ಕೋಮಲ್‌ ಹೊಸ ಸಿನಿಮಾ ‘ತೆನಾಲಿ DA LLB’; ಮೊದಲ ಬಾರಿ ಲಾಯರ್ ಪಾತ್ರ

ನಿಜ ಜೀವನದಲ್ಲಿ ಎಲ್​ಎಲ್​ಬಿ ಓದಿರುವ ಕೋಮಲ್ ಅವರು ಸಿನಿಮಾದಲ್ಲೂ ಲಾಯರ್ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾಗೆ ‘ತೆನಾಲಿ ಡಿಎ ಎಲ್‌ಎಲ್‌ಬಿ’ ಎಂದು ಶೀರ್ಷಿಕೆ ಇಡಲಾಗಿದೆ. ಪೋಸ್ಟರ್ ಬಿಡುಗಡೆ ಆಗಿದೆ. ‘ಮರೀಚಿ’ ಸಿನಿಮಾ ಖ್ಯಾತಿಯ ನಿರ್ದೇಶಕ ಸಿದ್ದ್ರುವ್‌ ಸಿದ್ದು ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ.

ಕೋಮಲ್‌ ಹೊಸ ಸಿನಿಮಾ ‘ತೆನಾಲಿ DA LLB’; ಮೊದಲ ಬಾರಿ ಲಾಯರ್ ಪಾತ್ರ
Komal Kumar

Updated on: Jan 20, 2026 | 6:38 PM

ಕಾಮಿಡಿ ಸಿನಿಮಾಗಳಿಂದ ಹೆಸರಾದ ನಟ ಕೋಮಲ್ ಕುಮಾರ್ (Komal Kumar) ಅವರು ಹೊಸ ಕಥೆ ಮೂಲಕ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗುತ್ತಿದ್ದಾರೆ. ಕಳೆದ ವರ್ಷ ಅವರು ನಟಿಸಿದ ‘ಕೋಣ’ ಸಿನಿಮಾ ಬಿಡುಗಡೆ ಆಗಿತ್ತು. ಈಗ ‘ತೆನಾಲಿ DA LLB’ ಸಿನಿಮಾದ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಸಿನಿಮಾಗಳ ಆಯ್ಕೆಯಲ್ಲಿ ಚ್ಯೂಸಿ ಆಗಿರುವ ಕೋಮಲ್‌ ಅವರು ಬಂದ ಸಿನಿಮಾಗಳನ್ನೆಲ್ಲ ಒಪ್ಪಿಕೊಳ್ಳಲ್ಲ. ಸಾಕಷ್ಟು ಕಥೆಗಳನ್ನು ಕೇಳಿ ವಿಭಿನ್ನ ಎನಿಸುವ ಕಥೆಗೆ ಮಾತ್ರ ಸಹಿ ಮಾಡುತ್ತಿದ್ದಾರೆ. ಈಗ ಅವರಿಗೆ ‘ತೆನಾಲಿ ಡಿಎ ಎಲ್​ಎಲ್​ಬಿ’ (Tenali DA LLB) ಸಿನಿಮಾದ ಕಥೆ ಇಷ್ಟ ಆಗಿದೆ.

ಶೀರ್ಷಿಕೆಯೇ ಸೂಚಿಸುವಂತೆ ‘ತೆನಾಲಿ DA LLB’ ಸಿನಿಮಾದಲ್ಲಿ ಕೋಮಲ್ ಕುಮಾರ್ ಅವರು ಲಾಯರ್ ಪಾತ್ರ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಈ ಪೋಸ್ಟರ್​​ನಲ್ಲಿ ಕೋಮಲ್ ಅವರ ಪಾತ್ರದ ಗೆಟಪ್ ಕಾಣಿಸಿದೆ. ಕಪ್ಪು ಕೋಟು ಧರಿಸಿ, ಲಾಯರ್ ಗೆಟಪ್​​ನಲ್ಲಿ ಕೋಮಲ್ ಅವರು ಪೋಸ್ ನೀಡಿದ್ದಾರೆ.

