ಇಂದು ಕನ್ನಡ ಚಿತ್ರಪ್ರೇಮಿಗಳಿಗೆ ಸಂಭ್ರಮದ ದಿನ. ಆಯುಧ ಪೂಜೆಯ ದಿನದಂದು ಕನ್ನಡದ ಎರಡು ಬಿಗ್ ಬಜೆಟ್ ಚಿತ್ರಗಳಾದ ‘ಕೋಟಿಗೊಬ್ಬ 3’ ಹಾಗೂ ‘ಸಲಗ’ ಚಿತ್ರಗಳು ಬಿಡುಗಡೆಯಾಗುವುದಾಗಿ ಘೋಷಿಸಿದ್ದವು. ಬಹು ತಾರಾಗಣದ ಈ ಚಿತ್ರಗಳು ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದವು. ಕಿಚ್ಚ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಹಾಗೂ ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ‘ಸಲಗ’ ಚಿತ್ರಗಳನ್ನು ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಲು ಸಿದ್ಧತೆಯನ್ನೂ ನಡೆಸಿದ್ದರು. ಆದರೆ ಈ ಪೈಕಿ ‘ಸಲಗ’ ಮಾತ್ರ ಬಿಡುಗಡೆಯಾಗಿದ್ದು, ‘ಕೋಟಿಗೊಬ್ಬ 3’ ಅನಿವಾರ್ಯ ಕಾರಣದಿಂದ ನಾಳೆ ಬಿಡುಗಡೆಯಾಗಲಿದೆ.
ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಚಿತ್ರಕ್ಕೆ ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದರು. ಆದರೆ ರಾಜ್ಯದ ಎಲ್ಲೆಡೆ ಏರ್ಪಡಿಸಿದ್ದ ಫ್ಯಾನ್ಸ್ ಶೋಗಳು ಏಕಾಏಕಿ ರದ್ದಾಗಿದ್ದವು. ಬೆಳಗ್ಗೆ ಚಿತ್ರಮಂದಿರಕ್ಕೆ ಬಂದಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿ, ನಿರ್ಮಾಪಕ ಹಾಗೂ ವಿತರಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಮಾಹಿತಿ ನೀಡಿದ್ದು, ನಾಳೆ (ಶುಕ್ರವಾರ) ಚಿತ್ರ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಬಿಗ್ ಸ್ಕ್ರೀನ್ನಲ್ಲಿ ಕಿಚ್ಚನನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದವರಿಗೆ ನಿರಾಸೆಯಾಗಿದೆ.
ಇತ್ತ ದುನಿಯಾ ವಿಜಯ್ ನಟನೆಯ ಸಲಗ ಮೊದಲ ಶೋ ಹೌಸ್ಫುಲ್ ಆಗಿದ್ದು, ಚಿತ್ರ ನೋಡಿ ಹೊರಬಂದ ಅಭಿಮಾನಿಗಳು ಧನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಬಿಡುಗಡೆಯ ಕುರಿತ ಅಪ್ಡೇಟ್ಸ್ಗಳು ಇಲ್ಲಿ ಲಭ್ಯವಿದೆ.
ಶಿವಮೊಗ್ಗ: ನಗರದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳು ಮಹಾವೀರ ವೃತ್ತದ ಬಳಿ ಸಂಭ್ರಮಾಚರಣೆ ನಡೆಸಿದ್ದಾರೆ. ಚಿತ್ರದ ಪ್ರದರ್ಶನ ರದ್ದಾಗಿ ನಾಳೆಗೆ ಮುಂದೂಡಲಾಗಿದ್ದರೂ ಕೂಡ, ಫ್ಯಾನ್ಸ್ ಸಂಭ್ರಮ ನಿಂತಿಲ್ಲ. ಕಿಚ್ಚನ ಅಭಿಮಾನಿಗಳು 400 ಅಡಿ ಅಗಲದ ಸುದೀಪ್ ಫ್ಲೆಕ್ಸ್ ಗೆ ಬೂದು ಕುಂಬಳಕಾಯಿ ಕರ್ಪೂರ ಬೆಳಗಿ ಪೂಜೆ ಸಲ್ಲಿಸಿದ್ದು, 10 ಕ್ಕೂ ಹೆಚ್ಚು ಕುಂಬಳಕಾಯಿ ಒಡೆದಿದ್ದಾರೆ. ಪಟಾಕಿ ಸಿಡಿಸಿ, ಸುದೀಪ್ ಬಾವುಟ ಕೈಯಲ್ಲಿ ಹಿಡಿದು ಫ್ಯಾನ್ಸ್ ಕುಣಿದು ಕುಪ್ಪಳಿಸಿದ್ದಾರೆ.
