
ಹತ್ತು ಹಲವು ಕಾರಣಗಳಿಂದಾಗಿ ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾ ಸೌಂಡು ಮಾಡುತ್ತಿದೆ. ಕಿಚ್ಚ ಸುದೀಪ್ (Kichcha Sudeep) ನಟನೆಯ ಈ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ನಟಿಸಿದ್ದಾರೆ ಎಂಬುದು ಕೆಲವೇ ದಿನಗಳ ಹಿಂದೆ ತಿಳಿದುಬಂದಿತ್ತು. ಆದರೆ ಪಾತ್ರದ ಹೆಸರೇನು ಮತ್ತು ಅವರ ಲುಕ್ ಹೇಗಿರಲಿದೆ ಎಂಬುದನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಈಗ ಜಾಕ್ವೆಲಿನ್ ಪಾತ್ರದ ಫಸ್ಟ್ಲುಕ್ ಬಹಿರಂಗಪಡಿಸಲಾಗಿದೆ. ಅವರ ಪಾತ್ರದ ಹೆಸರು ‘ಗಡಂಗ್ ರಕ್ಕಮ್ಮ’ ಎಂದು ಕೂಡ ನಿರ್ದೇಶಕ ಅನೂಪ್ ಭಂಡಾರಿ (Anup Bhandari) ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿದ್ದಾರೆ. ವಿಶೇಷ ಹಾಡಿನಲ್ಲಿ ಅವರು ಸುದೀಪ್ ಜೊತೆ ಸೇರಿ ಹೆಜ್ಜೆ ಹಾಕಿದ್ದಾರೆ. ಚಿತ್ರತಂಡ ರಿಲೀಸ್ ಮಾಡಿರುವ ಹೊಸ ಪೋಸ್ಟರ್ ಕೌತುಕ ಮೂಡಿಸುವಂತಿದೆ. ಕೈಯಲ್ಲಿ ಸಾರಾಯಿ ಬಾಟಲಿ ಹಿಡಿದು, ಗ್ಲಾಮರಸ್ ಆದಂತಹ ಕಾಸ್ಟ್ಯೂಮ್ ಧರಿಸಿ ನಿಂತಿರುವ ಜಾಕ್ವೆಲಿನ್ ಅವರ ಲುಕ್ ಗಮನ ಸೆಳೆಯುತ್ತಿದೆ.
‘ಗಡಂಗ್ ರಕ್ಕಮ್ಮನಿಗೆ ಗೊತ್ತಿಲ್ಲದೇ ಇರುವುದು ಯಾವುದೂ ಇಲ್ಲ’ ಎಂಬ ಕ್ಯಾಪ್ಷನ್ ಜೊತೆಗೆ ಪೋಸ್ಟರ್ ಅನಾವರಣ ಮಾಡಲಾಗಿದೆ. ‘ಖಂಡಿತವಾಗಿಯೂ ವಿಕ್ರಾಂತ್ ರೋಣ ಸಿನಿಮಾ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಹೆಮ್ಮೆ ತರಲಿದೆ’ ಎಂದು ಕೆಲವೇ ದಿನಗಳ ಹಿಂದೆ ಟ್ವೀಟ್ ಮಾಡಿದ್ದ ಜಾಕ್ವೆಲಿನ್, ಈಗ ತಮ್ಮ ಫಸ್ಟ್ಲುಕ್ ಬಿಡುಗಡೆ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ‘ವಿಕ್ರಾಂತ್ ರೋಣ ಸಿನಿಮಾದಲ್ಲಿನ ಗಡಂಗ್ ರಕ್ಕಮ್ಮ ಎಂಬ ನನ್ನ ಪಾತ್ರವನ್ನು ಪರಿಚಯಿಸಲು ಖುಷಿ ಆಗುತ್ತಿದೆ’ ಎಂದು ಜಾಕ್ವೆಲಿನ್ ಫರ್ನಾಂಡಿಸ್ ಟ್ವೀಟ್ ಮಾಡಿದ್ದಾರೆ. ಕನ್ನಡ ಸಿನಿಪ್ರಿಯರಿಂದ ಹಾಗೂ ಸುದೀಪ್ ಅಭಿಮಾನಿಗಳಿಂದ ಅವರಿಗೆ ಭರ್ಜರಿ ಸ್ವಾಗತ ಸಿಗುತ್ತಿದೆ.
ಶಾಲಿನಿ ಮಂಜುನಾಥ್ ಮತ್ತು ಅಲಂಕಾರ್ ಪಾಂಡಿಯನ್ ಜೊತೆಯಾಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕಿಚ್ಚ ಸುದೀಪ್ ಜೊತೆ ನಿರೂಪ್ ಭಂಡಾರಿ, ನೀತಾ ಅಶೋಕ್ ಮುಂತಾದವರು ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಜಾಕ್ವೆಲಿನ್ ಜೊತೆಗೆ ಶೂಟಿಂಗ್ ಮುಗಿಸಿದ ಬಳಿಕ ಅವರ ಕಾರ್ಯವೈಖರಿಗೆ ಸುದೀಪ್ ಮೆಚ್ಚುಗೆ ಸೂಚಿಸಿದ್ದರು. ಇಬ್ಬರೂ ಜೊತೆಯಾಗಿರುವ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡು, ವಿಶೇಷ ಹಾಡಿನ ಬಗ್ಗೆ ನಿರೀಕ್ಷೆ ಮೂಡಿಸಿದ್ದರು. ಆ ಹಾಡು ಯಾವಾಗ ಬಿಡುಗಡೆ ಆಗಲಿದೆ ಎಂದು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುವಷ್ಟು ಕಾತರ ಹೆಚ್ಚಿದೆ.
ಇದನ್ನೂ ಓದಿ:
‘ವಿಕ್ರಾಂತ್ ರೋಣ’ ಚಿತ್ರದ ನಟಿ ಜಾಕ್ವೆಲಿನ್ ಹಾಟ್ ಫೋಟೋ ವೈರಲ್
ಜಾಕ್ವೆಲಿನ್ ಜೊತೆಗಿನ ನೆಚ್ಚಿನ ಚಿತ್ರಗಳನ್ನು ಹಂಚಿಕೊಂಡ ಕಿಚ್ಚ ಸುದೀಪ್
Published On - 2:03 pm, Sat, 31 July 21