‘ರಾಷ್ಟ್ರ ಪ್ರಶಸ್ತಿ’ ಪುರಸ್ಕೃತ ‘ಡೊಳ್ಳು’ ಚಿತ್ರದ ಮೊದಲ ಹಾಡು ರಿಲೀಸ್​ ಮಾಡಿದ ಡಾಲಿ ಧನಂಜಯ್​

TV9kannada Web Team

TV9kannada Web Team | Edited By: Madan Kumar

Updated on: Aug 18, 2022 | 2:49 PM

Dollu Kannada Movie: ರಾಷ್ಟ್ರ ಪ್ರಶಸ್ತಿ ಪಡೆದುಕೊಂಡ ಬಳಿಕ ‘ಡೊಳ್ಳು’ ಚಿತ್ರದ ಮೇಲೆ ಸಿನಿಪ್ರಿಯರ ನಿರೀಕ್ಷೆ ಹೆಚ್ಚಾಗಿದೆ. ಸಾಗರ್​ ಪುರಾಣಿಕ್​ ನಿರ್ದೇಶನದ ಈ ಚಿತ್ರಕ್ಕೆ, ಪವನ್​ ಒಡೆಯರ್​ ಬಂಡವಾಳ ಹೂಡಿದ್ದಾರೆ.

‘ರಾಷ್ಟ್ರ ಪ್ರಶಸ್ತಿ’ ಪುರಸ್ಕೃತ ‘ಡೊಳ್ಳು’ ಚಿತ್ರದ ಮೊದಲ ಹಾಡು ರಿಲೀಸ್​ ಮಾಡಿದ ಡಾಲಿ ಧನಂಜಯ್​
‘ಡೊಳ್ಳು’ ಚಿತ್ರತಂಡದ ಜೊತೆ ಡಾಲಿ ಧನಂಜಯ್

‘ಗೂಗ್ಲಿ’, ‘ರಣವಿಕ್ರಮ’ ಮುಂತಾದ ಸಿನಿಮಾಗಳಿಂದ ಯಶಸ್ಸು ಕಂಡ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪವನ್ ಒಡೆಯರ್  (Pawan Wadeyar) ನಿರ್ಮಾಪಕನಾಗಿಯೂ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಮೊದಲ ಬಾರಿಗೆ ಅವರ ನಿರ್ಮಾಣದಲ್ಲಿ ‘ಡೊಳ್ಳು’ ಸಿನಿಮಾ ಮೂಡಿಬಂದಿದೆ. ಹಲವು ಕಾರಣಗಳಿಂದ ಈ ಚಿತ್ರ ಗಮನ ಸೆಳೆಯುತ್ತಿದೆ. ಈ ಸಿನಿಮಾದ ಕಥಾವಸ್ತು ಭಿನ್ನವಾಗಿದೆ. ಈಗಾಗಲೇ ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿರುವುದು ‘ಡೊಳ್ಳು’ (Dollu Movie) ಚಿತ್ರದ ಹೆಚ್ಚುಗಾರಿಕೆ. ಮೆಚ್ಚುಗೆ ಜೊತೆಗೆ ಅನೇಕ ಪ್ರಶಸ್ತಿಗಳನ್ನು ಕೂಡ ಈ ಚಿತ್ರ ಬಾಚಿಕೊಂಡಿದೆ. 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ‘ಅತ್ಯುತ್ತಮ ಕನ್ನಡ ಸಿನಿಮಾ’ ಪ್ರಶಸ್ತಿಗೆ ‘ಡೊಳ್ಳು’ ಪಾತ್ರವಾಗಿದೆ. ಈಗ ಈ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಲಾಗಿದೆ. ಡಾಲಿ ಧನಂಜಯ್​ (Daali Dhananjay) ಅವರು ಸಾಂಗ್​ ರಿಲೀಸ್​ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ತಾಜಾ ಸುದ್ದಿ

