ನಟ ಕಿರಣ್ ರಾಜ್ (Kiran Raj) ಅವರು ಹಿರಿತೆರೆಯಲ್ಲಿ ಗೆಲುವು ಪಡೆಯುವ ಸಲುವಾಗಿ ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಅವರು ಹೀರೋ ಆಗಿ ನಟಿಸಿರುವ ‘ರಾನಿ’ ಸಿನಿಮಾದ (Ronny Movie) ಪೋಸ್ಟರ್ ಮತ್ತು ಟೀಸರ್ ಈಗಾಗಲೇ ಅವರ ಅಭಿಮಾನಿಗಳ ಗಮನ ಸೆಳೆದಿದೆ. ಪ್ರತಿ ಅಪ್ಡೇಟ್ ನೀಡುವಾಗಲೂ ಕಿರಣ್ ರಾಜ್ ಅವರು ಸಾಹಸ ಮೆರೆಯುತ್ತಾರೆ ಎಂಬುದು ವಿಶೇಷ. ಇತ್ತೀಚೆಗೆ ಮಹಾ ಶಿವರಾತ್ರಿಯ ಹಬ್ಬದ ದಿನ ‘ರಾನಿ’ ಸಿನಿಮಾದ ‘ಕೋಲೆ ಕೋಲೆ..’ (Kole Kole) ಎಂಬ ಹೊಸ ಹಾಡು ಬಿಡುಗಡೆ ಆಯಿತು. ಜಾನಪದ ಶೈಲಿಯಲ್ಲಿ ಮೂಡಿಬಂದಿರುವ ಈ ಮಾಸ್ ಗೀತೆಯು ಟಿ-ಸಿರೀಸ್ ಯೂಟ್ಯೂಬ್ ಚಾನಲ್ ಮೂಲಕ ವೀಕ್ಷಣೆಗೆ ಲಭ್ಯವಾಗಿದೆ. ಯುವ ಪ್ರೇಕ್ಷಕರಿಗೆ ಹೆಚ್ಚು ಇಷ್ಟ ಆಗಿರುವ ‘ಕೋಲೆ ಕೋಲೆ..’ ಹಾಡು 1 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಕದ್ರಿ ಮಣಿಕಾಂತ್ ಅವರ ಸಂಗೀತ, ಪ್ರಮೋದ್ ಮರವಂತೆ ಅವರ ಸಾಹಿತ್ಯದಲ್ಲಿ ಹಾಡು ಮೂಡಿಬಂದಿದೆ.
‘ರಾನಿ’ ಸಿನಿಮಾದ ಬಗ್ಗೆ ಪ್ರಚಾರ ಮಾಡಲು ನಟ ಕಿರಣ್ ರಾಜ್ ಅವರು ಭಿನ್ನ ವಿಭಿನ್ನ ಸಾಹಸಗಳನ್ನು ಪ್ರಯತ್ನಿಸುತ್ತಿದ್ದಾರೆ. ಈ ವಿಚಾರದಲ್ಲಿ ಅವರು ಆರಂಭದಿಂದಲೂ ಆಸಕ್ತಿ ತೋರಿಸುತ್ತಿದ್ದಾರೆ. ಈ ವರ್ಷದ ಶಿವರಾತ್ರಿ ಪ್ರಯುಕ್ತ ಕಿರಣ್ ರಾಜ್ ಅವರು ಪ್ರಪಂಚದ ಅತೀ ಎತ್ತರದಲ್ಲಿರುವ ಶಿವನ ಮಂದಿರವಾದ ಉತ್ತರಕಾಂಡದ ತುಂಗ್ ನಾಥ್ ದೇವಾಲಯಕ್ಕೆ ತೆರಳಿ ಅಭಿಮಾನಿಗಳಿಗೆ ಶುಭಕೋರಿದ್ದಾರೆ.