ಶಿವಮೊಗ್ಗ: ಅನಿಲ್ ಹಾಗೂ ಉದಯ್ ಭಾವಚಿತ್ರಕ್ಕೆ ದುನಿಯಾ ವಿಜಯ್ ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ದಾವಣಗೆರೆ ದುನಿಯಾ ವಿಜಯ್ ಅಭಿಮಾನಿಗಳಿಂದ ಶ್ರದ್ಧಾಂಜಲಿ ಸಲ್ಲಿಸಲಾಗಿದ್ದು, ನಟರ ಭಾವಚಿತ್ರಕ್ಕೆ ಹಾರ ಹಾಕಿ ಶ್ರದ್ಧಾಂಜಲಿ ಆರ್ಪಿಸಲಾಗಿದೆ. ಸಲಗ ಚಿತ್ರದಲ್ಲಿ ಇವರಿಬ್ಬರು ಇರಬೇಕಿತ್ತು ಎಂದು ಅಭಿಮಾನಿಗಳು ನೋವು ತೋಡಿಕೊಂಡಿದ್ದಾರೆ. ಅನಿಲ್ ಹಾಗೂ ಉದಯ್ ‘ಮಾಸ್ತಿಗುಡಿ’ ಸಿನಿಮಾದ ದುರಂತದಲ್ಲಿ ಸಾವನ್ನಪ್ಪಿದ್ದರು.
‘ಕೋಟಿಗೊಬ್ಬ 3’ ಚಿತ್ರದ ಮೊದಲ ದಿನದ ಪ್ರದರ್ಶನ ರದ್ದಾದ ಬೆನ್ನಲ್ಲೇ ನಿರ್ಮಾಪಕರ ಬೆನ್ನಿಗೆ ಸುದೀಪ್ ನಿಂತಿದ್ದಾರೆ. ಸೂರಪ್ಪ ಬಾಬು ಅವರಿಗೆ ಧೈರ್ಯ ತುಂಬಿರುವ ಕಿಚ್ಚ, ಯಾರಿಂದ ಈ ತೊಂದರೆ ಆಗಿದೆ ಎನ್ನುವುದು ತಿಳಿದಿದೆ ಎಂದಿದ್ದಾರೆ. ಅವರಿಗೆ ಕಾಲವೇ ಉತ್ತರ ಕೊಡಲಿದೆ ಎಂದೂ ಅವರು ತಿಳಿಸಿದ್ದಾರೆ. ನಾಳೆಯಿಂದ ಬಿಡುಗಡೆ ಆಗಲಿರುವ ಚಿತ್ರವು ಭರ್ಜರಿ ಪ್ರದರ್ಶನ ಕಾಣಲಿದೆ ಎಂದೂ ಅವರು ಆಶಾಭಾವ ವ್ಯಕ್ತಪಡಿಸಿದ್ದಾರೆ.
ಯಾದಗಿರಿ: ಇಂದು ಕೋಟಿಗೊಬ್ಬ 3 ಚಿತ್ರ ಪ್ರದರ್ಶನ ರದ್ದಾದ ಹಿನ್ನೆಲೆಯಲ್ಲಿ ಶಹಾಪುರದ ಜಯಶ್ರೀ ಚಿತ್ರಮಂದಿರದ ಬಳಿ ಕಿಚ್ಚ ಸುದೀಪ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ಧಾರೆ.
ಹುಬ್ಬಳ್ಳಿಯಲ್ಲೂ ಕಿಚ್ಚ ಸುದೀಪ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಬೆಳಗ್ಗೆಯೇ ಬಂದು ಟಿಕೆಟ್ ಪಡೆದಿದ್ವಿ ಎಂದು ಅಲವತ್ತುಕೊಂಡಿದ್ದಾರೆ. ಪೊಲೀಸರ ಮಧ್ಯೆ ಪ್ರವೇಶದಿಂದ ಪರಸ್ಥಿತಿ ತಿಳಿಯಾಗಿದ್ದು, ನಾಳೆ ಈಗಾಗಲೇ ಟಿಕೆಟ್ ಪಡೆದವರಿಗೆ ಅವಕಾಶ ನೀಡುವುದಾಗಿ ಚಿತ್ರಮಂದಿರ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ.
