ಕೈಚಾಚಿದ್ದು, ಕಣ್ಣಿರು ಹಾಕಿದ್ದು ಸಾಕು: ವಿಷ್ಣು ಅಭಿಮಾನಿಗಳಿಗೆ ಸುದೀಪ್ ಕರೆ

Kichcha Sudeep: ಅಭಿಮಾನ್ ಸ್ಟುಡಿಯೋನಲ್ಲಿದ್ದ ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮಗೊಳಿಸಲಾಗಿದೆ. ಇದು ಸಹಜವಾಗಿಯೇ ವಿಷ್ಣು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ನಟ ಸುದೀಪ್ ಸಹ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿದ್ದು, ಅಭಿಮಾನ್ ಸ್ಟುಡಿಯೋನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಯತ್ನಿಸಿದ್ದರು. ಇದೀಗ ಸಮಾಧಿ ನೆಲಸಮದ ಬಳಿಕ ವಿಡಿಯೋ ಹಂಚಿಕೊಂಡಿರುವ ಸುದೀಪ್ ವಿಷ್ಣು ಅಭಿಮಾನಿಗಳಿಗೆ ಕರೆಯೊಂದನ್ನು ನೀಡಿದ್ದಾರೆ.

ಕೈಚಾಚಿದ್ದು, ಕಣ್ಣಿರು ಹಾಕಿದ್ದು ಸಾಕು: ವಿಷ್ಣು ಅಭಿಮಾನಿಗಳಿಗೆ ಸುದೀಪ್ ಕರೆ
Vishnuvardhan Sudeep

Updated on: Aug 09, 2025 | 6:43 PM

ಅಭಿಮಾನ್ ಸ್ಟುಡಿಯೋನಲ್ಲಿದ್ದ ವಿಷ್ಣುವರ್ಧನ್ (Vishnuvardhan) ಸಮಾಧಿಯನ್ನು ಧ್ವಂಸ ಮಾಡಲಾಗಿದೆ. ಮೇರು ನಟನಿಗೆ ಆದ ಅವಮಾನ ಸಿನಿಮಾ ಸೆಲೆಬ್ರಿಟಿಗಳಿಗೆ ಹಾಗೂ ಅವರ ಅಭಿಮಾನಿಗಳಿಗೆ ತೀವ್ರ ಬೇಸರ ಮೂಡಿಸಿದೆ. ದಶಕಕ್ಕೂ ಹೆಚ್ಚು ಸಮಯದಿಂದಲೂ ವಿಷ್ಣುವರ್ಧನ್ ಸ್ಮಾರಕದ ವಿಚಾರವಾಗಿ ವಿವಾದ ಚಾಲ್ತಿಯಲ್ಲೇ ಇತ್ತು. ಅಭಿಮಾನಿಗಳು, ಕೆಲ ಸಿನಿಮಾ ಸೆಲೆಬ್ರಿಟಿಗಳು ಸಹ ವಿಷ್ಣುವರ್ಧನ್ ಸ್ಮಾರಕ ಕುರಿತಾಗಿ ಸರ್ಕಾರಗಳ ಬಳಿ ಮನವಿ ಮಾಡಿದ್ದರು. ಅದರಲ್ಲಿ ಸ್ಟಾರ್ ನಟ ಸುದೀಪ್ ಸಹ ಒಬ್ಬರು. ಇದೀಗ ವಿಷ್ಣುವರ್ಧನ್ ಸಮಾಧಿ ಧ್ವಂಸ ಪ್ರಕರಣದ ಬಳಿಕ ಸುದೀಪ್ ಅವರು ತಮ್ಮ ಬೇಸರವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಜೊತೆಗೆ ವಿಷ್ಣು ಅಭಿಮಾನಿಗಳಿಗೆ ಸಂದೇಶವೊಂದನ್ನು ಸಹ ನೀಡಿದ್ದಾರೆ.

‘ವಿಷ್ಣು ಸರ್ ಸಮಾಧಿಯೊಟ್ಟಿಗೆ ಏನು ನಡೆಯಿತೊ ಅದು ನಡೆಯಬಾರದಿತ್ತು. ಇಲ್ಲಿ ಒಂದು ಚೆನ್ನಾಗಿ ಅರ್ಥವಾಗುತ್ತದೆ. ಒಂದೇ ಊರು, ಒಂದೇ ರಾಜ್ಯ, ನಮ್ಮದೇ ಕಲಾವಿದರು ಆದರೆ ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ನ್ಯಾಯ. ನಾವುಗಳು ಓಡಾಡಿದ್ದಾಯ್ತು, ನೀವುಗಳು ಹೋರಾಡಿದ್ದಾಯ್ತು, ಎಲ್ಲರಲ್ಲಿ ಮನವಿ ಮಾಡಿಕೊಂಡಿದ್ದಾಯ್ತು. ದಯವಿಟ್ಟು ಇದನ್ನು ಮಾಡಿಕೊಡಿ, ಸ್ವಲ್ಪ ಕರುಣೆ ತೋರಿಸಿ ಎಂದು ಕೇಳಿಕೊಂಡಿದ್ದಾಯ್ತು. ಅಧಿಕಾರದಲ್ಲಿರುವವರಿಗೆ ಇದು ದೊಡ್ಡ ವಿಷಯ ಆಗಿರಲಿಲ್ಲ. ಅವರ ಸಣ್ಣ ಪ್ರಯತ್ನ ಸಹ ಇಂದು ನಡೆದಿರುವುದನ್ನು ತಡೆಯುತ್ತಿತ್ತು’ ಎಂದಿದ್ದಾರೆ ಸುದೀಪ್.

