AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಷ್ಣುವರ್ಧನ್ ಸಮಾಧಿ ನೆಲಸಮ: ನಿಜಕ್ಕೂ ಆ ಜಾಗ ಯಾರದ್ದು? ಅದರ ಇತಿಹಾಸವೇನು?

Vishnuvardhan: ಅಭಿಮಾನ್ ಸ್ಟುಡಿಯೋ ಸ್ಥಳದಲ್ಲಿದ್ದ ವಿಷ್ಣುವರ್ಧನ್ ಸಮಾಧಿಯನ್ನು ಬಾಲಣ್ಣನ ಕುಟುಂಬದವರು ಧ್ವಂಸ ಮಾಡಿದ್ದಾರೆ. ವಿಷ್ಣುವರ್ಧನ್ ಅಂತ್ಯಕ್ರಿಯೆ ಆ ಸ್ಥಳದಲ್ಲಿ ಆದಾಗಿನಿಂದಲೂ ಆ ಜಾಗ ವಿವಾದದಲ್ಲಿಯೇ ಇದೆ. ಅಸಲಿಗೆ ಅದಕ್ಕೆ ಮುಂಚಿನಿಂದಲೂ ವಿವಾದದಲ್ಲಿತ್ತು. ಏನದು ವಿವಾದ? ಆ ಜಾಗದ ಇತಿಹಾಸ ಏನು? ಇಲ್ಲಿದೆ ಪೂರ್ಣ ಮಾಹಿತಿ....

ವಿಷ್ಣುವರ್ಧನ್ ಸಮಾಧಿ ನೆಲಸಮ: ನಿಜಕ್ಕೂ ಆ ಜಾಗ ಯಾರದ್ದು? ಅದರ ಇತಿಹಾಸವೇನು?
Vishnuvardhan
ಮಂಜುನಾಥ ಸಿ.
|

Updated on:Aug 09, 2025 | 9:45 PM

Share

ವಿಷ್ಣುವರ್ಧನ್ (Vishnuvardhan) ಪುಣ್ಯಭೂಮಿಯನ್ನು ಬಾಲಣ್ಣ ಕುಟುಂಬದ ಸದಸ್ಯರು ನೆಲಸಮಗೊಳಿಸಿದ್ದಾರೆ. ಕನ್ನಡ ಚಿತ್ರರಂಗದ ಮೇರು ನಟನ ಸಮಾಧಿ ನೆಲಸಮವಾಗಿರುವುದು ಚಿತ್ರರಂಗಕ್ಕೆ ಆಘಾತ ತಂದಿದೆ. ವಿಷ್ಣುವರ್ಧನ್ ಅಭಿಮಾನಿಗಳು ಸಹ ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ವಿಷ್ಣುವರ್ಧನ್ ಸಮಾಧಿಯನ್ನು ನೆಲಸಮಗೊಳಿಸಲು ಕಾರಣ ಏನು? ನೆಲಸಮಗೊಳಿಸಲು ನ್ಯಾಯಾಲಯವೇ ಅನುಮತಿ ನೀಡಿದ್ದು ಏಕೆ? ಒಂದೊಮ್ಮೆ ಅದು ಖಾಸಗಿ ಸ್ಥಳವಾಗಿದ್ದರೆ ಆ ಸ್ಥಳದಲ್ಲಿಯೇ ವಿಷ್ಣುವರ್ಧನ್ ಅಂತಿಮ ಸಂಸ್ಕಾರ ಮಾಡಿದ್ದು ಏಕೆ? ಆ ಜಾಗದ ಇತಿಹಾಸವೇನು? ಎಲ್ಲ ಮಾಹಿತಿ ಇಲ್ಲಿದೆ…

ವಿಷ್ಣುವರ್ಧನ್ ಸಮಾಧಿ ಇದ್ದ ಸ್ಥಳವನ್ನು ಅಭಿಮಾನ್ ಸ್ಟುಡಿಯೋ ಸ್ಥಳ ಎಂದು ಕರೆಯಲಾಗುತ್ತದೆ. ಇದು ಕೆಂಗೇರಿ ಬಳಿಯಲ್ಲಿದೆ. 10 ಎಕರೆ ವಿಶಾಲವಾದ ಪ್ರದೇಶವಿದು. ಇದರ ಮಾಲೀಕರಾಗಿದ್ದವರು ಕನ್ನಡ ಚಿತ್ರರಂಗದ ಹಿರಿಯ ನಟ ಬಾಲಕೃಷ್ಣ. ಹಾಗೆಂದು ಇವರು ಯಾರೋ ಇನ್ನೊಬ್ಬರಿಂದ ಇಷ್ಟು ವಿಶಾಲವಾದ ಜಾಗವನ್ನು ಖರೀದಿ ಮಾಡಿಲ್ಲ ಬದಲಿಗೆ ಸರ್ಕಾರವೇ ಬಾಲಕೃಷ್ಣ ಅವರಿಗೆ ನಿಗದಿತ ಸ್ಥಳವನ್ನು ನೀಡಿತ್ತು.

