ಮರುಬಿಡುಗಡೆ ಆಗುತ್ತಿದೆ ಪ್ರಭಾಸ್ ನಟನೆಯ ಅಟ್ಟರ್ ಫ್ಲಾಪ್ ಸಿನಿಮಾ, ಇದು ಕನ್ನಡ ಸಿನಿಮಾದ ರೀಮೇಕ್
Prabhas: ಪ್ರಭಾಸ್ ನಟನೆಯ ಹಳೆಯ ಫ್ಲಾಪ್ ಸಿನಿಮಾ ಒಂದು ಮರು ಬಿಡುಗಡೆ ಆಗುತ್ತಿದೆ. ಪ್ರಭಾಸ್ರ ಈ ಫ್ಲಾಪ್ ಸಿನಿಮಾ ಕನ್ನಡದ ಸೂಪರ್ ಸಿನಿಮಾದ ರೀಮೇಕ್!
ಪ್ರಭಾಸ್ (Prabhas) ಈಗ ಪ್ಯಾನ್ ಇಂಡಿಯಾವನ್ನೂ (Pan India) ಮೀರಿದ ಸ್ಟಾರ್ ಆಗಿದ್ದಾರೆ. ಹಾಲಿವುಡ್ ಸ್ಟಾರ್ಗಿರಿಯ ಮೇಲೆ ಪ್ರಭಾಸ್ ಕಣ್ಣು ಹಾಕಿದ್ದಾರೆ. ಈಗಂತೂ ಅವರ ಸಿನಿಮಾದ ಭರ್ಜರಿ ಓಪನಿಂಗ್ ಪಡೆದುಕೊಳ್ಳುತ್ತವೆ, ಕಳಪೆ ಸಿನಿಮಾ ಆಗಿದ್ದರೂ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಅನ್ನೇ ಮಾಡುತ್ತಿವೆ. ಆದರೆ ‘ಬಾಹುಬಲಿ’ ಸಿನಿಮಾಕ್ಕೆ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಆಗ ಪ್ರಭಾಸ್ ಇತರೆ ನಾಯಕ ನಟರಂತೆ ಆಗಾಗ್ಗೆ ಹಿಟ್, ಫ್ಲಾಪ್ ಸಿನಿಮಾಗಳನ್ನು ನೀಡಿದ್ದಿದೆ. ಆದರೆ ಅವರ ವೃತ್ತಿ ಜೀವನದಲ್ಲಿ ಒಂದು ಸಿನಿಮಾ ತೀರ ಹೀನಾಯ ಸೋಲುಂಡಿತು. ಆದರೆ ಈಗ ಪ್ರಭಾಸ್ ದೊಡ್ಡ ಸ್ಟಾರ್ ಆದ ಬಳಿಕ ಆ ಫ್ಲಾಪ್ ಸಿನಿಮಾ ಮತ್ತೆ ಮರು ಬಿಡುಗಡೆ ಆಗುತ್ತಿದೆ. ಅಂದಹಾಗೆ ಆ ಫ್ಲಾಪ್ ಸಿನಿಮಾ ಕನ್ನಡ ಸಿನಿಮಾದ ರೀಮೇಕ್!
2007 ರ ಜನವರಿ 14ರಂದು ಬಿಡುಗಡೆ ಆಗಿದ್ದ ಪ್ರಭಾಸ್ ನಟನೆಯ ‘ಯೋಗಿ’ ಸಿನಿಮಾ ಇದೀಗ ಮರು ಬಿಡುಗಡೆ ಆಗುತ್ತಿದೆ. ಈ ಸಿನಿಮಾ ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ ‘ಜೋಗಿ’ಯ ರೀಮೇಕ್. ಕನ್ನಡದಲ್ಲಿ ಶಿವರಾಜ್ ಕುಮಾರ್ ಮಾಡಿದ್ದ ಮ್ಯಾಜಿಕ್ ಅನ್ನು ತೆಲುಗಿನಲ್ಲಿ ಪ್ರಭಾಸ್ ರೀಕ್ರಿಯೇಟ್ ಮಾಡಲು ಸಾಧ್ಯವಾಗಿರಲಿಲ್ಲ, ಸಿನಿಮಾ ಧಾರುಣವಾಗಿ ನೆಲಕಚ್ಚಿತ್ತು. ಈಗ ಅದೇ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಆಗ ಫ್ಲಾಪ್ ಎನಿಸಿಕೊಂಡಿದ್ದ ‘ಯೋಗಿ’ ಸಿನಿಮಾ ಈಗ ಪ್ರಭಾಸ್ ಸ್ಟಾರ್ ಗಿರಿಯ ಅಲೆಯಲ್ಲಿ ಈಗಲಾದರೂ ಹಿಟ್ ಆಗುತ್ತದೆಯೇ ಎಂಬುದು ತೆಲುಗು ಚಿತ್ರರಂಗದವರ ಕುತೂಹಲ.
