
ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಹಾಗೂ ಅಪರೂಪದ ಕಾಂಬಿನೇಷನ್ ಒಂದಾಗುತ್ತಿದೆ. ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಹಾಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ನಟಿ ರುಕ್ಮಿಣಿ ವಸಂತ್ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ‘ಮಂಗಳಗೌರಿ’ ಎಂದು ಹೆಸರಿಡಲಾಗಿದೆ. ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ಚಿತ್ರತಂಡ ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೈಟಲ್ ಬಿಡುಗಡೆ ಮಾಡಿದೆ.
ಪೋಸ್ಟರ್‌ನಲ್ಲಿ ರುಕ್ಮಿಣಿ ವಸಂತ್ ಪೊಲೀಸ್ ಅಧಿಕಾರಿಯ ಗೆಟಪ್‌ನಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಪಕ್ಕದಲ್ಲೇ ಲಗೇಜ್ ಸೂಟ್‌ಕೇಸ್ ಹಿಡಿದು ನಿಂತಿರುವ ಮಾಲಾಶ್ರೀ ಮಾಸ್ ಲುಕ್ ನೀಡಿದ್ದಾರೆ. ಪೋಸ್ಟರ್ ಹಿನ್ನೆಲೆಯಲ್ಲಿ ‘ಲಕ್ನೋ’ ಎಂದು ಕಾಣಿಸಿದೆ. ಇಬ್ಬರ ನಡುವಿನ ಜುಗಲ್ಬಂದಿ ಸಿನಿಮಾದಲ್ಲಿ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ.
ಈ ಚಿತ್ರವನ್ನು ‘ಸಕುಟುಂಬ ಸಮೇತ’ ಸಿನಿಮಾ ಖ್ಯಾತಿಯ ರಾಹುಲ್ ಪಿ.ಕೆ ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಹೇಮಂತ್ ಎಂ. ರಾವ್ ಅವರ ದಾಕ್ಷಾಯಣಿ ಟಾಕೀಸ್ ಜಂಟಿಯಾಗಿ ಈ ಬಿಗ್ ಬಜೆಟ್ ಚಿತ್ರವನ್ನು ನಿರ್ಮಿಸುತ್ತಿವೆ. ರಾಹುಲ್ ಪಿ.ಕೆ ಮತ್ತು ಪೂಜಾ ಸುಧೀರ್ ಈ ಸಿನಿಮಾಗೆ ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.
ಚಿತ್ರಕ್ಕೆ ಮಿಥುನ್ ಮುಕುಂದನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣ ಹಾಗೂ ವಿಶಾಲ್ ಕೃಷ್ಣಮೂರ್ತಿ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ವಿಕ್ರಮ್ ಮೋರ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ನಟನೆಯಲ್ಲಿ ಮಾಲಾಶ್ರೀ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಮಿಂಚಲಿದ್ದಾರೆ.
ಇದನ್ನೂ ಓದಿ: ‘ಟಾಕ್ಸಿಕ್’ ಬೋಲ್ಡ್ ದೃಶ್ಯಕ್ಕೆ ರುಕ್ಮಿಣಿ ವಸಂತ್ ಟ್ರೋಲ್: ನಟಿಯ ಬೆಂಬಲಕ್ಕೆ ನಿಂತ ಫ್ಯಾನ್ಸ್
ಇಬ್ಬರು ವಿಭಿನ್ನ ತಲೆಮಾರಿನ ನಟಿಯರು ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗುತ್ತಿರುವುದು ಪ್ರೇಕ್ಷಕರಿಗೆ ರೋಮಾಂಚನ ತಂದಿದೆ. ಪೋಸ್ಟರ್ ರಿಲೀಸ್ ಆದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ. ಈ ಸಿನಿಮಾದ ಚಿತ್ರೀಕರಣ ಅಪ್ಡೇಟ್ನ ಶೀಘ್ರವೇ ನೀಡಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.