ಇದನ್ನೂ ಓದಿ: ಕಿರಣ್ ರಾಜ್ ಹೊಸ ಸಿನಿಮಾ ‘ಮೇಘಾ’; ಟೀಸರ್ ಬಿಡುಗಡೆ ಮಾಡಿದ ನಾಗೇಂದ್ರ ಪ್ರಸಾದ್
ಯಾವಾಗಲೂ ಒಂದಲ್ಲಾ ಒಂದು ಸಾಹಸದಲ್ಲಿ ತೊಡಗುವ ಕಿರಣ್ ರಾಜ್ ಅವರು ಈಗಾಗಲೇ ‘ರಾನಿ’ ಸಿನಿಮಾದ ಸಲುವಾಗಿ ಸ್ಕೈಡೈವಿಂಗ್ ಮತ್ತು ಪ್ಯಾರಾಗ್ಲೈಡಿಂಗ್ ಮಾಡಿದ್ದು ಸಖತ್ ಸುದ್ದಿ ಆಗಿತ್ತು. ಆ ಬಗ್ಗೆ ಅವರು ಮಾತನಾಡಿದ್ದಾರೆ. ‘ನಾನು ನಿರ್ದೇಶಕರ ನಟ ಆಗಬೇಕು. ಡೈರೆಕ್ಟರ್ ಬರೆಯುವ ಪಾತ್ರಕ್ಕೆ ನ್ಯಾಯ ನೀಡುವುದು ಎಲ್ಲ ಕಲಾವಿದರ ಕರ್ತವ್ಯ. ಹಾಗಾಗಿ ನಾನು ಯಾವಾಗಲೂ ಕಲಿಯುತ್ತಿರುತ್ತೇನೆ. ರಾನಿ ಚಿತ್ರವನ್ನು ಫ್ಯಾಮಿಲಿ ಆ್ಯಕ್ಷನ್ ಸಿನಿಮಾ ಎಂದರೆ ತಪ್ಪಾಗುವುದಿಲ್ಲ. ಕಾಮಿಡಿ, ಆ್ಯಕ್ಷನ್, ಲವ್, ಫ್ಯಾಮಿಲಿ ಡ್ರಾಮಾ ಮುಂತಾದ ಅಂಶಗಳು ಒಂದೇ ಚಿತ್ರದಲ್ಲಿ ಸಿಕ್ಕಿರುವುದು ನನ್ನ ಅದೃಷ್ಟ’ ಎಂದು ಕಿರಣ್ ರಾಜ್ ಹೇಳಿದ್ದಾರೆ.
ಸಚಿನ್ ಬಸ್ರೂರ್ ಅವರ ಹಿನ್ನೆಲೆ ಸಂಗೀತ, ರಾಘವೇಂದ್ರ ಬಿ. ಕೋಲಾರ ಅವರ ಛಾಯಾಗ್ರಾಹಣ, ಉಮೇಶ ಆರ್.ಬಿ. ಅವರ ಸಂಕಲನ, ಸತೀಶ್ ಅವರ ಕಲಾ ನಿರ್ದೇಶನ ‘ರಾನಿ’ ಚಿತ್ರಕ್ಕಿದೆ. ಉಮೇಶ ಹೆಗ್ಡೆ ಮತ್ತು ಚಂದ್ರಕಾಂತ್ ಪೂಜಾರಿ ಅವರು ‘ಸ್ಟಾರ್ ಕ್ರಿಯೇಷನ್’ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ ಕಿರಣ್ ರಾಜ್ ಜೊತೆ ಸಮಿಕ್ಷಾ, ಅಪೂರ್ವಾ ಮತ್ತು ರಾಧ್ಯ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ರವಿ ಶಂಕರ್, ಗಿರೀಶ್ ಹೆಗ್ಡೆ, ಮೈಕೋ ನಾಗರಾಜ್, ಸೂರ್ಯ ಕುಂದಾಪುರ, ಧರ್ಮೇಂದ್ರ ಆರಸ್, ಧರ್ಮಣ್ಣ ಕಡೂರ್, ಪ್ರಥ್ವಿ ರಾಜ್, ಉಗ್ರಂ ಮಂಜು, ಅರ್ಜುನ್ ಪಾಳೇಗಾರ, ಯಶ್ ಶೆಟ್ಟಿ, ಅನಿಲ್ ಯಾದವ್, ಶ್ರೀಧರ್, ಚೇತನ್ ದುರ್ಗ, ಮಠ ಗುರುಪ್ರಸಾದ್, ಸುಜಯ್ ಶಾಸ್ತ್ರೀ ಮಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.