ಟಾಲಿವುಡ್ನ ಖ್ಯಾತ ನಟ ವಿಜಯ್ ದೇವರಕೊಂಡ (Vijay Deverakonda) ಅವರು ಇಂದು (ಆಗಸ್ಟ್ 19) ಬೆಂಗಳೂರಿಗೆ ಆಗಮಿಸಿದ್ದಾರೆ. ಬಹುನಿರೀಕ್ಷಿತ ‘ಲೈಗರ್’ (Liger Movie) ಸಿನಿಮಾದ ಪ್ರಚಾರದ ಸಲುವಾಗಿ ಅವರು ಬಂದಿದ್ದಾರೆ. ಈ ವೇಳೆ ಅವರು ಪುನೀತ್ ರಾಜ್ಕುಮಾರ್ ಸಮಾಧಿಗೆ ಭೇಟಿ ನೀಡಿದ್ದಾರೆ. ಅಪ್ಪು ನಿಧನರಾಗಿ ಹಲವು ತಿಂಗಳು ಕಳೆದಿದೆ. ಪರಭಾಷೆಯ ಯಾವುದೇ ಸ್ಟಾರ್ ನಟರು ಬೆಂಗಳೂರಿಗೆ ಬಂದಾಗ ಅಪ್ಪು ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸುತ್ತಾರೆ. ಅದೇ ರೀತಿ, ವಿಜಯ್ ದೇವರಕೊಂಡ ಕೂಡ ಕಂಠೀರವ ಸ್ಟುಡಿಯೋದಲ್ಲಿ ಇರುವ ಪುನೀತ್ ರಾಜ್ಕುಮಾರ್ ಸಮಾಧಿಗೆ (Puneeth Rajkumar Samadhi) ಭೇಟಿ ನೀಡಿದ್ದಾರೆ. ಎಲ್ಲ ಭಾಷೆಯ ಚಿತ್ರರಂಗದ ಜೊತೆಗೆ ಪುನೀತ್ ಉತ್ತಮ ಒಡನಾಟ ಹೊಂದಿದ್ದರು. ಹಾಗಾಗಿ ಅವರನ್ನು ಕಂಡರೆ ಎಲ್ಲರಿಗೂ ಅಪಾರ ಗೌರವ. ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲ ಎಂಬ ನೋವು ಎಲ್ಲರನ್ನೂ ಕಾಡುತ್ತಿದೆ.
‘ಲೈಗರ್’ ಸಿನಿಮಾ ಆಗಸ್ಟ್ 25ರಂದು ಅದ್ದೂರಿಯಾಗಿ ತೆರೆಗೆ ಬರಲಿದೆ. ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಪುನೀತ್ ರಾಜ್ಕುಮಾರ್ ಅವರು ಮೊದಲ ಬಾರಿ ಹೀರೋ ಆಗಿ ನಟಿಸಿದ ‘ಅಪ್ಪು’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದು ಕೂಡ ಪುರಿ ಜಗನ್ನಾಥ್. ಅವರಿಗೆ ಡಾ. ರಾಜ್ಕುಮಾರ್ ಕುಟುಂಬದ ಜೊತೆಗೆ ಒಡನಾಟ ಇದೆ. ಈಗ ಅವರು ನಿರ್ದೇಶನ ಮಾಡಿರುವ ‘ಲೈಗರ್’ ಚಿತ್ರದ ಬಗ್ಗೆ ಬೆಂಗಳೂರಿನಲ್ಲಿ ಪ್ರಚಾರ ಮಾಡಲಾಗುತ್ತಿದೆ.
ಬಹುಕೋಟಿ ರೂಪಾಯಿ ಬಜೆಟ್ನಲ್ಲಿ ಮೂಡಿಬಂದಿರುವ ‘ಲೈಗರ್’ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರಿಗೆ ಜೋಡಿಯಾಗಿ ಅನನ್ಯಾ ಪಾಂಡೆ ನಟಿಸಿದ್ದಾರೆ. ಬಾಕ್ಸರ್ ಪಾತ್ರದಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅವರ ತಾಯಿ ಪಾತ್ರಕ್ಕೆ ರಮ್ಯಾ ಕೃಷ್ಣ ಬಣ್ಣ ಹಚ್ಚಿದ್ದಾರೆ. ವಿಶ್ವ ವಿಖ್ಯಾತ ಬಾಕ್ಸರ್ ಮೈಕ್ ಟೈಸನ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಟ್ರೇಲರ್ ಮತ್ತು ಹಾಡುಗಳು ಧೂಳೆಬ್ಬಿಸಿವೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ. ತೆಲುಗು, ಕನ್ನಡ, ಹಿಂದಿ, ಮಲಯಾಳಂ, ತಮಿಳು ಭಾಷೆಗಳಲ್ಲಿ ತೆರೆಕಾಣಲಿದೆ. ಹಾಗಾಗಿ ದೇಶದ ವಿವಿಧ ನಗರಗಳಿಗೆ ತೆರಳಿ ಭರ್ಜರಿಯಾಗಿ ಪ್ರಮೋಷನ್ ಮಾಡಲಾಗುತ್ತಿದೆ. ಹೋದಲ್ಲೆಲ್ಲ ಅವರಿಗೆ ಭರ್ಜರಿ ಸ್ವಾಗತ ಸಿಗುತ್ತಿದೆ. ಈ ಸಿನಿಮಾ ಮೇಲೆ ವಿಜಯ್ ದೇವರಕೊಂಡ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಬಾಲಿವುಡ್ ಬಾಕ್ಸ್ ಆಫೀಸ್ ಮೇಲೆ ವಿಜಯ್ ದೇವರಕೊಂಡ ಕಣ್ಣಿಟ್ಟಿದ್ದಾರೆ. ಈ ಚಿತ್ರಕ್ಕೆ ಪುರಿ ಜಗನ್ನಾಥ್, ಚಾರ್ಮಿ ಕೌರ್, ಕರಣ್ ಜೋಹರ್ ಮುಂತಾದವರು ಬಂಡವಾಳ ಹೂಡಿದ್ದಾರೆ. ಮೊದಲ ದಿನ ಈ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗುವ ಸಾಧ್ಯತೆ ದಟ್ಟವಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:25 pm, Fri, 19 August 22