‘ಇನ್ನು ಮುಂದೆ ನಾವು ಭಿಕ್ಷೆ ಬೇಡಬೇಕಾದ ಅವಶ್ಯಕತೆ ಇಲ್ಲ. ಮಾಡಬೇಕು ಎಂದುಕೊಂಡಿದ್ದರೆ ಇಷ್ಟು ಹೊತ್ತಿಗೆ ಮಾಡಿರುತ್ತಿದ್ದರು. ಆದರೆ ಈ ವರೆಗೆ ಮಾಡಿಲ್ಲ ಅಂದರೆ ಅರ್ಥ ಮಾಡಿಕೊಳ್ಳಿ. ಯಾರು? ಏನು? ಹೇಗೆ ಎತ್ತಿಟ್ಟರು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಈಗ ಅದು ಮುಗಿದು ಹೋದ ಕತೆ. ಅದನ್ನು ಬದಿಗಿಟ್ಟು, ನಾವು ಮುಂದೆ ಆಗಬೇಕಾದ ಕೆಲಸಗಳ ಬಗ್ಗೆ ಗಮನ ಹರಿಸೋಣ’ ಎಂದಿದ್ದಾರೆ ಸುದೀಪ್.

ಇದನ್ನೂ ಓದಿ:ವಿಷ್ಣುವರ್ಧನ್ ಸಮಾಧಿ ನೆಲಸಮ: ‘ಎಲ್ಲದಕ್ಕೂ ಅವನೇ ಕಾರಣ’

‘ನಾನು ಇತ್ತೀಚೆಗಷ್ಟೆ ವೀರಕಪುತ್ರ ಶ್ರೀನಿವಾಸ್​ ಅವರ ಬಳಿ ಮಾತನಾಡುತ್ತಿದ್ದೆ. ಅವರು ಕೆಲವು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಆದಷ್ಟು ಬೇಗ ದೊಡ್ಡ ಪ್ರತಿಮೆ ಕಟ್ಟೋಣ ಎಂದುಕೊಂಡಿದ್ದಾರೆ. ಅದನ್ನು ನಾವು ಮಾಡೋಣ. ಆ ಪ್ರತಿಮೆ ನಿರ್ಮಾಣಕ್ಕೆ ನಾನು ನನ್ನ ಕೈಲಾದ ಸಹಾಯವನ್ನು ಮಾಡಲಿದ್ದೇನೆ’ ಎಂದಿದ್ದಾರೆ ಸುದೀಪ್.

‘ಎಲ್ಲರಿಗೂ ನೋವಾಗಿದೆ. ಈ ಘಟನೆ ಆಗಬಾರದಿತ್ತು. ರಾತ್ರೋರಾತ್ರಿ ಹೀಗೆ ಮಾಡಿದ್ದು ಹೇಡಿತನವೂ ಹೌದು. ಹೀಗೆ ಮಾಡಿದವರು ಹೇಡಿಗಳು. ನೋವಾಗುತ್ತೆ ಆದರೆ ಅದರಿಂದ ಹೊರಗೆ ಬರಬೇಕಿದೆ. ಹತ್ತು ನಿಮಿಷ ಕಣ್ಣೀರು ಹಾಕಿ 11 ನೇ ನಿಮಿಷ ಮುಂದೆ ಏನು ಮಾಡಬೇಕು ಎಂದು ಯೋಚಿಸಿ ಮುಂದೆ ಹೋಗುವುದು ನನ್ನ ಅಭ್ಯಾಸ. ನೀವು ಅದನ್ನೇ ಮಾಡುತ್ತೀರ ಎಂದು ಆಶಿಸುತ್ತೇನೆ. ಕೈ ಚಾಚಿದ್ದು ಸಾಕು. ಮುಂದೆ ಏನು ಮಾಡಬೇಕೊ ಅದನ್ನು ಮಾಡೋಣ’ ಎಂದಿದ್ದಾರೆ ಸುದೀಪ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:28 pm, Sat, 9 August 25