ಬಾಲಣ್ಣ ಅವರು ಅಭಿಮಾನ್ ಸ್ಟುಡಿಯೋ ನಿರ್ಮಾಣಕ್ಕೆ ಮುಂದಾಗಿದ್ದರು. ಇದಕ್ಕೆಂದು 20 ಎಕರೆ ಜಾಗವನ್ನು ಸರ್ಕಾರದಿಂದ ಅನುದಾನವಾಗಿ ಪಡೆದುಕೊಂಡರು. ಅವರು ಬದುಕಿದ್ದಾಗಲೇ ಅದರಲ್ಲಿ 10 ಎಕರೆ ಜಾಗವನ್ನು ಮಾರಾಟ ಮಾಡಿದರು. ಇನ್ನುಳಿದ 10 ಎಕರೆ ಜಾಗದಲ್ಲಿ ಅಭಿಮಾನ್ ಸ್ಟುಡಿಯೋ ಅಭಿವೃದ್ಧಿ ಮಾಡುವುದಾಗಿ ಅವರು ಮತ್ತು ಅವರ ಮಕ್ಕಳು ಹೇಳಿದ್ದರು.

ಆದರೆ 2004 ರಲ್ಲಿ ಅಂದರೆ ವಿಷ್ಣುವರ್ಧನ್ ಅವರು ನಿಧನ ಹೊಂದುವ ಮುಂಚೆಯೇ ಆ ಜಾಗದ ಮೇಲೆ ಬಾಲಣ್ಣ ಅವರ ಪುತ್ರಿ ಗೀತಾ ಅವರು ಕೇಸು ದಾಖಲಿಸಿದರು. ಆ ಸ್ಥಳದಲ್ಲಿ ತಮ್ಮದೂ ಪಾಲಿದೆ ಎಂದು ನ್ಯಾಯಾಲಯದ ಮೆಟ್ಟಿಲೇರಿದರು. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದ್ದಾಗಲೇ ವಿಷ್ಣುವರ್ಧನ್ ಅವರ ಅಂತಿಮ ಸಂಸ್ಕಾರವನ್ನು ಅದೇ ವಿವಾದಿತ ಜಾಗದಲ್ಲಿ ಮಾಡಲಾಯ್ತು.

ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಹೇಳಿರುವಂತೆ, ವಿಷ್ಣುವರ್ಧನ್ ಅವರು ಮೈಸೂರಿನಲ್ಲಿ ನಿಧನರಾದ ದಿನ ಅವರನ್ನು ಬೆಂಗಳೂರಿಗೆ ಕರೆತರುತ್ತಿರುವಾಗ ಆಗಿನ ಮುಖ್ಯಮಂತ್ರಿಯವರಾಗಿದ್ದ ಕುಮಾರಸ್ವಾಮಿ ಅವರು ಅನಿರುದ್ಧ್ ಅವರಿಗೆ ಕರೆ ಮಾಡಿ, ಎಲ್ಲಿ ಅಂತ್ಯ ಸಂಸ್ಕಾರ ಮಾಡುತ್ತೀರ ಎಂದರಂತೆ. ನಾವು ರುದ್ರಭೂಮಿಯಲ್ಲಿ ಸಂಸ್ಕಾರ ಮಾಡುವುದಾಗಿ ಹೇಳಿದರಂತೆ. ಆದರೆ ಕುಮಾರಸ್ವಾಮಿ ಅವರು ಬೇಡ, ಸರ್ಕಾರ ಸಕಲ ಗೌರವಗಳೊಂದಿಗೆ ಅಭಿಮಾನ್ ಸ್ಟುಡಿಯೋನಲ್ಲಿ ಅಂತಿಮ ಸಂಸ್ಕಾರ ಮಾಡಲಿದೆ ಎಂದರಂತೆ. ಅದೇ ಕಾರಣಕ್ಕೆ ಅವರು ಒಪ್ಪಿ ಅದೇ ಸ್ಥಳದಲ್ಲಿ ದಹನ ಮಾಡಿದರಂತೆ. ಆದರೆ ಅದಾದ ಕೆಲ ದಿನಗಳ ಬಳಿಕ ಅದು ವಿವಾದಿತ ಜಾಗ ಎಂಬುದು ಕುಟುಂಬದವರಿಗೆ ಗೊತ್ತಾಯ್ತಂತೆ.