‘ತೆನಾಲಿ ಡಿಎ ಎಲ್‌ಎಲ್‌ಬಿ’ ಸಿನಿಮಾವನ್ನು ಸಿದ್ದ್ರುವ್‌ ಸಿದ್ದು ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ವಿಜಯ್ ರಾಘವೇಂದ್ರ ಅಭಿನಯದ ‘ಮರೀಚಿ’ ಸಿನಿಮಾಗೆ ಸಿದ್ದ್ರುವ್‌ ಸಿದ್ದು ಆ್ಯಕ್ಷನ್-ಕಟ್ ಹೇಳಿದ್ದರು. ವಿಮರ್ಶೆಯ ದೃಷ್ಟಿಯಿಂದ ಆ ಸಿನಿಮಾ ಗಮನ ಸೆಳೆದಿತ್ತು. ‘ಮರೀಚಿ’ ಬಳಿಕ ಸಿದ್ದ್ರುವ್‌ ಸಿದ್ದು ಅವರು ಕೋಮಲ್‌ ಅವರಿಗಾಗಿ ವಿಭಿನ್ನವಾದ ಕಥೆ ಬರೆದುಕೊಂಡಿದ್ದಾರೆ. ಇದು ಈಗಿನ ಕಾಲಘಟ್ಟಕ್ಕೆ ಸರಿಹೊಂದುವ ಕಥೆ ಎಂದು ಚಿತ್ರತಂಡ ಹೇಳಿದೆ.

ಸದ್ಯಕ್ಕೆ ಪೋಸ್ಟರ್‌ ಬಿಡುಗಡೆ ಮಾಡಿರೋ ‘ತೆನಾಲಿ ಡಿಎ ಎಲ್‌ಎಲ್‌ಬಿ’ ಚಿತ್ರತಂಡ ಮೇ ತಿಂಗಳಲ್ಲಿ ಶೂಟಿಂಗ್ ಆರಂಭಿಸಲಿದೆ. ವಿಶೇಷ ಏನೆಂದರೆ, ಇದೇ ಮೊದಲ ಬಾರಿಗೆ ಲಾಯರ್‌ ಆಗಿ ನಟನೆ ಮಾಡುತ್ತಿರುವ ಕೋಮಲ್‌ ಕುಮಾರ್ ಅವರು ನಿಜ ಜೀವನದಲ್ಲಿಯೂ ಎಲ್​ಎಲ್​ಬಿ ಓದಿದ್ದಾರೆ. ಈಗ ತೆರೆ ಮೇಲೆ ಲಾಯರ್‌ ಆಗಿ ಮಿಂಚಲು ಅವರು ರೆಡಿಯಾಗಿದ್ದಾರೆ.

ಇದನ್ನೂ ಓದಿ: ತುಳು ಕಲಿಯಲು ಪ್ರಯತ್ನಿಸುತ್ತಿರುವ ನಟ ಕೋಮಲ್

ಸಿದ್ದ್ರುವ್‌ ಸಿದ್ದು ಅವರು ‘ತೆನಾಲಿ ಡಿಎ ಎಲ್‌ಎಲ್‌ಬಿ’ ಸಿನಿಮಾಗೆ ನಿರ್ದೇಶನ ಮಾಡುವುದರ ಜೊತೆಗೆ ಕಥೆ, ಚಿತ್ರಕಥೆಯನ್ನೂ ಬರೆದಿದ್ದಾರೆ. ಸಿದ್ದ್ರುವ್‌ ಸಿದ್ದು, ಸಂತೋಷ್‌ ಮಾಯಪ್ಪ, ರೇಣುಕಾ ಪ್ರಸಾದ್‌, ಪ್ರದೀಪ್‌ ಕುಮಾರ್‌ ಮಹಾಲಿಂಗಯ್ಯ ಅವರು ಬಂಡವಾಳ ಹೂಡುತ್ತಿದ್ದಾರೆ. ರಿತ್ವಿಕ್‌ ಮುರಳಿಧರ್ ಅವರ ಸಂಗೀತ ನಿರ್ದೇಶನ, ಉದಯ್‌ ಲೀಲಾ ಅವರ ಛಾಯಾಗ್ರಹಣ ಈ ಸಿನಿಮಾಗೆ ಇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.