
ಬಹುನಿರೀಕ್ಷಿತ ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿದೆ. ಜುಲೈ 28ರಂದು ಈ ಚಿತ್ರ ಅದ್ದೂರಿಯಾಗಿ ರಿಲೀಸ್ ಆಗಲಿದೆ. ಚಿತ್ರ ತೆರೆಕಾಣಲು ಇನ್ನು ಕೆಲವೇ ದಿನಗಳ ಬಾಕಿ ಉಳಿದಿರುವಾಗ ಜೋರಾಗಿ ಪ್ರಚಾರ ಮಾಡಲಾಗುತ್ತಿದೆ. ಕಿಚ್ಚ ಸುದೀಪ್ ಅಭಿಮಾನಿಗಳು ಕೂಡ ಈ ಕಾರ್ಯದಲ್ಲಿ ಭಾಗಿ ಆಗುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ವಿಕ್ರಾಂತ್ ರೋಣ’ (Vikrant Rona) ಅಬ್ಬರಿಸಲಿದೆ. ಬಿಗ್ ಬಜೆಟ್ನಲ್ಲಿ ಸಿನಿಮಾ ಸಿದ್ಧವಾಗಿದೆ. ಅದಕ್ಕೆ ತಕ್ಕಂತೆಯೇ ಹೈಪ್ ಸೃಷ್ಟಿ ಆಗಿದೆ. ಕಿಚ್ಚನ ಫೋಟೋ ಮತ್ತು ‘ವಿಕ್ರಾಂತ್ ರೋಣ’ ಸಿನಿಮಾ ಟೈಟಲ್ ಇರುವ ಕಾಫಿ ಮಗ್, ಟಿ-ಶರ್ಟ್, ಜಾಕೆಟ್, ನೋಟ್ ಪ್ಯಾಡ್ ಮುಂತಾದ ವಸ್ತುಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಾಗಿವೆ. ಈ ಬಗ್ಗೆ ಸ್ವತಃ ಸುದೀಪ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
‘ವಿಕ್ರಾಂತ್ ರೋಣ’ ಸಿನಿಮಾ ಬಗ್ಗೆ ಸುದೀಪ್ ಅವರು ಟ್ವಿಟರ್ ಮೂಲಕ ಪ್ರತಿ ದಿನ ಹೊಸ ಹೊಸ ಅಪ್ಡೇಟ್ ನೀಡುತ್ತಿದ್ದಾರೆ. ವಿಶೇಷವಾಗಿ ಪ್ರಿಂಟ್ ಮಾಡಲಾಗಿರುವ ಕಾಫಿ ಮಗ್, ಟಿ-ಶರ್ಟ್, ಜಾಕೆಟ್, ನೋಟ್ ಪ್ಯಾಡ್ ಸೇರಿದಂತೆ ಹಲವು ವಸ್ತುಗಳು ಲಭ್ಯವಿರುವ ಕುರಿತು ಕೂಡ ಅವರು ಟ್ವಿಟರ್ ಮೂಲಕ ತಿಳಿಸಿದ್ದಾರೆ. ತಾವು ಈ ಡ್ರೆಸ್ನಲ್ಲಿ ಅಭಿಮಾನಿಗಳನ್ನು ನೋಡಲು ಬಯಸುತ್ತಿರುವುದಾಗಿ ಸುದೀಪ್ ಪೋಸ್ಟ್ ಮಾಡಿದ್ದಾರೆ. ಈ ವಸ್ತುಗಳು ಎಲ್ಲಿ ಸಿಗುತ್ತದೆ ಎಂಬುದರ ಲಿಂಕ್ ಕೂಡ ಅವರು ಶೇರ್ ಮಾಡಿದ್ದಾರೆ.
‘ವಿಕ್ರಾಂತ್ ರೋಣ’ ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಜಾಕ್ ಮಂಜು ಅವರು ಬಂಡವಾಳ ಹೂಡಿದ್ದಾರೆ. ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್ ಮುಂತಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಬತ್ತಳಿಕೆಯಿಂದ ಬಂದ ಹಾಡುಗಳು ಸೂಪರ್ ಹಿಟ್ ಆಗಿವೆ. ಎಲ್ಲೆಲ್ಲೂ ‘ರಾ..ರಾ.. ರಕ್ಕಮ್ಮ..’ ಹಾಡು ರಾರಾಜಿಸುತ್ತಿದೆ.
ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ, ಹಿಂದಿ ಮುಂತಾದ ಭಾಷೆಗಳಲ್ಲಿ ‘ವಿಕ್ರಾಂತ್ ರೋಣ’ ರಿಲೀಸ್ ಆಗಲಿದೆ. ದೇಶದ ಪ್ರಮುಖ ನಗರಗಳಿಗೆ ತೆರಳಿ ಸುದೀಪ್ ಮತ್ತು ತಂಡದವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಆ ಮೂಲಕ ಪರರಾಜ್ಯದ ಹೆಚ್ಚು ಜನರಿಗೆ ಸಿನಿಮಾವನ್ನು ತಲುಪಿಸಲು ಪ್ರಯತ್ನಿಸಲಾಗುತ್ತಿದೆ. 3ಡಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಸಖತ್ ಪ್ರತಿಕ್ರಿಯೆ ಸಿಗುವ ನಿರೀಕ್ಷೆ ಇದೆ.
Published On - 12:48 pm, Wed, 20 July 22