ಬೆಳಗಾವಿ: ಕೋಟಿಗೊಬ್ಬ 3 ಚಿತ್ರ ಪ್ರದರ್ಶನ ರದ್ದಾದ ಹಿನ್ನೆಲೆಯಲ್ಲಿ ಅಭಿಮಾನಿಗಳನ್ನ ಪ್ರಚೋದಿಸುತ್ತಿದ್ದ ಯುವಕನಿಗೆ ಸಿಪಿಐ ಕಪಾಳಮೋಕ್ಷ ಮಾಡಿದ್ಧಾರೆ. ತಾಂತ್ರಿಕ ಸಮಸ್ಯೆ ಬಗ್ಗೆ ತಿಳಿಹೇಳಿದರೂ ಕೇಳದೇ ಅಭಿಮಾನಿಗಳನ್ನ ಕೆಲವರು ಪ್ರಚೋದಿಸುತ್ತಿದ್ದರು. ನಾಳೆ ಕೋಟಿಗೊಬ್ಬ 3 ರಿಲೀಸ್ ಆಗುತ್ತೆ ಎಂದು ಮೈಕ್‌ನಲ್ಲಿ ಅನೌನ್ಸ್ ಮಾಡುತ್ತಿರುವಾಗ, ಅದಕ್ಕೆ ಆಕ್ರೋಶ ವ್ಯಕ್ತಪಡಿಸಿ ಅಭಿಮಾನಿಗಳನ್ನು ಪಾನಮತ್ತ ಯುವಕನೊಬ್ಬ ಪ್ರಚೋದಿಸಿದಾಗ, ಸಿಪಿಐ ಕಪಾಳಮೋಕ್ಷ ಮಾಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಅಭಿಮಾನಿಗಳ ಗುಂಪನ್ನು ಪೊಲೀಸರು ಚದುರಿಸಿದ್ದಾರೆ. ಚಿತ್ರಮಂದಿರದಲ್ಲಿ ಟಿಕೆಟ್ ವಾಪಸ್ ನೀಡಿ ಹಣ ಪಡೆದು ಅಭಿಮಾನಿಗಳು ಮರಳುತ್ತಿದ್ದಾರೆ.
ವಿಜಯಪುರ: ‘ಕೋಟಿಗೊಬ್ಬ 3’ ಚಿತ್ರದ ಪ್ರದರ್ಶನ ರದ್ದಾಗಿರುವುದಕ್ಕೆ ವಿಜಯಪುರದ ಡ್ರೀಂಲ್ಯಾಂಡ್ ಥಿಯೇಟರ್ ಬಳಿ ಅಭಿಮಾನಿಗಳು ದಾಂಧಲೆ ನಡೆಸಿದ್ದಾರೆ. ಚಿತ್ರಮಂದಿರದ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಥಿಯೇಟರ್ ಬಾಗಿಲು ಮುರಿಯಲು ಯತ್ನಿಸಲಾಗಿದೆ. ಥಿಯೇಟರ್ ಎದುರಿದ್ದ ಲೈಟ್ಗಳನ್ನು ಒಡೆದು ಹಾಕಲಾಗಿದೆ. ಬೆಳಗ್ಗೆಯಿಂದ ಕಾದು ಕುಳಿತಿದ್ದ ಅಭಿಮಾನಿಗಳು, ಪ್ರದರ್ಶನ ರದ್ದಾದ ನಂತರ ತಾಳ್ಮೆ ಕಳೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ.
‘ಕೋಟಿಗೊಬ್ಬ 3’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಬೇಕಿತ್ತು. ಆದರೆ ಅನಿವಾರ್ಯ ಕಾರಣದಿಂದ ಚಿತ್ರ ಬಿಡುಗಡೆಯಾಗುತ್ತಿಲ್ಲ. ಈ ಕುರಿತು ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದು, ನಾಳೆಯಿಂದ(ಶುಕ್ರವಾರ) ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ವಿತರಕರ ಷಡ್ಯಂತ್ರದಿಂದ ಇಂದು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ನಾಳೆ ಮುಂಜಾನೆ 6 ಗಂಟೆಯಿಂದಲೇ ರಾಜ್ಯಾದ್ಯಂತ ಶೋ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ನಟ ಸುದೀಪ್ ಅಭಿಮಾನಿಗಳಲ್ಲಿ ಸೂರಪ್ಪ ಬಾಬು ಮನವಿ ಮಾಡಿಕೊಂಡಿದ್ದಾರೆ ಎನ್ನಲಾದ, ‘ದಯವಿಟ್ಟು ತಾಳ್ಮೆಯಿಂದ ಇರಿ, ನಿಮ್ಮ ಕಾಲು ಹಿಡಿದುಕೊಳ್ಳುವೆ. 4 ಕೋಟಿ ರೂಪಾಯಿ ಮೋಸವಾಗಿದೆ’ ಎಂಬ ಆಡಿಯೋ ವೈರಲ್ ಆಗಿದೆ.
ಕೋಟಿಗೊಬ್ಬ 3 ಚಿತ್ರ ಬಿಡುಗಡೆಯಾಗದ ಹಿನ್ನಲೆಯಲ್ಲಿ ಸುದೀಪ್ ಪತ್ರ ಬರೆದಿದ್ದು, ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ತಾಳ್ಮೆ ಕಳೆದುಕೊಳ್ಳದಂತೆ ಅಭಿಮಾನಿಗಳಲ್ಲಿ ಅವರು ಮನವಿ ಮಾಡಿದ್ದು, ಚಿತ್ರಮಂದಿರದ ಆವರಣಕ್ಕೆ ಧಕ್ಕೆ ತರದಂತೆ ಕೇಳಿಕೊಂಡಿದ್ದಾರೆ. ನಿಗಾವಹಿಸಬೇಕಾದವರ ನಿರ್ಲಕ್ಷ್ಯ ದಿಂದ ಅವ್ಯವಸ್ಥೆಯಾಗಿದ್ದು, ಇದಕ್ಕೆ ಕ್ಷಮೆಯಾಚಿಸುತ್ತೇನೆ. ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುವುದಾಗಿ ಅವರು ತಿಳಿಸಿದ್ದಾರೆ.
