ಡಾರ್ಲಿಂಗ್ ಕೃಷ್ಣ (Darling Krishna) ನಟನೆಯ ‘ಕೌಸಲ್ಯ ಸುಪ್ರಜಾ ರಾಮ‘ (Kausalya Supraja Rama) ಸಿನಿಮಾದ ಟ್ರೈಲರ್ ಅನ್ನು ಇಂದು (ಜುಲೈ 14) ನಟ ಸುದೀಪ್ (Sudeep) ಬಿಡುಗಡೆ ಮಾಡಿದ್ದಾರೆ. ಪುರುಷ ಅಹಾಂಕರದ ಕುರಿತಾದ ಕತೆಯನ್ನು ಸಿನಿಮಾ ಒಳಗೊಂಡಿದೆ ಎಂಬುದನ್ನು ಟೀಸರ್ ಸಾರಿ ಹೇಳುತ್ತಿದೆ. ಗಂಡು ಮೇಲು, ಹೆಣ್ಣು ಕೀಳು ಅಥವಾ ಗಂಡಿನ ಆಳು ಅಂದುಕೊಂಡಿರುವ ಯುವಕನೊಬ್ಬ ಪ್ರೀತಿಯಲ್ಲಿ ಬಿದ್ದಾಗಿನ ಆ ನಂತರದ ಕತೆಯನ್ನು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಒಳಗೊಂಡಿದೆ.
ಸಿನಿಮಾದ ಟ್ರೈಲರ್ನಲ್ಲಿ ಕೆಲವು ಅಂಶಗಳನ್ನು ನಿರ್ದೇಶಕ ಶಶಾಂಕ್ ಬಿಟ್ಟುಕೊಟ್ಟಿದ್ದಾರೆ. ಡಾರ್ಲಿಂಗ್ ಕೃಷ್ಣ ಮಹಿಳಾ ದ್ವೇಷಿಯಾಗಲು ಅಪ್ಪನೇ ಕಾರಣ, ಅಪ್ಪನ ಮಾತುಗಳಿಂದ ಸ್ಪೂರ್ತಿ ಪಡೆದು ಪುರುಷ ಅಹಂಕಾರವನ್ನು ಬೆಳೆಸಿಕೊಂಡಿದ್ದಾನೆ ನಾಯಕ. ಆದರೆ ಅಮ್ಮ ಹಾಗಲ್ಲ ಆಕೆ ಕರುಣಾಮಯಿ, ಪ್ರೇಮಮಯಿ, ಆದರೆ ನಾಯಕ ಡಾರ್ಲಿಂಗ್ ಕೃಷ್ಣ ಕೇಳಿರುವುದು ಪಾಲಿಸುತ್ತಿರುವುದು ಅಪ್ಪನ ಮಾತನ್ನು ಹೀಗಿರುವಾಗ ಅವನಿಗೆ ಚಂದದ ಹುಡುಗಿಯೊಟ್ಟಿಗೆ ಲವ್ ಆಗುತ್ತದೆ. ಮುಂದೇನು? ಸಿನಿಮಾದಲ್ಲಿಯೇ ನೋಡಬೇಕು.
ತಮ್ಮ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ನಟ ಡಾರ್ಲಿಂಗ್ ಕೃಷ್ಣ ಹೆಚ್ಚು ಮಾಸ್ ಆಗಿ, ಹೆಚ್ಚು ಖಡಕ್ ಆಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ಮಾಸ್ ಡೈಲಾಗ್ಗಳನ್ನು ಸಹ ಡಾರ್ಲಿಂಗ್ ಕೃಷ್ಣ ಹೊಡೆದಿರುವುದು ಟ್ರೈಲರ್ನಲ್ಲಿ ತಿಳಿದು ಬಂದಿದೆ. ಹಾಸ್ಯಕ್ಕೆ ನಾಗಭೂಷಣ ಇದ್ದಾರೆ. ಡಾರ್ಲಿಂಗ್ ಕೃಷ್ಣನ ತಂದೆಯ ಪಾತ್ರದಲ್ಲಿ ರಂಗಾಯಣ ರಘು ಮಿಂಚಿದ್ದಾರೆ, ಅಹಂಕಾರಿ ಅಪ್ಪನ ಪಾತ್ರದಲ್ಲಿ ರಘು ನಟಿಸಿದ್ದಾರೆ. ಅಮ್ಮನ ಪಾತ್ರದಲ್ಲಿ ಸ್ಯಾಂಡಲ್ವುಡ್ ತಾಯಿ ಎಂದೇ ಖ್ಯಾತವಾಗಿರುವ ಸುಧಾ ಬೆಳವಾಡಿ ನಟಿಸಿದ್ದಾರೆ.
ಟ್ರೈಲರ್ನಲ್ಲಿ ಕೆಲ ಮಾಸ್ ಅಂಶಗಳು, ಭಾವುಕ ಅಂಶಗಳು, ಪ್ರೀತಿ-ತಮಾಷೆಯ ದೃಶ್ಯಗಳನ್ನು ಸೇರಿಸಲಾಗಿದೆ. ಟ್ರೈಲರ್ನಲ್ಲಿ ನಾಯಕಿ ಬೃಂದಾ ಆಚಾರ್ಯ ಗಮನ ಸೆಳೆದಿದ್ದಾರೆ. ಕೊನೆಯಲ್ಲಿ ಎಂಟ್ರಿ ಕೊಡುವ ಮಿಲನಾ ನಾಗರಾಜ್ ಪಾತ್ರವೇನು ಎಂಬುದು ಸಿನಿಮಾ ನೋಡಿದ ಬಳಿಕವೇ ತಿಳಿಯಲಿದೆ. ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಟ್ರೈಲರ್ನಲ್ಲಿಯೇ ಅವರ ಸಂಗೀತದ ಕೆಲವು ಝಲಕ್ಗಳು ಕೇಳ ಸಿಗುತ್ತವೆ.
ಸಿನಿಮಾವನ್ನು ಹಿರಿಯ ನಿರ್ದೇಶಕ ಶಶಾಂಕ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ಮಾಜಿ ಸಚಿವ ಬಿಸಿ ಪಾಟೀಲ್ ನಿರ್ಮಾಣ ಮಾಡಿದ್ದಾರೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರೂ ಸಹ ಹಾಜರಿದ್ದರಲ್ಲದೆ ಸಿನಿಮಾ ಚೆನ್ನಾಗಿ ಬಂದಿದೆಯೆಂದೂ ಗೆಲ್ಲುವ ಭರವಸೆ ಇದೆಯೆಂದೂ ಹೇಳಿದರು. ಸಿನಿಮಾ ಜುಲೈ 28ಕ್ಕೆ ತೆರೆಗೆ ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:27 pm, Fri, 14 July 23