ಬೆಂಗಳೂರು: ನಾಳೆ ನಡೆಯಲಿರುವ ವಿಕ್ರಾಂತ್ ರೋಣ ಟೀಸರ್ ರಿಲೀಸ್ಗೆ ಸಂಬಂಧಿಸಿ ದುಬೈನಲ್ಲಿರುವ ನಟ ಸುದೀಪ್, ವೀಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಠಿ ನಡೆಸಿದ್ದಾರೆ. ‘ನನ್ನ ವೃತ್ತಿ ಜೀವನದ 25 ವರ್ಷ ಜರ್ನಿಯಲ್ಲಿ ಪಾಲುದಾರರಾಗಿರೋ ಎಲ್ಲರಿಗೂ ಧನ್ಯವಾದಗಳು. ನಾಳೆಯಿಂದ 26 ನೇ ವರ್ಷದ ಜರ್ನಿ ಶುರು ಆಗುತ್ತೆ’ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಂತಸ ಹಂಚಿಕೊಂಡಿದ್ದಾರೆ.
ಇದೇ ವೇಳೆ.. ವಿಕ್ರಾಂತ್ ರೋಣ 11 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇದು ಪ್ಯಾನ್ ಇಂಡಿಯಾ ಚಿತ್ರವಲ್ಲ, ಪ್ಯಾನ್ ವರ್ಲ್ಡ್ ಸಿನಿಮಾ ಎಂದು ಚಿತ್ರತಂಡದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ನಾಳೆ ಭಾನುವಾರ ವಿಕ್ರಾಂತ್ ರೋಣ ಚಿತ್ರದ ಕಟೌಟ್ ಬುರ್ಜ್ ಖಲೀಫಾದ ಮೇಲೆ ಅನಾವರಣ ಆಗಲಿದೆ. ಬುರ್ಜ್ ಖಲೀಫಾದ ಮೇಲೆ 180 ಸೆಕೆಂಡುಗಳ ಟೀಸರ್ ರಿಲೀಸ್ ಆಗಲಿದೆ.
ಬುರ್ಜ್ ಖಲೀಫಾ ಆಯ್ಕೆ ಬಗ್ಗೆ ಸುದೀಪ್ ಹೇಳಿದ್ದೇನು?
ಬೇರೆ ಭಾಷೆಯಲ್ಲಿ, ಬೇರೆ ದೇಶದಲ್ಲಿ ನಮ್ಮ ಸಿನಿಮಾ ರಿಲೀಸ್ ಆಗ್ತಿದೆ. ನಂಬಿಕೆ ಇಟ್ಟು ಸಿನಿಮಾ ಮಾಡಿದ್ದೀವಿ. ಹಲವು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗ್ತಿದೆ. ಫಸ್ಟ್ ಟೈಂ ಇಲ್ಲಿ ಕಟೌಟ್ ನಿಲ್ಲಿಸುವ ಸಂಭ್ರಮ ಮನೆ ಮಾಡಿದೆ. ಇದು ತುಂಬಾನೇ ಸ್ಪೇಷಲ್. ಅದರಲ್ಲೂ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಟೀಸರ್ ರಿಲೀಸ್ ಆಗುತ್ತಿರೋದು ಕೂಡ ಒಂದು ರೀತಿಯ ಸ್ಪೇಷಲ್ ಅನುಭವ. ವಿಕ್ರಾಂತ್ ರೋಣ ಒಂದು ಅಡ್ವೆಂಚರಸ್ ಸಿನಿಮಾ ಎಂದಿದ್ದಾರೆ.
ಸದ್ಯದ ಇಂಡಸ್ಟ್ರಿ ಬಗ್ಗೆ ಸುದೀಪ್ ಮಾತು
ಚಿತ್ರರಂಗದಲ್ಲಿ 25 ವರ್ಷ ಇರ್ತೇವೆಂಬ ನಂಬಿಕೆ ಇರಲಿಲ್ಲ. ಇವತ್ತಿಗೂ ಹೊಸಬರಿಂದ ನಾವು ಕಲಿಯೋದು ತುಂಬಾ ಇದೆ ಎಂದು ದುಬೈನಲ್ಲಿ ಕಿಚ್ಚ ಸುದೀಪ್ ಸುದ್ದಿಗೋಷ್ಠಿ ವೇಳೆ ಹೇಳಿದ್ರು.
