ಸುದೀಪ್ ಅಳಿಯನ ಸಿನಿಮಾಕ್ಕೆ ಮುಹೂರ್ತ, ಡಾಲಿಗೆ ಥ್ಯಾಂಕ್ಸ್ ಹೇಳಿದ್ದು ಏಕೆ?
Kichcha Sudeep: ನಟ ಕಿಚ್ಚ ಸುದೀಪ್ ಅವರ ಕುಟುಂಬದಿಂದ ಮತ್ತೊಬ್ಬ ನಟ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಸುದೀಪ್ ಅವರ ಅಕ್ಕನ ಪುತ್ರ ಸಂಚಿ ಅವರು ಸಿನಿಮಾ ಒಂದರಲ್ಲಿ ನಟಿಸುತ್ತಿದ್ದು, ಸಿನಿಮಾದ ಮುಹೂರ್ತ ಇಂದು ನಡೆದಿದೆ. ಸಿನಿಮಾಕ್ಕೆ ಸುದೀಪ್ ಅವರು ಸಹ ಬಂಡವಾಳ ಹೂಡಿದ್ದಾರೆ. ಸಿನಿಮಾದ ಬಗ್ಗೆ ಮಾಹಿತಿ ಇಲ್ಲಿದೆ.
ಪ್ಯಾನ್ ಇಂಡಿಯಾ ಹವಾಕ್ಕೂ ಬಹಳ ಮುಂಚೆಯೇ ಸುದೀಪ್ ಪ್ಯಾನ್ ಇಂಡಿಯಾ ಸ್ಟಾರ್. ಇದೀಗ ಈ ಸ್ಟಾರ್ ನಟನ ಕುಟುಂಬದಿಂದ ಮತ್ತೊಬ್ಬ ನಟ ಚಿತ್ರರಂಗಕ್ಕೆ ಹೆಜ್ಜೆ ಇಡುತ್ತಿದ್ದಾರೆ ಅದೂ ನಾಯಕ ನಟನಾಗಿ. ಕಿಚ್ಚ ಸುದೀಪ ಅವರ ಅಕ್ಕನ ಮಗ ಸಂಚಿ ಅವರು ಸಿನಿಮಾದಲ್ಲಿ ನಟಿಸುತ್ತಿದ್ದು, ಅವರ ಮೊದಲ ಸಿನಿಮಾಕ್ಕೆ ಇಂದು (ಜನವರಿ 24) ಮುಹೂರ್ತ ನಡೆದಿದೆ. ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿ ಗಮನ ಸೆಳೆದ ‘ಪೆಪೆ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಕಾಜಲ್ ಕುಂದರ್ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸಂಚಿ ಅವರ ಮೊದಲ ಸಿನಿಮಾದ ಮುಹೂರ್ತ ನಡೆದಿದೆ.
ಅಳಿಯನ ಮೊದಲ ಸಿನಿಮಾಕ್ಕೆ ಸ್ವತಃ ಹಾಜರಿದ್ದು ಶುಭ ಹಾರೈಸಿದರು ಕಿಚ್ಚ ಸುದೀಪ್. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕ್ಯಾಮರಾ ಚಾಲನೆ ಮಾಡಿ ಕಿಚ್ಚನ ಅಳಿಯನ ಸಿನಿಮಾಗೆ ಶುಭ ಕೋರಿದರು. ಸುದೀಪ ಅವರ ಇಡೀ ಕುಟುಂಬ ಕಾರ್ಯಕ್ರಮದಲ್ಲಿ ಹಾಜರಿದ್ದು, ಮನೆ ಮಗನ ಚೊಚ್ಚಲ ಪ್ರಯತ್ನಕ್ಕೆ ಶುಭ ಕೋರಿದರು.
ಅಂದಹಾಗೆ ಸಂಚಿ ಮೊದಲ ಸಿನಿಮಾ ಅನ್ನು ವಿವೇಕ ನಿರ್ದೇಶನ ಮಾಡುತ್ತಿದ್ದಾರೆ. ಇವರಿಗೂ ಸಹ ನಿರ್ದೇಶಕರಾಗಿ ಇದು ಮೊಟ್ಟ ಮೊದಲ ಸಿನಿಮಾ. ಪರ ಭಾಷೆಯ ಕೆಲವು ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ, ಖ್ಯಾತ ನಿರ್ದೇಶಕರ ಬಳಿ ಅಸಿಸ್ಟೆಂಟ್ ಆಗಿ ಕೆಲಸ ಮಾಡಿರುವ ವಿವೇಕ ಅವರು ಇದೇ ಮೊದಲ ಬಾರಿಗೆ ಸ್ವತಂತ್ರ್ಯವಾಗಿ ನಿರ್ದೇಶನ ಮಾಡುತ್ತಿದ್ದಾರೆ. ಸಂಚಿ ಮೊದಲ ಸಿನಿಮಾಗೆ ಕೆಆರ್‌ಜಿ ಮತ್ತು ಸುದೀಪ್ ಅವರ ಸುಪ್ರಿಯಾನ್ವಿ ಬಂಡವಾಳ ಹೂಡುತ್ತಿದೆ. ಅಳಿಯನ ಮೊದಲ ಸಿನಿಮಾಕ್ಕೆ ಸ್ವತಃ ಸುದೀಪ್ ಸಹ ನಿರ್ಮಾಪಕ ಆಗಿದ್ದಾರೆ.