ರಾಷ್ಟ್ರ ಪ್ರಶಸ್ತಿ ಪಡೆದುಕೊಂಡ ಬಳಿಕ ‘ಡೊಳ್ಳು’ ಚಿತ್ರದ ಮೇಲೆ ಸಿನಿಪ್ರಿಯರ ನಿರೀಕ್ಷೆ ಹೆಚ್ಚಾಗಿದೆ. ಈ ಚಿತ್ರಕ್ಕೆ ಸಾಗರ್​ ಪುರಾಣಿಕ್​ ನಿರ್ದೇಶನ ಮಾಡಿದ್ದಾರೆ. ಕಾರ್ತಿಕ್ ಮಹೇಶ್ ಅವರು ನಾಯಕನಾಗಿ ನಟಿಸಿದ್ದು, ನಿಧಿ ಹೆಗ್ಡೆ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಆನಂದ್​ ಆಡಿಯೋ ಮೂಲಕ ‘ಡೊಳ್ಳು’ ಚಿತ್ರದ ಹಾಡು ‘ಮಯಾನಗರಿ..’ ಹೊರಬಂದಿದೆ. ‘ಡಾಲಿ’ ಧನಂಜಯ್ ಅವರ ಈ ಹಾಡನ್ನು ಬಿಡುಗಡೆ ಮಾಡಿದ್ದೂ ಅಲ್ಲದೇ, ತಾವು ಬೆಂಗಳೂರಿಗೆ ಬಂದ ಮೊದಲ ದಿನದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಕೆಲಸ ಹುಡುಕಿಕೊಂಡು ಹಳ್ಳಿಯಿಂದ ಬೆಂಗಳೂರಿಗೆ ಬರುವ ನಾಯಕನ ಕಣ್ಣಿನಲ್ಲಿ ಕಾಣುವ ‘ಮಯಾನಗರಿ..’ ಸೊಬಗನ್ನು ಈ ಹಾಡು ವಿವರಿಸುತ್ತದೆ. ಈ ಗೀತೆಗೆ ಪ್ರದ್ಯುಮ್ನ ನರಹಳ್ಳಿ ಸಾಹಿತ್ಯ ಬರೆದಿದ್ದಾರೆ. ಅನಂತ್ ಕಾಮನ್ ಸಂಗೀತ ಸಂಯೋಜನೆ ಮಾಡಿದ್ದು, ನಿರ್ದೇಶಕ ಸಾಗರ್ ಪುರಾಣಿಕ್ ಅವರೇ ಧ್ವನಿ ನೀಡಿದ್ದಾರೆ. ಈ ಗೀತೆ ಮೂಲಕ ಅವರು ಗಾಯಕರಾಗಿಯೂ ಹೊಸ ಪ್ರಯತ್ನ ಮಾಡಿದ್ದಾರೆ.

ಒಡೆಯರ್ ಮೂವೀಸ್ ಬ್ಯಾನರ್ ಮೂಲಕ ನಿರ್ಮಾಣ ಆಗಿರುವ ಈ ಸಿನಿಮಾದಲ್ಲಿ ಜನಪದ ಕಲೆಯಾದ ಡೊಳ್ಳಿನ ಕುರಿತಾದ ಕಥೆ ಇದೆ. ನಿರ್ದೇಶಕ ಸಾಗರ್​ ಪುರಾಣಿಕ್​ ಕಟ್ಟಿಕೊಟ್ಟಿರುವ ಈ ಸಿನಿಮಾದಲ್ಲಿ ಕಾರ್ತಿಕ್​ ಮಹೇಶ್​ ಮತ್ತು ನಿಧಿ ಹೆಗ್ಡೆ ಜೊತೆಗೆ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರತ್ ಮುಂತಾದ ಕಲಾವಿದರು ನಟಿಸಿದ್ದಾರೆ. ಶ್ರೀನಿಧಿ ಚಿತ್ರಕಥೆ ಸಂಭಾಷಣೆ ಬರೆದಿದ್ದು, ಅಭಿಲಾಷ್ ಕಲಾಥಿ ಛಾಯಾಗ್ರಹಣ ಮಾಡಿದ್ದಾರೆ.

ಪ್ರಶಸ್ತಿ ಪಡೆಯುವ ಸಿನಿಮಾಗಳು ಚಿತ್ರೋತ್ಸವಕ್ಕಷ್ಟೇ ಸೀಮಿತ ಎಂಬ ಮಾತಿದೆ. ಆದರೆ ‘ಡೊಳ್ಳು’ ಚಿತ್ರ ಹಾಗಲ್ಲ. ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ರಿಲೀಸ್​ ಮಾಡಲು ಸಕಲ ಸಿದ್ಧತೆ ನಡೆದಿದೆ. ಆಗಸ್ಟ್​ 26ರಂದು ರಾಜ್ಯಾದ್ಯಂತ ಈ ಚಿತ್ರ ಬಿಡುಗಡೆ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada