Ashika Ranganath: ‘ಚುಟುಚುಟು’ ಬೆಡಗಿ ಆಶಿಕಾಗೆ ಈಗ ತೋಟದಲ್ಲಿ ಕೆಲಸ; ಲಾಕ್​ಡೌನ್​ನಲ್ಲಿ ಹೊಸ ಕಸುಬು

|

Updated on: May 27, 2021 | 11:18 AM

ಲಾಕ್​ಡೌನ್​ ಜಾರಿಯಲ್ಲಿರುವ ಕಾರಣ ಸಿನಿಮಾ ಶೂಟಿಂಗ್​ಗೆ ಬ್ರೇಕ್​ ಹಾಕಲಾಗಿದೆ. ಈ ನಡುವೆ ಆಶಿಕಾ ರಂಗನಾಥ್ ಮಾವಿನ ತೋಟದಲ್ಲಿ ಕೆಲಸ ಮಾಡುತ್ತಾ, ಸಾವಯವ ಕೃಷಿ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ.

Ashika Ranganath: ‘ಚುಟುಚುಟು’ ಬೆಡಗಿ ಆಶಿಕಾಗೆ ಈಗ ತೋಟದಲ್ಲಿ ಕೆಲಸ; ಲಾಕ್​ಡೌನ್​ನಲ್ಲಿ ಹೊಸ ಕಸುಬು
ಆಶಿಕಾ ರಂಗನಾಥ್​
Follow us on

ಕೊರೊನಾ ವೈರಸ್​ ಎರಡನೇ ಅಲೆ ದೇಶಾದ್ಯಂತ ಜೋರಾಗಿರುವ ಕಾರಣ ಬಹುತೇಕ ಕಡೆ ಲಾಕ್​ಡೌನ್ ಜಾರಿ​ ಮಾಡಲಾಗಿದೆ. ಸಿನಿಮಾ, ಧಾರಾವಾಹಿ ಶೂಟಿಂಗ್​ಗಳು ಸ್ಥಗಿತಗೊಂಡಿರುವುದರಿಂದ ಸೆಲೆಬ್ರಿಟಿಗಳು ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಬಂದಿದೆ. ಸದಾ ಕಾಲ ಶೂಟಿಂಗ್​ನಲ್ಲಿ ಬ್ಯುಸಿ ಆಗಿರುತ್ತಿದ್ದ ನಟ-ನಟಿಯರು ಇಷ್ಟು ದಿನ ಫ್ಯಾಮಿಲಿಯನ್ನು ಮಿಸ್​ ಮಾಡಿಕೊಳ್ಳುತ್ತಿದ್ದರು. ಈಗ ಅವರಿಗೆ ಕುಟುಂಬದವರ ಜೊತೆ ಕಾಲ ಕಳೆಯಲು ಸಮಯ ಸಿಕ್ಕಿದೆ. ಕೆಲವರು ತಮ್ಮ ತೋಟದ ಮನೆಗೆ ತೆರಳಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ನಟಿ ಆಶಿಕಾ ರಂಗನಾಥ್​ ಕೂಡ ಹಳ್ಳಿ ಪರಿಸರದಲ್ಲಿ ಕಾಲ ಕಳೆಯುತ್ತಿದ್ದಾರೆ.

ಕನ್ನಡದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ಆಶಿಕಾ ರಂಗನಾಥ್​ ಅವರ ಕೈಯಲ್ಲಿ ‘ಅವತಾರ​ ಪುರುಷ’, ‘ರೇಮೋ’, ‘ಮದಗಜ’ ಮುಂತಾದ ಸಿನಿಮಾಗಳಿವೆ. ಆದರೆ ಲಾಕ್​ಡೌನ್​ ಜಾರಿಯಲ್ಲಿರುವ ಕಾರಣ ಈ ಎಲ್ಲ ಸಿನಿಮಾಗಳ ಕೆಲಸಗಳಿಗೆ ಬ್ರೇಕ್​ ಹಾಕಲಾಗಿದೆ. ಈ ನಡುವೆ ಆಶಿಕಾ ಮಾವಿನ ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಬಂಧಿಕರ ತೋಟಕ್ಕೆ ತೆರಳಿ, ಸಾವಯವ ಕೃಷಿ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಆಶಿಕಾ ಹೆಚ್ಚು ಆ್ಯಕ್ಟೀವ್​ ಆಗಿರುತ್ತಾರೆ. ಇನ್​​ಸ್ಟಾಗ್ರಾಮ್​ನಲ್ಲಿ 13 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ ಹೊಂದಿರುವ ಅವರು, ತಮ್ಮ ಅಭಿಮಾನಿಗಳಿಗಾಗಿ ಏನಾದರೂ ಪೋಸ್ಟ್​ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ತಮ್ಮ ಲಾಕ್​ಡೌನ್​ ದಿನಚರಿಯ ಬಗ್ಗೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಸಂಬಂಧಿಕರ ತೋಟದಲ್ಲಿ ಅವರು ಎಲ್ಲರ ಜೊತೆ ಖುಷಿಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ಅಜ್ಜ, ಅಜ್ಜಿ ಮತ್ತು ಕಸಿನ್ಸ್​ ಜೊತೆ ಇರಲು ಸಮಯ ಸಿಕ್ಕಿರುವುದಕ್ಕೆ ಆಶಿಕಾ ಸಂತಸಪಡುತ್ತಿದ್ದಾರೆ.

