‘ಬೀಸ್ಟ್​ Vs ಕೆಜಿಎಫ್​ ಅನ್ನೋಕೆ ಇದು ಎಲೆಕ್ಷನ್​ ಅಲ್ಲ’: ದಳಪತಿ ವಿಜಯ್​ ಚಿತ್ರದ ಪೈಪೋಟಿ ಬಗ್ಗೆ ಯಶ್​ ಪ್ರತಿಕ್ರಿಯೆ

‘ಬೀಸ್ಟ್​ Vs ಕೆಜಿಎಫ್​ ಅನ್ನೋಕೆ ಇದು ಎಲೆಕ್ಷನ್​ ಅಲ್ಲ’: ದಳಪತಿ ವಿಜಯ್​ ಚಿತ್ರದ ಪೈಪೋಟಿ ಬಗ್ಗೆ ಯಶ್​ ಪ್ರತಿಕ್ರಿಯೆ
ದಳಪತಿ ವಿಜಯ್​, ಯಶ್​

KGF Chapter 2 and Beast: ‘ವಿಜಯ್ ಸರ್​ ನನಗಿಂತ ಸೀನಿಯರ್​. ನಾವು ಅವರಿಗೆ ಗೌರವ ಕೊಡಬೇಕು. ವಿಜಯ್​ ಅವರ ಅಭಿಮಾನಿಗಳಿಗೂ ‘ಕೆಜಿಎಫ್​ 2’ ಸಿನಿಮಾ ಇಷ್ಟ ಆಗಲಿದೆ’ ಎಂದು ಯಶ್​ ಹೇಳಿದ್ದಾರೆ.

TV9kannada Web Team

| Edited By: Madan Kumar

Mar 28, 2022 | 8:19 AM

ಏಪ್ರಿಲ್​ನಲ್ಲಿ ಸಿನಿಪ್ರಿಯರಿಗೆ ಮನರಂಜನೆಯ ಹಬ್ಬ ಆಗಲಿದೆ. ‘ರಾಕಿಂಗ್​ ಸ್ಟಾರ್​’ ಯಶ್ (Rocking Star Yash)​ ಅಭಿನಯದ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಏ.14ರಂದು ಬಿಡುಗಡೆ ಆಗಲಿದೆ. ಕನ್ನಡ ಮಾತ್ರವಲ್ಲದೇ ತಮಿಳು, ಮಲಯಾಳಂ, ಹಿಂದಿ ಮತ್ತು ತೆಲುಗಿಗೂ ಡಬ್​ ಆಗಿ ಈ ಸಿನಿಮಾ ರಿಲೀಸ್​ ಆಗಲಿದೆ. ಅದೇ ರೀತಿ ಕಾಲಿವುಡ್​ ನಟ ದಳಪತಿ ವಿಜಯ್​ ಅವರ ‘ಬೀಸ್ಟ್​’ ಸಿನಿಮಾ (Beast Movie) ಕೂಡ ಅದೇ ಸಮಯದಲ್ಲಿ ತೆರೆಕಾಣುತ್ತಿದೆ. ‘ಕೆಜಿಎಫ್​: 2’ ಚಿತ್ರಕ್ಕಿಂತಲೂ ಒಂದು ದಿನ ಮುಂಚೆ ಅಂದರೆ, ಏ.13ರಂದು ‘ಬೀಸ್ಟ್​’ ಬಿಡುಗಡೆ ಆಗಲಿದೆ. ಈ ರೀತಿ ಇಬ್ಬರು ದೊಡ್ಡ ಸ್ಟಾರ್​ ನಟರ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್​ ಆದಾಗ ಸಹಜವಾಗಿಯೇ ಪೈಪೋಟಿ ಏರ್ಪಡುತ್ತದೆ. ಆದರೆ ಇದನ್ನು ಬಾಕ್ಸ್​ ಆಫೀಸ್​ ಕ್ಲ್ಯಾಶ್​ ಎಂದು ಕರೆಯಲು ಯಶ್​ ಸಿದ್ಧರಿಲ್ಲ. ‘ಬೀಸ್ಟ್​ ವರ್ಸಸ್​ ಕೆಜಿಎಫ್​’ ಎಂಬ ಮಾತನ್ನೇ ಅವರು ತಳ್ಳಿ ಹಾಕಿದ್ದಾರೆ. ಅವರ ಪ್ರಕಾರ ಇದು ‘ಬೀಸ್ಟ್​ ಮತ್ತು ಕೆಜಿಎಫ್​ 2’. ‘ಬೀಸ್ಟ್​ ವರ್ಸಸ್​ ಕೆಜಿಎಫ್​ 2’ ಅಲ್ಲ. ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾದ ಟ್ರೇಲರ್​ ಲಾಂಚ್​ ಇವೆಂಟ್​ನಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಬೆಂಗಳೂರಿನಲ್ಲಿ ಅದ್ದೂರಿಯಾಗಿ ಭಾನುವಾರ (ಮಾ.27) ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಇದು ಪ್ಯಾನ್​ ಇಂಡಿಯಾ ಸಿನಿಮಾ ಆದ್ದರಿಂದ ಎಲ್ಲ ಭಾಷೆಯ ಪತ್ರಕರ್ತರನ್ನು ಬೆಂಗಳೂರಿಗೆ ಆಹ್ವಾನಿಸಿ ಸುದ್ದಿಗೋಷ್ಠಿ ನಡೆಸಲಾಗಿದೆ. ಈ ವೇಳೆ ‘ಬೀಸ್ಟ್​’ ಸಿನಿಮಾ ಜೊತೆಗಿನ ಕ್ಲ್ಯಾಶ್​ ಬಗ್ಗೆ ಪ್ರಶ್ನೆ ಎದುರಾಯಿತು. ಅದಕ್ಕೆ ಯಶ್​ ಅವರು ನೇರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

‘ನಾವು ತುಂಬ ಮುಂಚೆಯೇ ರಿಲೀಸ್​ ಡೇಟ್​ ಅನೌನ್ಸ್​ ಮಾಡಿದ್ವಿ. ಯಾವ ಸಿನಿಮಾ ರಿಲೀಸ್​ ಆಗುತ್ತದೆ ಅನ್ನೋದು ನಮಗೆ ಗೊತ್ತಿರಲಿಲ್ಲ. ಈಗ ವಿಜಯ್​ ಅವರ ಬೀಸ್ಟ್​ ಚಿತ್ರ ಬರುತ್ತಿದೆ. ಬೀಸ್ಟ್​ ವರ್ಸಸ್​ ಕೆಜಿಎಫ್​ ಅಂತ ಕೇಳಬಾರದು. ಬೀಸ್ಟ್​ ಮತ್ತು ಕೆಜಿಎಫ್​ ಎನ್ನಬೇಕು. ಎರಡೂ ಕೂಡ ಇಂಡಿಯನ್​ ಸಿನಿಮಾ. ಇದು ಎಲೆಕ್ಷನ್​ ಅಲ್ಲ, ಸಿನಿಮಾ. ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬ ಮಾತು ಇದರಲ್ಲಿ ಬರಲ್ಲ. ಎರಡೂ ಸಿನಿಮಾವನ್ನೂ ನೋಡೋಣ. ವಿಜಯ್ ಸರ್​ ನನಗಿಂತ ಸೀನಿಯರ್​. ನಾವು ಅವರಿಗೆ ಗೌರವ ಕೊಡಬೇಕು. ವಿಜಯ್​ ಅವರ ಅಭಿಮಾನಿಗಳಿಗೂ ‘ಕೆಜಿಎಫ್​ 2’ ಸಿನಿಮಾ ಇಷ್ಟ ಆಗಲಿದೆ’ ಎಂದು ಯಶ್​ ಹೇಳಿದ್ದಾರೆ.

‘ಕೆಜಿಎಫ್​ 2’ ರೀತಿಯೇ ‘ಬೀಸ್ಟ್​’ ಕೂಡ ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿ ತೆರೆ ಕಾಣುತ್ತಿದೆ. ಈ ಚಿತ್ರಕ್ಕೆ ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನ ಮಾಡಿದ್ದಾರೆ. ವಿಜಯ್​ಗೆ ಜೋಡಿಯಾಗಿ ಪೂಜಾ ಹೆಗ್ಡೆ ಅಭಿನಯಿಸಿದ್ದಾರೆ. ಈಗಾಗಲೇ ಹಾಡುಗಳು ಸೂಪರ್​ ಹಿಟ್​ ಆಗಿವೆ. ಆ ಕಾರಣದಿಂದ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಹಾಗೆಯೇ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಕೂಡ ಸಖತ್​ ಹೈಪ್​ ಸೃಷ್ಟಿ ಮಾಡಿದೆ.

ಪ್ರಶಾಂತ್​ ನೀಲ್​ ನಿರ್ದೇಶನದ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿ ಬಾಲಿವುಡ್​ ಕಲಾವಿದರಾದ ರವೀನಾ ಟಂಡನ್​ ಮತ್ತು ಸಂಜಯ್​ ದತ್​ ಅವರು ನಟಿಸಿರುವುದರಿಂದ ಉತ್ತರ ಭಾರತದ ಪ್ರೇಕ್ಷಕರು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಿಡುಗಡೆ ಆಗಿರುವ ಟ್ರೇಲರ್​ನಲ್ಲಿ ಇವರಿಬ್ಬರ ಪಾತ್ರಗಳು ಅಬ್ಬರಿಸಿವೆ. ರಮಿಕಾ ಸೇನ್​ ಎಂಬ ಪಾತ್ರದಲ್ಲಿ ರವೀನಾ ಟಂಡನ್​ ಕಾಣಿಸಿಕೊಂಡಿದ್ದರೆ, ಅಧೀರ ಎಂಬ ಪಾತ್ರಕ್ಕೆ ಸಂಜಯ್​ ದತ್​ ಬಣ್ಣ ಹಚ್ಚಿದ್ದಾರೆ. ಇವರಿಬ್ಬರು ಕೂಡ ಟ್ರೇಲರ್​ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಇದನ್ನೂ ಓದಿ:

‘ರಕ್ತದಿಂದ ಬರೆದ ಕಥೆ ಇದು’; ‘ಕೆಜಿಎಫ್​ ಚಾಪ್ಟರ್​ 2’ ಟ್ರೇಲರ್​ನಲ್ಲಿ ಅಬ್ಬರಿಸಿ, ಬೊಬ್ಬಿರಿದ ಯಶ್​

ಮುಂಬೈನ ಆರಂತಸ್ತಿನ ಮಾಲ್​ ಮೇಲೆ ರಾರಾಜಿಸಿದ ಯಶ್​ ಪೋಸ್ಟರ್​​; ಇದು ‘ಕೆಜಿಎಫ್​ 2’ ಕ್ರೇಜ್​

Follow us on

Related Stories

Most Read Stories

Click on your DTH Provider to Add TV9 Kannada