A note to all my friends at the theaters . pic.twitter.com/UY8Nst9WjL
— Kichcha Sudeepa (@KicchaSudeep) October 14, 2021
ಕೋಲಾರದಲ್ಲಿಯೂ ಕಿಚ್ಚ ಸುದೀಪ್ ಅಭಿಮಾನಿಗಳು ಕಾಯುತ್ತಿದ್ದು, 12 ಗಂಟೆಗೆ ಚಿತ್ರ ಆರಂಭವಾಗಬಹುದು ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ನಗರದ ನಾರಾಯಣಿ ಚಿತ್ರಮಂದಿರದಲ್ಲಿ ಅಭಿಮಾನಿಗಳು ಮುಂಜಾನೆಯಿಂದ ಚಿತ್ರದ ಬಿಡುಗಡೆಗೆ ಸಿದ್ಧತೆ ನಡೆಸಿದ್ದಾರೆ.
ಕೋಟಿಗೊಬ್ಬ 3 ಸಿನಿಮಾ ಪ್ರದರ್ಶನ ರದ್ದಾದ ನಿರಾಸೆಯಿದ್ದರೂ ಬಾಗಲಕೋಟೆಯಲ್ಲಿ ಫ್ಯಾನ್ಸ್ ಅಭಿಮಾನ ಪ್ರದರ್ಶಿಸಿದ್ದಾರೆ. ವಾಸವಿ ಚಿತ್ರಮಂದಿರದ ಬಳಿ ಜಮಾಯಿಸಿದ ಅಭಿಮಾನಿಗಳು, ಕಿಚ್ಚ ಕಟೌಟ್ಗೆ ಬೃಹತ್ ಹಾರ, ಕ್ಷೀರಾಭಿಷೇಕ ಮಾಡಿ, ಡೊಳ್ಳು ಬಾರಿಸುತ್ತಾ ಘೋಷಣೆ ಹಾಕಿ ಅಭಿಮಾನ ಮೆರೆದಿದ್ದಾರೆ. ಎರಡನೇ ಪ್ರದರ್ಶನವಾದರೂ ಆರಂಭವಾಗಬಹುದು ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.
ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರವು ಬಳ್ಳಾರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲೂ ಆರಂಭವಾಗಿಲ್ಲ. ಬಹಳ ದಿನಗಳಿಂದ ಚಿತ್ರಕ್ಕಾಗಿ ಕಾದು, ಇಂದು ಮುಂಜಾನೆಯಿಂದ ಟಿಕೆಟ್ ಖರೀದಿಸಿ, ಚಿತ್ರಮಂದಿರಕ್ಕೆ ಬಂದ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ಬೇಸರ ಹೊರಹಾಕಿದ್ದಾರೆ. ಕಲಬುರಗಿ ನಗರದ ಸಂಗಮ ಚಿತ್ರಮಂದಿರದಲ್ಲಿ ಹಾಗೂ ಬಳ್ಳಾರಿಯ ರಾಘವೇಂದ್ರ ಚಿತ್ರಮಂದಿರದಲ್ಲಿ ಕೋಟಿಗೊಬ್ಬ 3 ಬಿಡುಗಡೆಯಾಗಲಿದೆ.
‘ಇನ್ನು ಅರ್ಧ ಗಂಟೆಯಲ್ಲಿ ಕೋಟಿಗೊಬ್ಬ 3 ಶೋ ಆರಂಭವಾಗಲಿದೆ’ ಎಂದು ಟಿವಿ9ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ನೀಡಲಾಗಿದೆ. ತಾಂತ್ರಿಕ ದೋಷದಿಂದ ಸಿನಿಮಾ ತಡವಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಇಂದು ಮುಂಜಾನೆ ಶೋ ಕ್ಯಾನ್ಸಲ್ ಆಗಿದ್ದಕ್ಕೆ ನಿರ್ಮಾಪಕ ಸೂರಪ್ಪ ಬಾಬು ಸ್ಪಷ್ಟನೆ ನೀಡಿ, 10ಕ್ಕೆ ಶೋ ಆರಂಭವಾಗುತ್ತದೆ ಎಂದಿದ್ದರು. ಆದರೆ ಪ್ರದರ್ಶನ ಆರಂಭವಾಗಿರಲಿಲ್ಲ. ಪ್ರಸ್ತುತ ಚಿತ್ರತಂಡ ಮಾಹಿತಿ ನೀಡಿದ್ದು, ಅಭಿಮಾನಿಗಳು ಬಿಡುಗಡೆಗೆ ಕಾಯುತ್ತಿದ್ಧಾರೆ.
