
ಬೆಂಗಳೂರು ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ನಗರ. ಸ್ಟಾರ್ಟಪ್ ಎಪಿಸೆಂಟರ್, ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ದೇಶದ ಅತ್ಯುತ್ತಮ ವಾತಾವರಣ ಹೊಂದಿರುವ ನಗರಗಳಲ್ಲಿ ಒಂದು. ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು. ಬೆಂಗಳೂರು ಅವಕಾಶಗಳ ನಗರ, ದೇಶ, ವಿದೇಶದ ಹಲವಾರು ಜನ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡಿದ್ದಾರೆ. ಬೆಂಗಳೂರಿಗೆ ಹಿರಿಮೆಯನ್ನು, ಗರಿಮೆಯನ್ನು ಸಾರುವ ಹಲವು ವಿಷಯಗಳು ಇವೆ. ಆದರೆ ಇತ್ತೀಚೆಗೆ ಕೆಲ ಪರಭಾಷೆ ಸಿನಿಮಾಗಳು ಅದರಲ್ಲೂ ವಿಶೇಷವಾಗಿ ಮಲಯಾಳಂ ಸಿನಿಮಾಗಳು ಬೆಂಗಳೂರನ್ನು ಡ್ರಗ್ಸ್ ನಗರವಾಗಿ ತೋರಿಸುತ್ತಿದೆ. ಬೆಂಗಳೂರಿನ ತೇಜೋವಧೆ ಮಾಡುವ ಪ್ರಯತ್ನದಲ್ಲಿ ನಿರತವಾಗಿದ್ದು, ಈ ಬಗ್ಗೆ ತೀವ್ರ ಆಕ್ಷೇಪ ಬೆಂಗಳೂರಿಗರಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.
ಇತ್ತೀಚೆಗೆ ಬಿಡುಗಡೆ ಆದ ‘ಲೋಕಃ’ ಸಿನಿಮಾನಲ್ಲಿ ಬೆಂಗಳೂರಿನ ಮಹಿಳೆಯರ ಬಗ್ಗೆ ಅವಾಚ್ಯ ಪದ ಬಳಸಲಾಗಿತ್ತು ಇದರ ವಿರುದ್ಧ ಟಿವಿ9 ವರದಿ ಪ್ರಕಟಿಸಿದ ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿ ನಿರ್ಮಾಣ ಸಂಸ್ಥೆ ಕ್ಷಮೆ ಯಾಚನೆ ಮಾಡಿತು. ಆದರೆ ಅದೇ ಸಿನಿಮಾನಲ್ಲಿ ಬೆಂಗಳೂರು ನಶೆ ಮಾಡುವವರ ಸ್ವರ್ಗ ಎಂಬಂತೆ ತೋರಿಸಲಾಗಿದೆ. ‘ಲೋಕಃ’ ಮಾತ್ರವಲ್ಲ ಮಲಯಾಳಂನ ಇನ್ನೂ ಕೆಲವು ಸಿನಿಮಾಗಳದ್ದು ಇದೇ ಕತೆ.
‘ಲೋಕಃ’ ಸಿನಿಮಾದ ಕತೆ ನಡೆಯುವುದು ಬೆಂಗಳೂರಿನಲ್ಲಿ ಈ ನಗರದಲ್ಲಿ ಗಾಂಜಾ ಎಲ್ಲೆಂದರಲ್ಲಿ ಸಿಗುತ್ತದೆ, ಮಾದಕ ವಸ್ತುಗಳ ನಗರ ಎಂಬಂತೆ ಸಿನಿಮಾನಲ್ಲಿ ತೋರಿಸಲಾಗಿದ್ದು, ಮಲಯಾಳಿ ಮೂಲದ ಯುವತಿಯೊಬ್ಬಾಕೆ ತನ್ನ ಅತೀಂದ್ರಿಯ ಶಕ್ತಿಗಳನ್ನು ಬಳಸಿ ವಿಲನ್ಗಳ ವಿರುದ್ಧ ಹೋರಾಡುವ ಕತೆಯನ್ನು ‘ಲೋಕಃ’ ಸಿನಿಮಾ ಒಳಗೊಂಡಿದೆ.
ಇದನ್ನೂ ಓದಿ:‘ಲೋಕಃ’ ಸಿನಿಮಾ ಭರ್ಜರಿ ಕಲೆಕ್ಷನ್, ಲಾಭವನ್ನು ಹಂಚಲು ಮುಂದಾದ ನಿರ್ಮಾಪಕ
ಮಲಯಾಳಂನದ್ದೇ ಆದ ‘ಆಫಿಸರ್ ಆನ್ ಡ್ಯೂಟಿ’ ಸಿನಿಮಾದಲ್ಲಿಯೂ ಸಹ ಇದೇ ಕತೆ ಇದೆ. ಆ ಸಿನಿಮಾದಲ್ಲಿಯೂ ಸಹ ಬೆಂಗಳೂರನ್ನು ಡ್ರಗ್ಸ್ ಕೋರರ ನಗರವಾಗಿ ತೋರಿಸಲಾಗಿತ್ತು. ಅದಕ್ಕೆ ಮುಂಚೆ ಬಂದಿದ್ದ ‘ಆವೇಶಂ’ ಸಿನಿಮಾ ಬೆಂಗಳೂರಿನ ಪಿಜಿಗಳಲ್ಲಿ ವಿದ್ಯಾರ್ಥಿಗಳಿಗೆ ಮದ್ಯ, ಮಾದಕ ವಸ್ತುಗಳು ಸುಲಭವಾಗಿ ಸಿಗುತ್ತವೆ ಎಂಬಂತೆ ತೋರಿಸಲಾಗಿತ್ತು. ಒಟ್ಟಾರೆ ಮಲಯಾಳಂ ಸಿನಿಮಾಗಳಲ್ಲಿ ಬೆಂಗಳೂರನ್ನು ಒಂದು ರೀತಿ ಫನ್ ನಗರ, ಪಾರ್ಟಿ ನಗರದಂತೆಯೇ ಹೆಚ್ಚಾಗಿ ತೋರಿಸಲಾಗಿದೆ.
ಮಲಯಾಳಂ ಸಿನಿಮಾಗಳು ಮಾತ್ರವಲ್ಲ, ಕನ್ನಡದ್ದೇ ಆದ ‘ಭೀಮ’ ಸಿನಿಮಾನಲ್ಲಿಯೂ ಸಹ ಬೆಂಗಳೂರನ್ನು ಡ್ರಗ್ಸ್ ಕೋರರ ನಗರವಾಗಿ ತೋರಿಸಲಾಗಿತ್ತು. ಆದರೆ ದುನಿಯಾ ವಿಜಯ್, ಆ ಸಿನಿಮಾವನ್ನು ಯುವಜನರ ಮೇಲಿನ ಕಾಳಜಿಯಿಂದಾಗಿಯೇ ಮಾಡಿದ್ದಾಗಿ ಹೇಳಿದ್ದರು. ಬೆಂಗಳೂರಿನ ಈ ತೇಜೋವಧೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