ನಟ ಸುದೀಪ್ (Sudeep) ಮುಂದಾಳತ್ವದಲ್ಲಿ ನಡೆದ ಕೆಸಿಸಿ ಸೀಸನ್ ನಾಲ್ಕು ನಿನ್ನೆ (ಡಿಸೆಂಬರ್ 25) ಅಂತ್ಯಗೊಂಡಿದೆ. ಗಣೇಶ್ ನಾಯಕತ್ವ ವಹಿಸಿದ್ದ ಗಂಗಾ ತಂಡ ಚಾಂಪಿಯನ್ ಆದರೆ, ಶಿವರಾಜ್ ಕುಮಾರ್ ನಾಯಕತ್ವದ ತಂಡ ರನ್ನರ್ ಅಪ್ ಆಗಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆಗಮಿಸಿ ಗೆದ್ದ ತಂಡಗಳಿಗೆ ಟ್ರೋಫಿ ಪ್ರದಾನ ಮಾಡಿದ್ದಾರೆ. ಟೂರ್ನಿ ಯಶಸ್ವಿಯಾಗಿ ನಡೆದ ಬೆನ್ನಲ್ಲೆ ಸುದೀಪ್ ಅವರು ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಲು ನೆರವಾದವರಿಗೆ ವಿಶೇಷ ಧನ್ಯವಾದಗಳನ್ನು ಹೇಳಿದ್ದಾರೆ.
ಟ್ವೀಟ್ ಮಾಡಿರುವ ಸುದೀಪ್, ‘‘ಕೆಸಿಸಿ ನಾಲ್ಕನೇ ಸೀಸನ್, ಅದ್ಭುತ ಪ್ರದರ್ಶನಗಳಿಂದಾಗಿ ಅತ್ಯುತ್ತಮ ಸೀಸನ್ ಆಗಿ ಹೊರಹೊಮ್ಮಿದೆ. ಹಲವು ನೆನಪುಗಳನ್ನು ಈ ಸೀಸನ್ ಉಳಿಸಿದೆ. ಮೈದಾನದಿಂದ ಹೊರಗಿದ್ದು ನಮಗೆ ಬೆಂಬಲ ನೀಡಿದ ಹಲವರಿಗೆ ಧನ್ಯವಾದಗಳನ್ನು ಹೇಳಲೇ ಬೇಕು. ಎರಡನೇ ಸೀಸನ್ನಿಂದಲೂ ನಮಗೆ ಬೆಂಬಲವಾಗಿ ನಿಂತಿರುವ ಕೆಎಸ್ಸಿಎಗೆ ಧನ್ಯವಾದ ಹೇಳಲೇಬೇಕು. ಎಲ್ಲವನ್ನೂ ಒದಗಿಸಿದ ಕೆಎಸ್ಸಿಎದ ಸಿಬ್ಬಂದಿಗೆ ಥ್ಯಾಂಕ್ಸ್’’ ಎಂದಿದ್ದಾರೆ ಸುದೀಪ್.
ಮುಂದುವರೆದು, ‘‘ಲೈವ್ ಟ್ರೀ ಸಂಸ್ಥೆಯ ಶರತ್ ಹಾಗೂ ತಂಡಕ್ಕೆ ನಮ್ಮ ಧನ್ಯವಾದಗಳು, ನಾವು ಏನು ಯೋಜಿಸಿದ್ದೆವೊ ಅದು ಕಾರ್ಯರೂಪಕ್ಕೆ ಬರುವಂತಾಗಲು ಅವರ ಶ್ರಮ ಪ್ರಮುಖ ಪಾತ್ರ ವಹಿಸಿತು. ನಮಗೆ ಬೇಕಾದ ಅನುಮತಿಗಳು, ಭದ್ರತೆ ಹಾಗೂ ಬೆಂಬಲ ನೀಡಿದ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಧನ್ಯವಾದ. ಕಳೆದ ಮೂರು ವರ್ಷಗಳಿಂದಲೂ ನಮ್ಮ ಜೊತೆಗಿರುವ ಜೀ ಕನ್ನಡದಕ್ಕೆ ವಿಶೇಷ ಧನ್ಯವಾದ. ಅಲ್ಲದೆ ಉದ್ಘಾಟನೆ ಹಾಗೂ ಸಮಾರೋಪದ ಸಮಯದಲ್ಲಿ ಕಾರ್ಯಕ್ರಮಗಳನ್ನು ನೀಡಿದ ನಿಮ್ಮ ಪ್ರತಿಭಾವಂತ ಕಲಾವಿದರ ತಂಡಕ್ಕೂ ಧನ್ಯವಾದ’’ ಎಂದಿದ್ದಾರೆ.
ಇದನ್ನೂ ಓದಿ:ವೀಕೆಂಡ್ ಪಂಚಾಯ್ತಿಗೆ ಕಿಚ್ಚ ಸುದೀಪ್ ಗೈರು? ಕಾರಣವೇನು?
‘‘ನಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸುತ್ತಿದ್ದ ವೈದ್ಯಕೀಯ ತಂಡ. ಆತಿಥ್ಯದ ಜವಾಬ್ದಾರಿ ಹೊತ್ತಿದ್ದ ಸಿಬ್ಬಂದಿ. ಮಾಧ್ಯಮ, ಲೈವ್ ಸ್ಟ್ರೀಮರ್ಗಳು, ಸಾಮಾಜಿಕ ಜಾಲತಾಣ, ಕ್ರೀಡಾ ವೀಕ್ಷಕ ವಿವರಣೆಕಾರರು ಎಲ್ಲರೂ ಅದ್ಭುತವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಅವರೆಲ್ಲರೂ ಧನ್ಯವಾದ. ಪ್ರಚಾರಕ್ಕೆ ಸಹಾಯ ಮಾಡಿದ ಕೆಆರ್ಜಿ ಕನೆಕ್ಟ್ಸ್, ಅದ್ಭುತವಾದ ಊಟ ಒದಗಿಸಿದ ಗೆಳೆಯ ಆದರ್ಶ್ (ಅಟ್ಟೈಡ್) ಗೆ ಧನ್ಯವಾದ’’ ಎಂದಿದ್ದಾರೆ ಸುದೀಪ್.
‘‘ಸೀಸನ್ ಕೊನೆಯಾಗುವವರೆಗೂ ರುಚಿಯಾದ ಕೇಕ್ಗಳನ್ನು ಮಾಡಿ ಕಳುಹಿಸಿದ ಗೀತಕ್ಕ (ಗೀತಾ ಶಿವರಾಜ್ಕುಮಾರ್)ನಿಗೆ ವಿಶೇಷ ಧನ್ಯವಾದ. ಎಲ್ಲ ಮ್ಯಾಚ್ಗಳು ಸುಗಮನವಾಗಿ ನಡೆಯುವಂತೆ ಮಾಡಿದ ಎಲ್ಲ ರೆಫರಿಗಳು, ಅಂಪೈರ್ಗಳು, ಮತ್ತು ಸಕ್ರಿಯವಾಗಿ ಭಾಗವಹಿಸಿದ ಎಲ್ಲ ತಂಡದ ಎಲ್ಲ ಆಟಗಾರರಿಗೂ ಮತ್ತು ತಂಡಗಳೊಂದಿಗೆ ಆಡಿದ ಗೌರವಾನ್ವಿತ ಅಂತರಾಷ್ಟ್ರೀಯ ಕ್ರೀಡಾಪಟುಗಳಿಗೂ ಧನ್ಯವಾದ’’ ಎಂದಿದ್ದಾರೆ.
‘‘ತಂಡಗಳ ನಾಯಕರುಗಳಾಗಿದ್ದ ಶಿವಣ್ಣ, ಗಣೇಶ್, ದುನಿಯಾ ವಿಜಿ, ಧನಂಜಯ್, ಉಪ್ಪಿ ಸರ್ ಅವರುಗಳು ತಮ್ಮ ಸಮಯವನ್ನು ವ್ಯಯಿಸಿ, ಶ್ರಮ ಹಾಕಿ ಕೆಸಿಸಿಯನ್ನು ವಿಶೇಷಗೊಳಿಸಿದ್ದಾರೆ. ಮೈದಾನಕ್ಕೆ ಬಂದ ಎಲ್ಲ ವಿಶೇಷ ಅತಿಥಿಗಳಿಗೆ ಹಾಗೂ ಪಂದ್ಯವನ್ನು ವೀಕ್ಷಿಸಲು ಆಗಮಿಸಿದ, ಬೆಂಬಲಿಸಿದ ಎಲ್ಲ ಕ್ರೀಡೆ ಹಾಗೂ ಸಿನಿಮಾ ಪ್ರೇಮಿಗಳಿಗೂ ವಿಶೇಷ ಧನ್ಯವಾದ’’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:19 pm, Tue, 26 December 23