ಚಿತ್ರದುರ್ಗದ ವೆಂಕಟೇಶ್ವರ ಥಿಯೇಟರ್ ಬಳಿ ಇಂದು ಮುಂಜಾನೆಯಿಂದ ‘ಕೋಟಿಗೊಬ್ಬ 3’ ಚಿತ್ರವನ್ನು ನೋಡಲು ಕಾದಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರಿನ ಗಾಯಿತ್ರಿ ಚಿತ್ರಮಂದಿರದಲ್ಲಿ ಕೋಟಿಗೊಬ್ಬ 3 ರಿಲೀಸ್ ಆಗಿಲ್ಲ. ಬೆಳಿಗ್ಗೆಯಿಂದಲೂ ಅಭಿಮಾನಿಗಳು ಕಾಯುತ್ತಿದ್ದು, ಬೇಸರ ಹೊರಹಾಕಿದ್ದಾರೆ.
ಬೆಳಗಾವಿ: ಕೋಟಿಗೊಬ್ಬ 3 ಚಿತ್ರ ಬಿಡುಗಡೆ ವಿಳಂಬ ಹಿನ್ನೆಲೆಯಲ್ಲಿ ಚಿತ್ರಮಂದಿರದ ಎದುರು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಂಕಲಿ ಗ್ರಾಮದ ಮಯೂರ ಚಿತ್ರಮಂದಿರದ ಗೇಟ್ ತೆಗೆಯದೇ ಇರುವದು ಹಾಗೂ ಟಿಕೆಟ್ ನೀಡದ್ದಕ್ಕೆ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದು, ಚಿತ್ರಮಂದಿರದ ಎದುರು ಹೆಚ್ಚಿನ ಪ್ರಮಾಣದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳು ಜಮಾವಣೆಗೊಂಡಿದ್ದಾರೆ.
ದುನಿಯಾ ವಿಜಯ್ ನಟನೆಯ ‘ಸಲಗ’ವನ್ನು ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದ್ಧಾರೆ. ‘ಸೂರಿ ಅಣ್ಣ’ ಹಾಡಿಗೆ ಬೆಳ್ಳಿ ಪರದೆ ಮುಂದೆ ಅಭಿಮಾನಿಗಳು ಡ್ಯಾನ್ಸ್ ಮಾಡಿ ಸಂಭ್ರಮ ಆಚರಿಸಿದ್ದಾರೆ.
‘ಕೋಟಿಗೊಬ್ಬ 3’ ಶೋ ರದ್ದಾಗಿದ್ದಕ್ಕೆ ಮಹಿಳಾ ಅಭಿಮಾನಿಯೋರ್ವರು ಬೇಸರ ವ್ಯಕ್ತಪಡಿಸಿದ್ದು, ಬೆಳಗ್ಗೆಯಿಂದ ಎಲ್ಲೂ ಶೋಗಳನ್ನ ಕೊಟ್ಟಿಲ್ಲ. ಬಹಳ ಬೇಸರವಾಗುತ್ತಿದೆ ಎಂದಿದ್ದಾರೆ. ಕುಟುಂಬ ಸಮೇತವಾಗಿ ಬಂದ ಪ್ರೇಕ್ಷರಿಗೂ ನಿರಾಸೆಯಾಗಿದ್ದು, ಏನಾದ್ರು ಮಾಡಿ ಸಿನಿಮಾ ರಿಲೀಸ್ ಮಾಡಿ ಎಂದ ಅವರು ಕೋರಿಕೊಂಡಿದ್ದಾರೆ.