ಅವರ ತೋಟದಲ್ಲಿ ಮಾವು, ಮೆಣಸಿನ ಕಾಯಿ ಹಾಗೂ ಹಲವು ಬಗೆಯ ತರಕಾರಿಗಳನ್ನು ಬೆಳೆಯಲಾಗುತ್ತಿದೆ. ಸಾವಯವ ವಿಧಾನದಲ್ಲಿ ಬೆಳೆದ ಮಾವಿನಿಂದ ವಿವಿಧ ಖಾದ್ಯಗಳನ್ನು ತಯಾರಿಸಿ ಆಶಿಕಾ ಸವಿಯುತ್ತಿದ್ದಾರೆ. ಅಲ್ಲಿಗೆ ತೆರಳಿದ ಬಳಿಕ ಅವರಿಗೆ ಸಾವಯವ ಕೃಷಿ ಬಗ್ಗೆ ಅನೇಕ ವಿಚಾರಗಳು ಗೊತ್ತಾಗಿದೆ. ಮೊಬೈಲ್​ ಬಳಕೆ ಕಡಿಮೆ ಮಾಡಿದ್ದು, ಹಳ್ಳಿ ಸೊಗಡಿನ ಆಟಗಳನ್ನು ಆಡುತ್ತಿದ್ದಾರೆ. ಒಟ್ಟಿನಲ್ಲಿ ಅವರು ಈ ಲಾಕ್​ಡೌನ್​ ಸಮಯವನ್ನು ಹಾಯಾಗಿ ಕಳೆಯುತ್ತಿದ್ದಾರೆ.

ಲಾಕ್​ಡೌನ್​ ಮುಗಿಯುತ್ತಿದ್ದಂತೆಯೇ ಸಿನಿಮಾ ಕೆಲಸಗಳಲ್ಲಿ ಆಶಿಕಾ ಬ್ಯುಸಿ ಆಗಲಿದ್ದಾರೆ. ‘ರೇಮೋ’, ‘ಅವತಾರ ಪುರುಷ’ ಹಾಗೂ ‘ಮದಗಜ’ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ಹೆಚ್ಚು ನಿರೀಕ್ಷೆ ಇದೆ. ‘ಕೋಟಿಗೊಬ್ಬ 3’ ಸಿನಿಮಾದಲ್ಲಿ ಸುದೀಪ್​ ಜೊತೆ ‘ಪಟಾಕಿ ಪೋರಿಯೋ..’ ಹಾಡಿನಲ್ಲಿ ಆಶಿಕಾ ರಂಗನಾಥ್​ ಹೆಜ್ಜೆ ಹಾಕಿದ್ದು, ಆ ಸಿನಿಮಾದ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಇದನ್ನೂ ಓದಿ:

ಲಾಕ್‌ಡೌನ್‌ ಬ್ರೇಕ್​ನಲ್ಲಿ ನಟ ಉಪ್ಪಿ ತಮ್ಮ ಪ್ರೀತಿಯ ತೋಟದಲ್ಲಿ ಬದನೆಕಾಯಿ ಬೆಳೆದರು!

ಉಪೇಂದ್ರ ರೆಸಾರ್ಟ್​ ಕಟ್ಟಿದ್ದು ರೈತರ ಭೂಮಿಯಲ್ಲಾ? ಆರೋಪಕ್ಕೆ ರಿಯಲ್ ಸ್ಟಾರ್​ ಖಡಕ್​ ಉತ್ತರ