ತಮಿಳಿಗೆ ಹೊರಟ ‘ಕೌಸಲ್ಯ ಸುಪ್ರಜಾ ರಾಮ’: ಅಲ್ಲಿ ಯಾರು ಹೀರೋ?

|

Updated on: Aug 29, 2023 | 10:18 PM

Kousalya Supraja Rama: ಡಾರ್ಲಿಂಗ್ ಕೃಷ್ಣ ನಟಿಸಿ, ಶಶಾಂಕ್ ನಿರ್ದೇಶನ ಮಾಡಿದ್ದ 'ಕೌಸಲ್ಯ ಸುಪ್ರಜಾ ರಾಮ' ಸಿನಿಮಾ ಫ್ಯಾಮಿಲಿ ಆಡಿಯೆನ್ಸ್ ಅನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಸಿನಿಮಾ ತಮಿಳಿಗೂ ರೀಮೇಕ್ ಆಗುತ್ತಿದ್ದು, ಜನಪ್ರಿಯ ನಟರೊಬ್ಬರು ತಮಿಳಿನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.

ತಮಿಳಿಗೆ ಹೊರಟ ಕೌಸಲ್ಯ ಸುಪ್ರಜಾ ರಾಮ: ಅಲ್ಲಿ ಯಾರು ಹೀರೋ?
ಕೌಸಲ್ಯ ಸುಪ್ರಜಾ ರಾಮ
Follow us on

ಪ್ಯಾನ್ ಇಂಡಿಯಾ (Pan India) ಸಿನಿಮಾ ಜಮಾನ ಬಂದ ಬಳಿಕ ರೀಮೇಕ್​ಗಳು (Remake) ತೀವ್ರವಾಗಿ ಕಡಿಮೆ ಆಗಿವೆ. ಮೂಲ ಸಿನಿಮಾವನ್ನೇ ಡಬ್ ಮಾಡಿ ವಿವಿಧ ಭಾಷೆಗಳಲ್ಲಿ ಬಿಡುಗಡೆ ಮಾಡುವ ಪರಿಪಾಟ ಹೆಚ್ಚಾಗಿದೆ. ಇಂಥಹಾ ಪರಿಸ್ಥಿತಿಯಲ್ಲಿಯೂ ಕನ್ನಡದ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ರೀಮೇಕ್ ಹಕ್ಕು ಮಾರಾಟವಾಗಿದೆ. ತಮಿಳಿನಲ್ಲಿ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ರೀಮೇಕ್ ಆಗಲಿದ್ದು, ಅಲ್ಲಿನ ಜನಪ್ರಿಯ ನಟರೊಬ್ಬರು ನಾಯಕನ ಪಾತ್ರದಲ್ಲಿ ನಟಿಸಲಿದ್ದಾರೆ.

ಶಶಾಂಕ್ ನಿರ್ದೇಶನದ ಸದಭಿರುಚಿಯ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಜುಲೈ 28ರಂದು ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಸಿನಿಮಾದ ಕತೆಗೆ ಫ್ಯಾಮಿಲಿ ಆಡಿಯೆನ್ಸ್ ಮನಸೋತಿದ್ದಾರೆ. ಕುಟುಂಬಗಳನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಸಿನಿಮಾ ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ. ವಿಮರ್ಶಕರು ಸಹ ಸಿನಿಮಾದ ಕತೆ, ಸಿನಿಮಾ ಹೊಮ್ಮಿಸುತ್ತಿರುವ ಸಂದೇಶವನ್ನು ಮೆಚ್ಚಿಕೊಂಡಿದ್ದಾರೆ. ಈಗ ತಮಿಳಿಗೂ ಹೋಗುತ್ತಿರುವುದು ಇದೇ ಉತ್ತಮ ಸಂದೇಶದ ಕಾರಣಕ್ಕೆ.

ಕನ್ನಡದಲ್ಲಿ ಡಾರ್ಲಿಂಗ್ ಕೃಷ್ಣ ಮಾಡಿರುವ ನಾಯಕ ಪಾತ್ರವನ್ನು ತಮಿಳಿನಲ್ಲಿ ಶಿವಕಾರ್ತಿಕೇಯನ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ತಮಿಳಿನ ಜನಪ್ರಿಯ ಸಿನಿಮಾ ನಿರ್ಮಾಣ ಸಂಸ್ಥೆಯೇ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ರೀಮೇಕ್ ಹಕ್ಕನ್ನು ಖರೀದಿ ಮಾಡಿದ್ದು, ಅಲ್ಲಿನ ನೇಟಿವಿಗೆ ಅನುಸಾರವಾಗಿ ಸಣ್ಣ ಪುಟ್ಟ ಬದಲಾವಣೆಗಳೊಟ್ಟಿಗೆ ಸಿನಿಮಾವನ್ನು ತೆರೆಗೆ ತರಲಿದೆ. ಆದಷ್ಟು ಬೇಗ ಸಿನಿಮಾದ ಅಧಿಕೃತ ಘೋಷಣೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ:‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಕ್ಕೆ ಅನ್ಯಾಯ; ಪರಭಾಷೆಗೆ ಮಣೆ ಹಾಕಿದ ಮಲ್ಟಿಪ್ಲೆಕ್ಸ್​ ವಿರುದ್ಧ ಚಿತ್ರತಂಡದ ಆಕ್ರೋಶ

‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಪುರುಷ ಅಹಂ ಎಂಬುದು ಎಷ್ಟು ಪೊಳ್ಳು ಎಂದು ಸಾರುವ ಕತೆಯುಳ್ಳ ಸಿನಿಮಾ ಆಗಿದೆ. ಪುರುಷನೆಂಬ ಅಹಂನಲ್ಲಿ ಜೀವಿಸುತ್ತಿರುವ ಯುವಕ ಪರಿಸ್ಥಿತಿಗಳಿಗೆ ಎದುರಾಗಿ ಬದಲಾಗುವುದೇ ಸಿನಿಮಾ. ನಾಯಕಿಯರು, ನಾಯಕನ ತಾಯಿ ಹೇಗೆ ನಾಯಕನ ಮನಪರಿವರ್ತನೆಗೆ ಕಾರಣವಾಗುತ್ತಾರೆ ಎಂಬುದನ್ನು ಸುಂದರ ದೃಶ್ಯಗಳ ಮೂಲಕ ನಿರ್ದೇಶಕ ಶಶಾಂಕ್ ಕಟ್ಟಿಕೊಟ್ಟಿದ್ದಾರೆ.

‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾನಲ್ಲಿ ಡಾರ್ಲಿಂಗ್ ಕೃಷ್ಣ ಜೊತೆಗೆ ಬೃಂದಾ ಆಚಾರ್, ಮಿಲನಾ ನಾಗರಾಜ್ ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಸುಧಾ ಬೆಳವಾಡಿ ಹಾಗೂ ರಂಗಾಯಣ ರಘು, ಅಚ್ಯುತ್ ಕುಮಾರ್ ಹಾಗೂ ನಾಯಕನ ಕಸಿನ್ ಪಾತ್ರದಲ್ಲಿ ನಾಗಭೂಷಣ ನಟಿಸಿದ್ದಾರೆ. ಸಿನಿಮಾಕ್ಕೆ ಬಿಸಿ ಪಾಟೀಲ್, ನಿರ್ದೇಶಕ ಶಶಾಂಕ್ ಬಂಡವಾಳ ಹೂಡಿದ್ದು, ಸಂಗೀತವನ್ನು ಅರ್ಜುನ್ ಜನ್ಯ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