ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಬಗ್ಗೆ ಸಿಗುತ್ತಿದೆ ಬಿಗ್ ಅಪ್​ಡೇಟ್; ಜುಲೈ 16ಕ್ಕೆ ಟೀಸರ್

|

Updated on: Jul 11, 2024 | 4:10 PM

ಕಿಚ್ಚ ಸುದೀಪ್​ ಅವರು ‘ಮ್ಯಾಕ್ಸ್​’ ಸಿನಿಮಾಗೆ ಸಾಕಷ್ಟು ಸಮಯ ನೀಡಿದ್ದಾರೆ. ಈ ಚಿತ್ರ ಸಖತ್​ ಅದ್ದೂರಿಯಾಗಿ ಮೂಡಿಬರುತ್ತಿದೆ. ಈಗಾಗಲೇ ಬಂದಿರುವ ಪ್ರೋಮೋ, ಟೀಸರ್​ನಿಂದ ಕ್ರೇಜ್​ ಹೆಚ್ಚಿದೆ. ಈಗ ಮತ್ತೊಂದು ಟೀಸರ್​ ಬಿಡುಗಡೆಗೆ ಸಮಯ ನಿಗದಿ ಆಗಿದೆ. ಜು.16ಕ್ಕೆ ‘ಮ್ಯಾಕ್ಸ್​’ ಸಿನಿಮಾದ ಹೊಸ ಟೀಸರ್​ ಬರಲಿದ್ದು, ಅದರಲ್ಲಿ ಚಿತ್ರದ ರಿಲೀಸ್​ ದಿನಾಂಕ ಅನೌನ್ಸ್​ ಆಗುವ ನಿರೀಕ್ಷೆ ಇದೆ.

ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಬಗ್ಗೆ ಸಿಗುತ್ತಿದೆ ಬಿಗ್ ಅಪ್​ಡೇಟ್; ಜುಲೈ 16ಕ್ಕೆ ಟೀಸರ್
ಕಿಚ್ಚ ಸುದೀಪ್​
Follow us on

ನಟ ಕಿಚ್ಚ ಸುದೀಪ್​ ಅಭಿನಯದ ‘ಮ್ಯಾಕ್ಸ್​’ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಭಾರಿ ಬಜೆಟ್​ನಲ್ಲಿ ಈ ಸಿನಿಮಾ ಮೂಡಿಬಂದಿದೆ. ಕಾರಣಾಂತರಗಳಿಂದ ಈ ಚಿತ್ರದ ಕೆಲಸಗಳು ತಡ ಆದವು. ಆದಷ್ಟು ಬೇಗ ‘ಮ್ಯಾಕ್ಸ್​’ ಚಿತ್ರವನ್ನು ನೋಡಬೇಕು ಎಂಬುದು ಅಭಿಮಾನಿಗಳ ಆಸೆ. ಈಗ ಈ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದ ಬಗ್ಗೆ ಸುದೀಪ್​ ಅವರು ಹೊಸ ಅಪ್​ಡೇಟ್​ ನೀಡಿದ್ದಾರೆ. ಹೊಸ ಪೋಸ್ಟರ್​ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ಅವರು ಡಬಲ್​ ಮಾಡಿದ್ದಾರೆ. ಜುಲೈ 16ರಂದು ಮಧ್ಯಾಹ್ನ 12.34ಕ್ಕೆ ‘ಮ್ಯಾಕ್ಸ್​’ ಹೊಸ ಟೀಸರ್​ ಬಿಡುಗಡೆ ಆಗಲಿದೆ.

ಕಾಲಿವುಡ್​ ನಿರ್ಮಾಪಕ ಕಲೈಪುಲಿ ಎಸ್​. ಧಾನು ಅವರು ‘ಮ್ಯಾಕ್ಸ್​’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ವಿಜಯ್​ ಕಾರ್ತಿಕೇಯ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಈ ಸಿನಿಮಾಗೆ ಬಹುತೇಕ ಶೂಟಿಂಗ್​ ನಡೆಯಿತು. ಚಿತ್ರೀಕರಣ ಮುಗಿದ ನಂತರ ಸುದೀಪ್​ ಅವರು ಆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಈಗ ಹೊಸ ಟೀಸರ್​ ನೋಡುವ ಸಮಯ ಹತ್ತಿರವಾಗಿದೆ.

ಇದನ್ನೂ ಓದಿ: ಚಿತ್ರರಂಗದಿಂದ ದರ್ಶನ್​ ಬ್ಯಾನ್​ ಆಗಬೇಕಾ? ಕಿಚ್ಚ ಸುದೀಪ್​ ಹೇಳಿದ್ದಿಷ್ಟು..

ಕಳೆದ ವರ್ಷ ಕಿಚ್ಚ ಸುದೀಪ್​ ಅವರ ಜನ್ಮದಿನಕ್ಕೆ ಇಂಟರೆಸ್ಟಿಂಗ್​ ಟೀಸರ್​ ಅನಾವರಣ ಮಾಡಲಾಗಿತ್ತು. ಅದಕ್ಕೂ ಮುನ್ನ ಬಿಡುಗಡೆ ಆಗಿದ್ದ ಪ್ರೋಮೋ ಕೂಡ ಸಖತ್​ ಸದ್ದು ಮಾಡಿತ್ತು. ಇಷ್ಟೆಲ್ಲ ಕಾತರ ಮೂಡಿಸಿರುವ ಈ ಸಿನಿಮಾದಲ್ಲಿ ಸುದೀಪ್​ ಅವರು ಸಖತ್ ಮಾಸ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಜುಲೈ 16ಕ್ಕೆ ಬರಲಿರುವ ಟೀಸರ್​ ಯಾವ ರೀತಿ ಇರಲಿದೆ ಎಂಬುದನ್ನು ತಿಳಿಯುವ ಕೌತುಕ ಅಭಿಮಾನಿಗಳಲ್ಲಿ ಮೂಡಿದೆ.

ಇದು ಸುದೀಪ್​ ನಟನೆಯ 46ನೇ ಸಿನಿಮಾ. ಈ ಚಿತ್ರಕ್ಕೆ ಅಜನೀಶ್​ ಲೋಕನಾಥ್​ ಅವರು ಸಂಗೀತ ನೀಡಿದ್ದಾರೆ. ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡುವಾಗ ‘ಮ್ಯಾಕ್ಸ್​’ ರಿಲೀಸ್​ ಬಗ್ಗೆ ಸುದೀಪ್​ ಅವರು ಸೂಚನೆ ನೀಡಿದ್ದರು. ಆಗಸ್ಟ್​ ವೇಳೆಗೆ ಈ ಸಿನಿಮಾ ರಿಲೀಸ್​ ಆಗಬಹುದು ಎಂದು ಅವರು ಹೇಳಿದ್ದರು. ಜು.16ರಂದು ಬರಲಿರುವ ಟೀಸರ್​ನಲ್ಲಿ ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ಬಹಿರಂಗ ಆಗುವ ಸಾಧ್ಯತೆ ದಟ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.