ಇದನ್ನೂ ಓದಿ:ವಿಷ್ಣು ಸಮಾಧಿ ಸ್ಥಳ ಉಳಿಸಿಕೊಳ್ಳಲು ಏನು ಬೇಕಾದರೂ ಮಾಡಲು ರೆಡಿ: ಸುದೀಪ್

ಸರ್ಕಾರವು ವಿಷ್ಣುವರ್ಧನ್ ಸ್ಮಾರಕದ ಅಭಿವೃದ್ಧಿಗೆ ಮೊದಲು ಎರಡು ಕೋಟಿ ಬಿಡುಗಡೆ ಮಾಡಲು ಮುಂದಾಯ್ತತಂತೆ. ಅದೇ ಹಣವನ್ನು ಆ ಜಾಗದ ಮೇಲೆ ಕೇಸು ಹಾಕಿರುವ ಗೀತಾ ಬಾಲಿ ಅವರಿಗೆ ಕೊಡುವ ನಿರ್ಣಯ ಆಯ್ತಂತೆ. ಗೀತಾ ಅವರಿಗೆ ಹಣ ನೀಡಿ ಎರಡು ಎಕರೆ ಜಾಗವನ್ನು ಸ್ಮಾಕರ ನಿರ್ಮಾಣಕ್ಕೆ ಬಳಸಿಕೊಳ್ಳುವುದು ಎಂದಾಯ್ತಂತೆ. ಆದರೆ ಗೀತಾ ಅವರು, ಹಣವನ್ನು ನಿರಾಕರಿಸಿದರಂತೆ. ಹಣ ಪಡೆದರೆ ಉಳಿದ ಎಂಟು ಎಕರೆ ಮೇಲೆ ಹಕ್ಕು ಹೋಗುತ್ತದೆ ಎಂಬ ಕಾರಣಕ್ಕೆ ಅವರು ಹಿಂದೆ ಸರಿದರಂತೆ.

ಅಸಲಿಗೆ ಆ ಜಾಗದಲ್ಲಿ ಸ್ಟುಡಿಯೋ ಅಭಿವೃದ್ಧಿ ಮಾಡದಿದ್ದ ಪಕ್ಷದಲ್ಲಿ ಆ ಇಡೀ 10 ಎಕರೆ ಜಾಗವನ್ನು ಸರ್ಕಾರಕ್ಕೆ ಮರಳಿ ಪಡೆಯುವ ಅಧಿಕಾರ ಇತ್ತಂತೆ. ಅದರಂತೆ ಸರ್ಕಾರವು ಒಮ್ಮೆ ಸ್ಟುಡಿಯೋದ ಕಾರ್ಯನಿರ್ವಹಣೆ ಬಗ್ಗೆ ತನಿಖೆ ನಡೆಸಿ ಆ ಹತ್ತು ಎಕರೆ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳುವ ಆದೇಶ ಮಾಡಿತಂತೆ. ಆದರೆ ಆಗಲೂ ಸಹ ನಿಗದಿತ ಅಧಿಕಾರಿಗಳು ಬಾಲಣ್ಣ ಅವರ ಕುಟುಂಬದವರಿಂದ ಜಾಗವನ್ನು ಪಡೆದುಕೊಳ್ಳಲಿಲ್ಲ. ಆ ಬಳಿಕ ಬಾಲಣ್ಣ ಅವರ ಮಕ್ಕಳು 2015 ರಲ್ಲಿ ಹೈಕೋರ್ಟ್ ಮೊರೆ ಹೋಗಿ ಸರ್ಕಾರದ ಜಮೀನು ಜಪ್ತಿ ಆದೇಶಕ್ಕೆ ತಡೆ ತರಲು ಯಶಸ್ವಿ ಆದರು.