ಇದನ್ನೂ ಓದಿ:ಕಿಚ್ಚ ಸುದೀಪ್ ರಾಜ್ಯ ಪ್ರಶಸ್ತಿ ತಿರಸ್ಕರಿಸಿದ್ದೇಕೆ? ಇದರ ಹಿಂದಿದೆ ನೋವಿನ ಕಥೆ?
ಸಿನಿಮಾದ ಕತೆಯ ಒಂದೆಳೆ ಹಂಚಿಕೊಂಡ ನಿರ್ದೇಶಕ, ‘ಇದು ಮೈಸೂರು ಮೂಲದ ಕಥೆ. 2001 ರಿಂದ 2011ರ ಕಾಲಘಟ್ಟದಲ್ಲಿ ಈ ಕತೆ ನಡೆಯುತ್ತದೆ. ಈ ಅವಧಿಯಲ್ಲಿ ನಡೆದ ಪ್ರಮುಖ ಘಟನೆಗಳು ಈ ಸಿನಿಮಾದಲ್ಲಿದೆ. ಸಂಚಿ ಅವರಿಗೆ ಈ ಕತೆ ಬಹಳ ಇಷ್ಟವಾಯ್ತು. ಕೇಳಿದ ಕೂಡಲೆ ಒಪ್ಪಿಕೊಂಡರು. ಆ ನಂತರ ಸುದೀಪ್ ಅವರಿಗೂ ಕತೆ ಹೇಳಿದೆ. ಅವರಿಗೆ ಮೊದಲ ಬಾರಿ ಕತೆ ಹೇಳಿದ್ದು ಅದ್ಭುತವಾದ ಅನುಭವ’ ಎಂದರು.
ನಾಯಕ ಸಂಚಿ ಮಾತನಾಡಿ, ‘ಸಿನಿಮಾದ ಕತೆ ಅದ್ಭುತವಾಗಿದೆ. ಈ ಕತೆ ನನಗೆ ಸಿಗಲು ಧನಂಜಯ್ ಅವರು ಕಾರಣ. ಈ ಸಿನಿಮಾಗೆ ನನ್ನ ಹೆಸರನ್ನು ಸೂಚಿಸಿದ್ದೇ ಅವರು. ಸರ್ ಅವರಿಗೆ ತುಂಬಾ ಧನ್ಯಾವಾದ ಹೇಳಲೇಬೇಕು. ಬಳಿಕ ಕಾರ್ತಿಕ್ ಮತ್ತು ಯೋಗಿ ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಸಿನಿಮಾ ಮಾಡುತ್ತಿದ್ದಾರೆ, ಆ ನಂಬಿಕೆ ನಾನು ಉಳಿಸಿಕೊಳ್ಳುತ್ತೇನೆ. ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ನಿಂದ ಇದು ಮೊದಲ ಸಿನಿಮಾ’ ಎಂದರು. ಕೆಆರ್‌ಜಿ ನಿರ್ಮಾಣ ಸಂಸ್ಥೆಯ ಕಾರ್ತಿಕ್ ಸಹ ‘ಡಾಲಿ ಅವರಿಂದಲೇ ಈ ಸಿನಿಮಾ ಪ್ರಾರಂಭವಾಗಿದ್ದು’ ಎಂದು ಡಾಲಿಗೆ ಧನ್ಯವಾದ ಹೇಳಿದರು.
ಇದು ಮೈಸೂರು ಮೂಲಕ ಕ್ರೈಂ ಥ್ರಿಲ್ಲರ್. ಸ್ಟೋರಿಯಾಗಿದೆ. ಈ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಸಂಚಿ ಹುಟ್ಟುಹಬ್ಬಕ್ಕೆ ಅಂದರೆ ಫೆಬ್ರವರಿ 5ಕ್ಕೆ ರಿವೀಲ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಸಿನಿಮಾದಲ್ಲಿ ಮಯೂರ್ ಪಟೇಲ್ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ. ವಿಜಯ ರಾಘವೇಂದ್ರ ಅವರ ಅಕ್ಕನ ಮಗ ಜೇಯ್, ಬಿಗ್ ಬಾಸ್ ಖ್ಯಾತಿಯ ಹಂಸ, ಮಾಲಾಶ್ರೀ ಸೇರಿದಂತೆ ದೊಡ್ಡ ತಾರಾಬಳಗವೆ ಇದೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