ಕೋಟಿಗೊಬ್ಬ 3 ಸಿನಿಮಾದ ನೆಗೆಟಿವ್ ರೈಟ್ಸ್ ಸಮಸ್ಯೆ ಆಗಿದ್ದರಿಂದ ವೀರೇಶ್ ಥಿಯೇಟರ್ ಮಾಲೀಕ ಕೆ.ವಿ.ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ. ನಿರ್ಮಾಪಕ ಸೂರಪ್ಪಬಾಬು ಹೈದರಾಬಾದ್ನಲ್ಲಿ ಇದ್ದಾರೆ. ಅವರು ನೆಗೆಟಿವ್ ರೈಟ್ಸ್ ಸಮಸ್ಯೆ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ಚಂದ್ರಶೇಖರ್ ಟಿವಿ9ಗೆ ಮಾಹಿತಿ ನೀಡಿದ್ದಾರೆ. ಜವಾಬ್ದಾರಿ ಕೊರತೆಯಿಂದ ಚಿತ್ರ ರಿಲೀಸ್ ವಿಳಂಬವಾಗಿದೆ. ಯಾರೇ ಆಗಲಿ ಪ್ರೇಕ್ಷಕರ ಸಮಯ ವ್ಯರ್ಥ ಮಾಡಬಾರದು. ಇದು ನಮ್ಮ ಚಿತ್ರರಂಗಕ್ಕೆ ಶೋಭೆ ತರುವ ವಿಚಾರವಲ್ಲ ಎಂದು ಕೆ.ವಿ.ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ವೀರೇಶ್ ಚಿತ್ರಮಂದಿರದ ಮಾರ್ನಿಂಗ್ ಶೋ ರದ್ದಾಗಿದೆ ಎಂದು ಮಾಲೀಕರು ಸ್ಪಷ್ಟಪಡಿಸಿದ್ದಾರೆ. ತಾಂತ್ರಿಕ ಕಾರಣದಿಂದ ಹೀಗಾಗಿದೆ ಎಂದು ಅವರು ತಿಳಿಸಿದ್ದಾರೆ. ಜೊತೆಗೆ ನೆಗೆಟಿವ್ ರೈಟ್ಸ್ ಸಮಸ್ಯೆಯಾಗಿದೆ ಎಂಬ ಸುಳಿವನ್ನೂ ಅವರು ನೀಡಿದ್ದಾರೆ. ಒಟ್ಟಿನಲ್ಲಿ ಇದರಿಂದ ಅಭಿಮಾನಿಗಳಿಗೆ ಬಹಳ ನಿರಾಸೆಯಾಗಿದೆ.
ಕೋಟಿಗೊಬ್ಬ-3 ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಗದಗ ನಗರದ ಕೃಷ್ಣ ಟಾಕೀಸ್ ಬಳಿ ನೂರಾರು ಕಿಚ್ಚ ಸುದೀಪ್ ಅಭಿಮಾನಿಗಳು ಆಗಮಿಸಿದ್ದಾರೆ. ನೆಚ್ಚಿನ ನಟನ ಚಿತ್ರ ರಿಲೀಸ್ ಹಿನ್ನೆಲೆ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಬೆಳಗ್ಗೆ 7 ಗಂಟೆಯಿಂದಲೇ ಟಿಕೆಟ್ ಖರೀದಿಸಿ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ 9 ಗಂಟೆಯ ಶೋ ಇನ್ನೂ ಆರಂಭವಾಗಿಲ್ಲ. ಈ ಕುರಿತು ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶೋ ಆರಂಭವಾಗುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.
ಕೋಟಿಗೊಬ್ಬ 3 ಸಿನಿಮಾ ಇಂದು ಬಿಡುಗಡೆಯಾಗುವುದು ಅನುಮಾನ ಎನ್ನಲಾಗಿದೆ. ಕಾರಣ, ಬೆಳಗ್ಗೆ 10 ಗಂಟೆಯಾದರೂ ಮಾರ್ನಿಂಗ್ ಶೋ ಟಿಕೆಟ್ ನೀಡಿಲ್ಲ. ಆದ್ದರಿಂದ ಮಾರ್ನಿಂಗ್ ಶೋ ಕೂಡ ಬಹುತೇಕ ರದ್ದು ಎನ್ನಲಾಗಿದೆ.
ಕೋಟಿಗೊಬ್ಬ 3 ಚಿತ್ರದ ಫ್ಯಾನ್ಸ್ ಶೋ ಕ್ಯಾನ್ಸಲ್ ಆಗಿದ್ದರ ಕುರಿತು ಕಿಚ್ಚ ಸುದೀಪ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘‘ಶೋ ನಡೆಯಲಿದೆ ಎಂದು ಟಿಕೆಟ್ ಏಕೆ ಬುಕಿಂಗ್ ಮಾಡಲು ಬಿಟ್ಟಿದ್ದರು? ಅವರು ರೀಫಂಡ್ ಮಾಡಬಹುದು. ಆದರೆ ನಾವು ಹಣಕ್ಕಾಗಿ ಬಂದಿಲ್ಲ. ಅಭಿಮಾನಕ್ಕಾಗಿ ಬಂದಿದ್ದೀವಿ. ಅಭಿಮಾನಿಗಳ ಭಾವನೆಗಳ ಜೊತೆ ನಿರ್ಮಾಪಕ ಸೂರಪ್ಪ ಬಾಬು ಆಟವಾಡಬಾರದು’’ ಎಂದು ಫ್ಯಾನ್ಸ್ ಗರಂ ಆಗಿದ್ದಾರೆ.
ನಿರ್ಮಾಪಕ ಸೂರಪ್ಪ ಬಾಬು ಫ್ಯಾನ್ಸ್ ಶೋ ಕ್ಯಾನ್ಸಲ್ ಆಗಿದ್ದರ ಕುರಿತು ಟಿವಿ9ಗೆ ಸ್ಪಷ್ಟನೆ ನೀಡಿದ್ದು, 10 ಗಂಟೆಯ ನಂತರ ಎಲ್ಲಾ ಶೋ ನಡೆಯಲಿದೆ ಎಂದಿದ್ದಾರೆ.