‘ಯೋಗಿ’ ಸಿನಿಮಾವು ಸುಮಾರು 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಿ ಸುಮಾರು 13 ಕೋಟಿ ಕಲೆಕ್ಷನ್ ಮಾಡಿತ್ತು. ಸುಮಾರು 20 ಕೋಟಿ ಬಜೆಟ್ನಲ್ಲಿ ನಿರ್ಮಾಣ ಮಾಡಲಾಗಿದ್ದ ಆ ಸಿನಿಮಾ ಫ್ಲಾಪ್ ಎಂದು ಪರಿಗಣಿತವಾಯ್ತು. ಆ ನಂತರ ‘ಯೋಗಿ’ ಸಿನಿಮಾ ಮಲಯಾಳಂ, ಹಿಂದಿ, ತಮಿಳಿಗೆ ಡಬ್ ಆಗಿ ಬಿಡುಗಡೆ ಆಯಿತಾದರೂ ಅಲ್ಲೂ ಸಹ ಫ್ಲಾಪ್ ಆಯಿತು.
ಇದನ್ನು ಓದಿ:ಬಾಲಿವುಡ್ ನಿರ್ದೇಶಕರ ಸಹವಾಸವೇ ಬೇಡ ಅಂತ ಮಹತ್ವದ ನಿರ್ಧಾರ ತೆಗೆದುಕೊಂಡ ಪ್ರಭಾಸ್?
ಇದೀಗ ಆಗಸ್ಟ್ 18 ರಂದು ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಸಿನಿಮಾಕ್ಕೆ 4ಕೆ ನವೀನ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು ಸೌಂಡ್ಸ್ ಗುಣಮಟ್ಟವನ್ನು ಸಹ ಉತ್ತಮ ಪಡಿಸಿ ಸಿನಿಮಾ ಮರು ಬಿಡುಗಡೆ ಮಾಡುತ್ತಿರುವುದಾಗಿ ಸಿನಿಮಾದ ಹಕ್ಕು ಹೊಂದಿರುವ ನಿರ್ಮಾಣ ಸಂಸ್ಥೆ ಘೋಷಿಸಿದೆ. ಕೆಲ ತಿಂಗಳ ಹಿಂದೆ ಮರು ಬಿಡುಗಡೆ ಆಗಿದ್ದ ಪ್ರಭಾಸ್ರ ‘ಬಿಲ್ಲಾ’ ಹಾಗೂ ‘ವರ್ಷಂ’ ಸಿನಿಮಾಗಳು ಉತ್ತಮ ಮೊತ್ತವನ್ನು ಕಲೆಕ್ಟ್ ಮಾಡಿದ್ದವು. ಹಾಗಾಗಿ ‘ಯೋಗಿ’ ಸಿನಿಮಾ ಸಹ ದೊಡ್ಡ ಮೊತ್ತ ಗಳಿಸುವ ನಿರೀಕ್ಷೆ ಇದೆ.
‘ಯೋಗಿ’ ಸಿನಿಮಾವು ಶಿವರಾಜ್ ಕುಮಾರ್ ನಟನೆಯ ‘ಜೋಗಿ’ ಸಿನಿಮಾದ ರೀಮೇಕ್ ಆಗಿದೆ. ತೆಲುಗಿನಲ್ಲಿ ವಿವಿ ವಿನಾಯಕ್ ಆ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಸಿನಿಮಾದಲ್ಲಿ ಪ್ರಭಾಸ್ ಎದುರು ನಾಯಕಿಯಾಗಿ ನಯನತಾರಾ ನಟಿಸಿದ್ದಾರೆ. ಕೋಟಾ ಶ್ರೀನಿವಾಸ್ ರಾವ್, ಆಲಿ, ಸುಬ್ಬುರಾಜ್, ಸುನಿಲ್ ಇನ್ನೂ ಹಲವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