ಕೆಜಿಎಫ್ ಚಾಪ್ಟರ್ 2’ ಟ್ರೇಲರ್ (KGF Chapter 2) ಯೂಟ್ಯೂಬ್ನಲ್ಲಿ ಅಬ್ಬರಿಸಿದೆ. ಈ ಟ್ರೇಲರ್ಅನ್ನು ಎಲ್ಲರೂ ಮರಳಿಮರಳಿ ನೋಡುತ್ತಿದ್ದಾರೆ. ಈ ಕಾರಣಕ್ಕೆ ಎಲ್ಲಾ ಭಾಷೆಯಲ್ಲಿ ರಿಲೀಸ್ ಆದ ಟ್ರೇಲರ್ ಕೋಟಿಕೋಟಿ ವೀಕ್ಷಣೆ ಕಂಡಿದೆ. ಕನ್ನಡದ ಟ್ರೇಲರ್ ಟ್ರೆಂಡಿಂಗ್ನಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ‘ಕೆಜಿಎಫ್ 2’ ಸಿನಿಮಾದ (KGF 2 Movie) ಟ್ರೇಲರ್ಗೆ ಇಷ್ಟು ದೊಡ್ಡ ಮಟ್ಟದ ರೆಸ್ಪಾನ್ಸ್ ಬಂದಿರುವ ವಿಚಾರ ಕರ್ನಾಟಕದ ಸಿನಿಪ್ರಿಯರಿಗೆ ಸಖತ್ ಖುಷಿ ನೀಡಿದೆ. ಸೋಶಿಯಲ್ ಮೀಡಿಯಾದಲ್ಲಿ (Social Media) ಈ ಬಗ್ಗೆ ಸಂತಸ ಹಂಚಿಕೊಳ್ಳಲಾಗುತ್ತಿದೆ. ‘ಕೆಜಿಎಫ್’ ಟೀಂ ಕೂಡ ಟ್ರೇಲರ್ಗೆ ಸಿಕ್ಕ ಪ್ರತಿಕ್ರಿಯೆಗೆ ಸಖತ್ ಖುಷಿಯಾಗಿದೆ.
ಏಪ್ರಿಲ್ 14ರಂದು ಐದು ಭಾಷೆಗಳಲ್ಲಿ ‘ಕೆಜಿಎಫ್ 2’ ಸಿನಿಮಾ ತೆರೆಗೆ ಬರುತ್ತಿದೆ. ಭಾನುವಾರ ನಡೆದ ಗ್ರ್ಯಾಂಡ್ ಇವೆಂಟ್ನಲ್ಲಿ ಐದೂ ಭಾಷೆಗಳಲ್ಲಿ ಟ್ರೇಲರ್ ಲಾಂಚ್ ಆಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಇಂದು (ಮಾರ್ಚ್ 28) ಮಧ್ಯಾಹ್ನ 1 ಗಂಟೆ ವೇಳೆಗೆ ಕನ್ನಡದಲ್ಲಿ ಈ ಸಿನಿಮಾದ ಟ್ರೇಲರ್ 1.7 ಕೋಟಿ (17 ಮಿಲಿಯನ್) ವೀಕ್ಷಣೆ ಕಂಡಿದೆ. ಹಿಂದಿಯಲ್ಲಿ ಅತಿ ಹೆಚ್ಚು ಅಂದರೆ, 3.3 (33 ಮಿಲಿಯನ್) ಕೋಟಿ ವೀವ್ಸ್ ಆಗಿದೆ. ತಮಿಳಿನಲ್ಲಿ 1 ಕೋಟಿ (10 ಮಿಲಿಯನ್), ತೆಲುಗಿನಲ್ಲಿ 1.2 ಕೋಟಿ (12 ಮಿಲಿಯನ್) ವೀಕ್ಷಣೆ ಕಂಡಿದೆ. ಮಲಯಾಳಂನಲ್ಲೂ ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುವ ಸೂಚನೆ ಸಿಕ್ಕಿದೆ. ಮಲಯಾಳಂನಲ್ಲಿ ಈ ಸಿನಿಮಾದ ಟ್ರೇಲರ್ 58 ಲಕ್ಷ ಬಾರಿ ವೀಕ್ಷಣೆ ಕಂಡಿದೆ.
‘ರಕ್ತದಿಂದ ಬರೆದ ಕಥೆ ಇದು, ಶಾಹಿಯಿಂದ ಮುಂದುವರಿಸೋಕೆ ಆಗಲ್ಲ. ಮುಂದುವರಿಸಬೇಕು ಎಂದರೆ ಮತ್ತೆ ರಕ್ತವನ್ನೇ ಕೇಳತ್ತೆ’, ‘ಅಲ್ಲಿ ಬೀಳುವ ಹೆಣಗಳೂ ಉಪಯೋಗಕ್ಕೆ ಬರುತ್ತದೆ, ಬೇಕಿದ್ದರೆ ರಣಹದ್ದುಗಳನ್ನು ಕೇಳು’ ಎಂಬಿತ್ಯಾದಿ ಡೈಲಾಗ್ಗಳು ಟ್ರೇಲರ್ನಲ್ಲಿ ಹೈಲೈಟ್ ಆಗಿದೆ. ಸಿನಿಮಾದ ಹಿನ್ನೆಲೆ ಸಂಗೀತ ಟ್ರೇಲರ್ನ ತೂಕವನ್ನು ಹೆಚ್ಚಿಸಿದೆ.
‘ಕೆಜಿಎಫ್’ ಸಿನಿಮಾ ಸೃಷ್ಟಿಸಿದ ಹೈಪ್ ತುಂಬಾನೇ ದೊಡ್ಡಮಟ್ಟದ್ದು. ಈ ಕಾರಣಕ್ಕೆ ‘ಕೆಜಿಎಫ್ 2’ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಮೊದಲೇ ಸಿನಿಮಾ ತೆರೆಗೆ ಬಂದು ಅಬ್ಬರಿಸಬೇಕಿತ್ತು. ಮೊದಲ ಚಾಪ್ಟರ್ ಪೂರ್ಣಗೊಳ್ಳುತ್ತಿದ್ದಂತೆ ಎರಡನೇ ಚಾಪ್ಟರ್ ಕೆಲಸಗಳು ಆರಂಭಗೊಂಡಿದ್ದವು. ಆದರೆ, ಕೊವಿಡ್ ಮೂರು ಅಲೆಗಳಿಂದ ಸಿನಿಮಾ ಕೆಲಸಗಳು ವಿಳಂಬ ಆದವು. ಈಗ ಮೂರನೇ ಅಲೆ ತಣ್ಣಗಾಗಿದೆ. ಹೀಗಾಗಿ, ಸಿನಿಮಾ ಏಪ್ರಿಲ್ 14ರಂದು ರಿಲೀಸ್ ಆಗುತ್ತಿದೆ.
ಇದನ್ನೂ ಓದಿ: ‘ರಕ್ತದಿಂದ ಬರೆದ ಕಥೆ ಇದು’; ‘ಕೆಜಿಎಫ್ ಚಾಪ್ಟರ್ 2’ ಟ್ರೇಲರ್ನಲ್ಲಿ ಅಬ್ಬರಿಸಿ, ಬೊಬ್ಬಿರಿದ ಯಶ್
‘ಬೀಸ್ಟ್ Vs ಕೆಜಿಎಫ್ ಅನ್ನೋಕೆ ಇದು ಎಲೆಕ್ಷನ್ ಅಲ್ಲ’: ದಳಪತಿ ವಿಜಯ್ ಚಿತ್ರದ ಪೈಪೋಟಿ ಬಗ್ಗೆ ಯಶ್ ಪ್ರತಿಕ್ರಿಯೆ