ನಟ ದುನಿಯಾ ವಿಜಯ್ ‘ಸಲಗ’ ಚಿತ್ರದ ಕುರಿತು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ಅಭಿಮಾನಿಗಳಿಗೆ ಈ ಚಿತ್ರದ ಕುರಿತು ಅದಕ್ಕಿಂತ ದುಪ್ಪಟ್ಟು ನಿರೀಕ್ಷೆ ಇದೆ. ‘ಅವರ ಫೈಟ್, ನಟನೆ ಎಲ್ಲವೂ ಇಷ್ಟ. ಬಹಳ ಕಷ್ಟದಿಂದ ಬಂದು, ಬೆಳೆದಿರುವ ದುನಿಯಾ ವಿಜಯ್ ಗೆಲ್ಲಬೇಕು’ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಅಭಿಮಾನಿಗಳು ತಮ್ಮ ಅನಿಸಿಕೆಯನ್ನು ಟಿವಿ9 ಜೊತೆ ಹಂಚಿಕೊಂಡಿದ್ದು ಹೀಗೆ.
ಶಿವಮೊಗ್ಗ: ನಗರದ ಎಚ್ಪಿಸಿ ಚಿತ್ರಮಂದಿರದ ಮುಂದೆ ಅಭಿಮಾನಿಗಳ ನೆರೆದಿದ್ದಿ, ತಮ್ಮ ನೆಚ್ಚಿನ ನಟ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಅಭಿಮಾನಿಗಳು ಪಟಾಕಿ ಸಿಡಿಸಿ, ಕಿಚ್ಚನ ಭಾವಚಿತ್ರದ ಬಾವುಟ ಹಿಡಿದು ಸಂಭ್ರಮಿಸುತ್ತಿದ್ದಾರೆ.
ಮಂಡ್ಯ: ಹಲವು ತಿಂಗಳುಗಳ ನಂತರ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿರುವ ಸಂಭ್ರಮದಲ್ಲಿ ಅಭಿಮಾನಿಗಳು ಚಿತ್ರಮಂದಿರಗಳಿಗೆ ಆಗಮಿಸಿದ್ದಾರೆ. 10.30 ಕ್ಕೆ ಮಾರ್ನಿಂಗ್ ಶೋ ಇದ್ದು, ಇದಕ್ಕಾಗಿ ಬೆಳಿಗ್ಗೆಯಿಂದಲೇ ಚಿತ್ರಮಂದಿರದ ಮುಂದೆ ಅಭಿಮಾನಿಗಳು ಕಾದು ನಿಂತಿದ್ದಾರೆ. ಮಂಡ್ಯದ ಗುರುಶ್ರೀ ಥಿಯೇಟರ್ ನಲ್ಲಿ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’, ಹಾಗೂ ಮಹಾವೀರ ಚಿತ್ರ ಮಂದಿರದಲ್ಲಿ ದುನಿಯಾ ವಿಜಯ್ ಅಭಿನಯದ ‘ಸಲಗ’ ಚಿತ್ರ ಬಿಡುಗಡೆಯಾಗಲಿದೆ.
‘‘ನಾನು ಫ್ಯಾನ್ಸ್ ಶೋ ಕೊಡಲ್ಲ ಎಂದು ಆರಂಭದಲ್ಲಿ ಹೇಳಿದ್ದೆ. ಏನೂ ಪ್ರಾಬ್ಲಂ ಆಗುವುದಿಲ್ಲ. 10 ಘಂಟೆಗೆ ಚಿತ್ರದ ಎಲ್ಲಾ ಪ್ರದರ್ಶನಗಳು ಆರಂಭ ಆಗಲಿವೆ’’ ಎಂದು ಕೋಟಿಗೊಬ್ಬ 3 ನಿರ್ಮಾಪಕ ಸೂರಪ್ಪ ಬಾಬು ಟಿವಿ9ಗೆ ಹೇಳಿಕೆ ನೀಡಿದ್ದಾರೆ.
‘ಕೋಟಿಗೊಬ್ಬ 3’ ಸಿನಿಮಾ ಬೆಳಗ್ಗೆ ಶೋ ರದ್ದಾಗಿದ್ದರ ಕುರಿತು, ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಅಭಿಮಾನಿಗಳು ಕಿಡಿಕಾರಿದ್ದಾರೆ. ಸೂರಪ್ಪ ಬಾಬುಗೆ ಅಭಿಮಾನಿಗಳು ವಾರ್ನಿಂಗ್ ಮಾಡಿದ್ದು, ಸ್ಟಾರ್ ಸಿನಿಮಾ ಮಾಡಿ ಹೀಗೆ ಮಾಡಿದ್ರೆ ಅವರೆಂಥ ನಿರ್ಮಾಪಕರು ಎಂದು ಕಿಡಿಕಾರಿದ್ಧಾರೆ. ವಿಷ್ಣುವರ್ಧನ್ ಅವರಿಗೂ ಸೂರಪ್ಪ ಬಾಬು ಹೀಗೆಯೇ ತೊಂದರೆ ಕೊಟ್ಟಿದ್ದರು ಎಂದು ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ಕೆಲವು ಅಭಿಮಾನಿಗಳು ನಿರ್ಮಾಪಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
‘ಕೋಟಿಗೊಬ್ಬ 3’ ಚಿತ್ರದ ಫ್ಯಾನ್ಸ್ ಶೋ ರದ್ದಾಗಿದ್ದರ ಕುರಿತು ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರಮಂದಿರಗಳಿಗೆ 100% ಆಕ್ಯುಪೆನ್ಸಿ ಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಪಡೆದಿದ್ದು ಯಾವ ಪುರುಷಾರ್ಥಕ್ಕೆ ಎಂದು ಫ್ಯಾನ್ಸ್ ಗರಂ ಆಗಿ ಪ್ರಶ್ನಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಲ್ಲದೇ ಶೋ ಕ್ಯಾನ್ಸಲ್ ಮಾಡುವುದು ನೋಡಿದ್ದೆವು. ಆದರೆ ರಾತ್ರಿಯೆಲ್ಲಾ ನಿದ್ರೆ ಬಿಟ್ಟು ಇಂದು ಫ್ಯಾನ್ಸ್ ಆಗಮಿಸಿ, ಹೌಸ್ಫುಲ್ ಆದರೂ ಕೂಡ ಶೋ ಕ್ಯಾನ್ಸಲ್ ಆಗಿದೆ. ಕನ್ನಡ ಚಿತ್ರಗಳೆಂದರೆ ಎಲ್ಲರಿಗೂ ತಾತ್ಸಾರ ಆಗಿದೆ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.
ಕೋಟಿಗೊಬ್ಬನ ಕಣ್ತುಂಬಿಕೊಳ್ಳೊಕೆ ಟಿಕೆಟ್ ಬುಕ್ ಮಾಡಿ ಜೆಪಿ ನಗರದ ಸಿದ್ದಲಿಂಗೇಶ್ವರ ಥಿಯೇಟರ್ಗೆ ಬಂದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಚಿತ್ರದ ಪ್ರದರ್ಶನ ಕ್ಯಾನ್ಸಲ್ ಆಗಿದ್ದು, ವಿತರಕರು ಹಾಗೂ ನಿರ್ಮಾಪಕರ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದಾರೆ.
ನಗರದ ತ್ರಿವೇಣಿ ಚಿತ್ರಮಂದಿರದಲ್ಲಿ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ‘ಸಲಗ’ ಚಿತ್ರದ ಬಿಡುಗಡೆ ಸಂಭ್ರಮ ಜೋರಾಗಿದೆ. ಈಗಾಗಲೇ ಫಸ್ಟ್ ಶೋ ಹೌಸ್ ಫುಲ್ ಆಗಿದೆ.
‘ಕೋಟಿಗೊಬ್ಬ 3’ ಚಿತ್ರದ ಫ್ಯಾನ್ಸ್ ಶೋ ತಾಂತ್ರಿಕ ಕಾರಣಗಳಿಂದ ರದ್ದಾಗಿದೆ. ಮಾಗಡಿ ರಸ್ತೆಯ ಪ್ರಸನ್ನ, ಅವಳ ಹಳ್ಳಿಯ ವೆಂಕಟೇಶ್ವರ ಥಿಯೇಟರ್ ಸೇರಿದಂತೆ ಬೆಂಗಳೂರಿನ ಹಲವು ಚಿತ್ರ ಮಂದಿರಗಳಲ್ಲಿ ಅಭಿಮಾನಿಗಳಿಗಾಗಿ ಆಯೋಜನೆಗೊಂಡಿದ್ದ ಮಾರ್ನಿಂಗ್ ಶೋ ರದ್ದಾಗಿದೆ. ಅಭಿಮಾಣಿಗಳು ಈ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಶೋ ಕ್ಯಾನ್ಸಲ್ ಮಾಡಿರುವುದಾಗಿ ಚಿತ್ರಮಂದಿರದ ಆಡಳಿತ ಮಂಡಳಿ ಮಂದಿರಗಳ ಮುಂದೆ ಬೋರ್ಡ್ ಹಾಕಿದೆ. ಆನ್ ಲೈನ್ ಮೂಲಕ ಹಣವನ್ನು ರೀಫಂಡ್ ಮಾಡುವುದಾಗಿ ತಿಳಿಸಿದೆ. ಫ್ಯಾನ್ಸ್ ಶೋ ರದ್ದಾದ ಕಾರಣ, ಚಿತ್ರದ ಮೊದಲ ಶೋ 10 ಗಂಟೆಗೆ ಆರಂಭವಾಗಲಿದೆ.
Published On - 7:43 am, Thu, 14 October 21