ಮೈ ಆಟೋಗ್ರಾಫ್ ಬಗ್ಗೆ ಸುದೀಪ್ ಸಿನಿ ಜರ್ನಿ ಮಾತು
ಕನ್ನಡ ಚಿತ್ರರಂಗಕ್ಕೆ ಬಂದು 25 ವರ್ಷವಾದ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್ ತನ್ನ ಸಿನಿ ಜರ್ನಿಯ ಬಗ್ಗೆ ಕೆಲ ಅನುಭವಗಳನ್ನು ಹಂಚಿಕೊಂಡಿದ್ದಾರೆ. ‘ಮೈ ಆಟೋಗ್ರಾಫ್’ ಸಿನಿಮಾಗೂ ಮುಂಚೆ ನನ್ನ ಸಿನಿಮಾ ಜೀವನ ಕಷ್ಟಕರವಾಗಿತ್ತು. ಆ ಸಿನಿಮಾ ಬಳಿಕ ಹುಮ್ಮಸ್ಸು ಬಂತು. ಆ ಚಿತ್ರ ಮಾಡಲಿಲ್ಲ ಅಂದಿದ್ರೆ ಊಹೆ ಮಾಡೋಕೂ ಕಷ್ಟವಾಗುತ್ತಿದ್ದಂತಹ ಪರಿಸ್ಥಿತಿ ಎದುರಾಗುತ್ತಿತ್ತು!
ಆ ಸಿನಿಮಾ ಮಾಡಲು ನನ್ನ ತಂದೆಯ ಮನೆಯ ಪತ್ರಗಳನ್ನ ಅಡ ಇಟ್ಟಿದ್ದೆ. ಆ ಚಿತ್ರ ಸಕ್ಸಸ್ ಆಗಿಲ್ಲ ಅಂದಿದ್ದರೆ ಜೀವನ ಕಷ್ಟವಾಗ್ತಿತ್ತು. ಸದ್ಯ ಈಗ ಫ್ಯಾಮಿಲಿ ಜೊತೆ ಇರೋದು ಸಂತಸ ತಂದಿದೆ, ಎಲ್ಲರಿಂದ ನನ್ನ ಜರ್ನಿ ತುಂಬಾ ಸುಂದರವಾಗಿದೆ. ಉಪೇಂದ್ರ ಜೊತೆ ಕಬ್ಜ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆ. ಕಬ್ಜ ಸಿನಿಮಾದಲ್ಲಿ ಒಳ್ಳೆ ಪಾತ್ರ ಸಿಕ್ಕಿದ್ದರಿಂದ ಒಪ್ಕೊಂಡಿದ್ದೀನಿ ಎಂದ ಸುದೀಪ್, ಕ್ರಿಕೇಟರ್ ಆಗ್ಲಿಲ್ಲ ಅಂತಾ ಇಂದಿಗೂ ರಿಗ್ರೇಟ್ ಇದೆ ಎಂದು ವಿಷಾದ ಸೂಚಿಸಿದರು.
ಇದ್ದವರ, ಬಿಟ್ಟೋದವರ ನೆನಪುಗಳ ಮೆಲಕು
ರೆಡ್ ಕಾರ್ಪೆಟ್ ಹಾಕಿಯೇ ಜೀವನ ಸಾಗಿಸೋಕಾಗಲ್ಲ. ಕಾರ್ ಇದ್ಮೇಲೆ ಪಂಕ್ಚರ್ ಆಗಲೇ ಬೇಕು. ಪಂಕ್ಚರ್ ಆದ ಟೈರ್ ಚೇಂಜ್ ಮಾಡಲೇಬೇಕು. ನಮ್ಮೊಟ್ಟಿಗೆ ಯಾರಿದ್ದಾರೋ ಅವರ ಜೊತೆ ಸಾಗಬೇಕು. ಕೆಲವರು ನೆನಪು ಬಿಟ್ಟು ಹೋಗ್ತಾರೆ, ಕೆಲವರು ನೆನಪು ಕಿತ್ಕೊಂಡ್ ಹೋಗ್ತಾರೆ ಎಂದೂ ದಾರ್ಶನಿಕರಾಗಿ ಮಾತನಾಡಿದರು.
ಪ್ಯಾನ್ ಇಂಡಿಯಾ ಕಲ್ಪನೆ ಕಲಾವಿದ ಹಾಗೂ ನಿರ್ದೇಶಕನಿಗೆ ಬಿಟ್ಟಿದ್ದು. ಅದು ಅವರವರ ಪ್ಲಾನ್. ಒಂದು ಸಿನಿಮಾ ಪ್ಯಾನ್ ಇಂಡಿಯಾ ಆದ ತಕ್ಷಣ ಉಳಿದದ್ದು ಚಿಕ್ಕ ಸಿನಿಮಾ ಆಗಲ್ಲ. ಫಸ್ಟ್ ಟೈಂ ಫೂಂಕ್ಗೆ ಕರೆದಾಗ ಭಯ ಇತ್ತು ನನಗೆ ಎಂದೂ ಮೆಲುಕು ಹಾಕಿದರು.
Published On - 1:19 pm, Sat, 30 January 21