ಇದನ್ನೂ ಓದಿ:ಕೈಚಾಚಿದ್ದು, ಕಣ್ಣಿರು ಹಾಕಿದ್ದು ಸಾಕು: ವಿಷ್ಣು ಅಭಿಮಾನಿಗಳಿಗೆ ಸುದೀಪ್ ಕರೆ

ಅದಾದ ಬಳಿಕ ಸರ್ಕಾರವು ಆ ಜಾಗದ ಪಕ್ಕದಲ್ಲೇ ಮತ್ತೊಂದು ಜಾಗವನ್ನು ಸ್ಮಾರಕ ನಿರ್ಮಾಣಕ್ಕೆ ಗುರುತಿಸಿತು ಆದರೆ ಗುರುತಿಸಿದ್ದ ಜಾಗ ಅರಣ್ಯ ಇಲಾಖೆಗೆ ಸೇರಿದ್ದ ಕಾರಣ ನ್ಯಾಯಾಲವು ಸ್ಮಾರಕ ನಿರ್ಮಾಣಕ್ಕೆ ಅನುಮತಿ ನೀಡಲಿಲ್ಲ. ಅದಾದ ಬಳಿಕ ಮೈಸೂರಿನಲ್ಲಿ ಜಾಗ ಗುರುತಿಸಲಾಯ್ತು. ಆರಂಭದಲ್ಲಿ ಅದು ಗೋಮಾಳದ ಜಾಗವೆಂದು ಕೆಲವರು ಪ್ರತಿಭಟನೆ ನಡೆಸಿದರು. ಆದರೆ ನ್ಯಾಯಾಲವು ಅರ್ಜಿಯನ್ನು ತಳ್ಳಿಹಾಕಿ ಸ್ಮಾರಕ ನಿರ್ಮಾಣಕ್ಕೆ ಅನುಮತಿ ನೀಡಿತು.

ಅದಕ್ಕೂ ತುಸು ಮುಂಚೆ ವಿಷ್ಣುವರ್ಧನ್ ಅಭಿಮಾನಿಗಳು ಸೇರಿಕೊಂಡು ಬಾಲಣ್ಣ ಕುಟುಂಬದವರ ವಿರುದ್ಧ ಕೋರ್ಟ್ ಮೆಟ್ಟಿಲೇರಿದರು. ಆದರೆ 2023 ರಲ್ಲಿ ತೀರ್ಪು ನೀಡಿದ ನ್ಯಾಯಾಲಯ ಈ ಪ್ರಕರಣದಲ್ಲಿ ವಿಷ್ಣುವರ್ಧನ್ ಅಭಿಮಾನಿಗಳಿಗೆ ಯಾವುದೇ ಹಕ್ಕು ಇಲ್ಲ ಎಂದು ಸ್ಪಷ್ಟವಾಗಿ ಹೇಳಿತು. ವಿಷ್ಣುವರ್ಧನ್ ಕುಟುಂಬ ಹಾಗೂ ಬಾಲಣ್ಣ ಕುಟುಂಬದವರ ಮಾತುಕತೆಯಿಂದ ಬೇಕಾದರೆ ಪ್ರಕರಣ ಇತ್ಯರ್ಥವಾಗಲಿ ಎಂದು ಅಭಿಪ್ರಾಯ ಪಟ್ಟಿತು. ಆದರೆ ಅದಾಗಲೇ ಮೈಸೂರಿನಲ್ಲಿ ಸ್ಥಳ ಗುರುತಿಸಿ ಆಗಿತ್ತಾದ್ದರಿಂದ ವಿಷ್ಣುವರ್ಧನ್ ಕುಟುಂಬದವರು ಆ ವಿಷಯದಲ್ಲಿ ಆಸಕ್ತಿ ಕಳೆದುಕೊಂಡರು. ಇದೀಗ ಬಾಲಣ್ಣ ಕುಟುಂಬದವರು ಸ್ಮಾರಕವನ್ನು ನೆಲಸಮಗೊಳಿಸಿದ್ದಾರೆ. ವಿಶೇಷವೆಂದರೆ ಅದೇ ಜಾಗದಲ್ಲಿ ಹಿರಿಯ ನಟ ಬಾಲಣ್ಣ ಅವರ ಸಮಾಧಿಯೂ ಇತ್ತು. ಅದನ್ನೂ ಸಹ ನೆಲಸಮಗೊಳಿಸಿದ್ದಾರೆ. ಒಂದು ಗಣೇಶನ ದೇವಾಲಯ ಇತ್ತು ಅದನ್ನೂ ಸಹ ಧ್ವಂಸ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:44 pm, Sat, 9 August 25